ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ; ಸಿದ್ದರಾಮಯ್ಯ ಕಿವಿಮಾತು

ಅಧ್ಯಕ್ಷರಾದವರು, ಪಿಡಿಒ ಹಿಂದೆ ಹೋಗ್ಬೇಡಿ. ಪಿಡಿಒ ನಿಮ್ಮ ಹಿಂದೆ ಇರಬೇಕು. ನೀವೂ ಯಜಮಾನ ತರಹ ಇರಬೇಕು. ಪಿಡಿಒ ಯಜಮಾನನಾಗಬಾರದು. ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ ಎಂದು ಕಿವಿ ಮಾತು ಹೇಳಿದರು. 

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬಾಗಲಕೋಟೆ (ಜ.04): ಇನ್ನೆರಡು ವರ್ಷ ಕಾಯಿರಿ ನಮ್ಮದೇ ಸರ್ಕಾರ ಬರುತ್ತೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಹೋದ ಚುನಾವಣೆಯಲ್ಲೇ ನಾವು ಅಧಿಕಾರಕ್ಕೆ ಬರಬೇಕಿತ್ತು, ಏನೇನೋ ಕಾರಣಕ್ಕೆ ಅಧಿಕಾರಕ್ಕೆ ಬರಲಿಕ್ಕೆ ಆಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಖಂಡಿತ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೆ ಎಂದು ಬಾದಾಮಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಾದಾಮಿ ಪಟ್ಟಣದ ಪಿಡಬ್ಲ್ಯೂಡಿ ಆವರಣದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಅಭಿನಂದನಾ ಸಮಾರಂಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ ಸರಿಯಾಗಿ ಅನುದಾನ ಬರ್ತಿದ್ಯಾ. ನಾನು ಸುಳ್ಳು ಹೇಳ್ತಿಲ್ಲ. ಗ್ರಾಮ ಪಂಚಾಯಿತಿಗೆ  ಯಡಿಯೂರಪ್ಪ ಒಂದು ರೂಪಾಯಿ ಕೊಟ್ಟಿಲ್ಲ. 7ಕೆಜಿ ಅಕ್ಕಿ ಕೊಡುತ್ತಿದ್ದೆವು. ಈಗ 7ಕೆಜಿಯಿಂದ 5ಕೆಜಿಗೆ ಇಳಿಸಿದ್ದಾರೆ‌‌. ಯಡಿಯೂರಪ್ಪ ಅವರ ಮನೆಯಿಂದ ಕೊಡ್ತಿದ್ರಾ‌. ಯಾಕೆ ಅಕ್ಕಿ ಕಡಿಮೆ ಕೊಡ್ತಿದ್ದೀರಿ ಯಡಿಯೂರಪ್ಪ ಎಂದು ಪ್ರಶ್ನೆ ಮಾಡಿ, ನಾವು ಮತ್ತೆ ಅಧಿಕಾರಕ್ಕೆ ಬಂದರೆ 10ಕೆಜಿ ಅಕ್ಕಿ ಕೊಡ್ತೀವಿ ಎಂದರು.

ಕಾಯಕವೇ ಕೈಲಾಸ ಎನ್ನುವುದರಲ್ಲಿ ಕಾಂಗ್ರೆಸ್ ನಂಬಿಕೆ ಇಟ್ಟುಕೊಂಡಿದೆ. ನಾನು ಜಾರಿ ಮಾಡಿದ ಯೋಜನೆ ನಿಲ್ಲಿಸಿದ್ದಾರೆ. ಇಂದಿರಾ ಕ್ಯಾಂಟಿನ್ ನಿಲ್ಲಿಸಲು ಹೊರಟಿದ್ದಾರೆ. ಮಕ್ಕಳಿಗೆ ಹಾಲು, ಶೂ, ಸಮವಸ್ತ್ರ ಕೊಟ್ಟಿದ್ದು ಬಿಜೆಪಿನಾ. ವಿದ್ಯಾಸಿರಿ, ಕೃಷಿ ಭಾಗ್ಯ ಈಗ ಇದ್ಯಾ! ಎಂದು ಪ್ರಶ್ನಿಸಿದರು. ಬಿಜೆಪಿಯವರು ಯಾವಾತ್ತಾದರೂ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಿದ್ದು ಇದ್ರೆ ತೋರಿಸಿ‌. ಸಾಲಮನ್ನಾ ಮಾಡಿದ್ದು ಕಾಂಗ್ರೆಸ್. ಮಾನ ಮರ್ಯಾದೆ, ಲಜ್ಜೆಗೆಟ್ಟವರು. ಪಟ್ಟದಕಲ್ಲು ಗ್ರಾಮ ಸ್ಥಳಾಂತರಕ್ಕೆ ತೀರ್ಮಾನ ಮಾಡಿದ್ದಾರೆ. ಅದನ್ನು ಬಿಟ್ಟು ಉಳಿದ ಗ್ರಾಮ ಸ್ಥಳಾಂತರಿಸಿಲ್ಲ. ಪ್ರವಾಹದ ಬಗ್ಗೆ ಮೂರು ತಾಸು ಮಾತನಾಡಿದ್ದೇನೆ‌. ನಾನು ಮುಖ್ಯಮಂತ್ರಿ ಆಗಿದ್ದಾಗ 1800 ಕೋಟಿ ರೈತರಿಗೆ ಪರಿಹಾರ ಕೊಟ್ಟೇ. ಬಿಜೆಪಿಯವರು ರೈತರಿಗೆ ಬೆಳೆ ಪರಿಹಾರ ಕೊಟ್ಟಿದ್ದಾರಾ? ರೈತರಿಗೆ ಏನು ಮಾಡಿದ್ದಾರೆ ಹೇಳಿ ನೋಡೋಣ? ಹಸಿರು ಶಾಲು ಹಾಕಿಕೊಂಡು ನಾನು ರೈತನ ಮಗ ಅಂತಾರೆ. ನಾವ್ಯಾರ ಮಕ್ಕಳು. ನಾನು ಅಸೆಂಬ್ಲಿಯೊಳಗೆ, ಹೊರಗೆ ರಾಜಕೀಯ ಭಾಷಣದಲ್ಲಿ ನೂರಕ್ಕೆ ನೂರು ಸತ್ಯ ಹೇಳ್ತೀನಿ. ಸತ್ಯ ಹೇಳಬೇಕು.ಇದೊಂದು ಕೆಟ್ಟ ಸರ್ಕಾರ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇನ್ನೇರಡು ವರ್ಷ ರಾಜ್ಯದಲ್ಲಿ ಗಬ್ಬೆಬ್ಬಿಸಿ ಬಿಡ್ತಾರೆ ಎಂದು ಹರಿಹಾಯ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ  ಚುನಾವಣೆಯಲ್ಲೂ ಆಪರೇಷನ್ ಕಮಲ ಮಾಡ್ತಾರೆ ಹುಷಾರಾಗಿರಿ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದಾರೆ. ಈ ಚುನಾವಣೆ  ಫಲಿತಾಂಶವೇ ಸೂಚನೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ನೂರಕ್ಕೆ ನೂರು ಅಧಿಕಾರಕ್ಕೆ ಬರುತ್ತೇ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಇನ್ನೂ ಮತ ಎಣಿಕೆ ಮುಗಿದಿರಲಿಲ್ಲ.ಆಗಲೇ ಶೇಕಡಾ 60ರಷ್ಟು  ಗ್ರಾಪಂ ಗೆದ್ದಿದ್ದೇವೆ ಎಂದು  ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಸುಳ್ಳು ಹೇಳಬಾರದು. ಇಡೀ ರಾಜ್ಯದಲ್ಲೇ ಕಾಂಗ್ರೆಸ್ ಕಾರ್ಯಕರ್ತರೇ ಗೆದ್ದಿರೋದು ಹೆಚ್ಚು. ಪಂಚಾಯತ್ ರಾಜ್ ವ್ಯವಸ್ಥೆ ಆರಂಭದಿಂದಲೂ ಕಾಂಗ್ರೆಸ್ ನವರೇ ಹೆಚ್ಚು ಗೆದ್ದಿದ್ದಾರೆ. ಬಿಜೆಪಿಯಲ್ಲ. ಬಾದಾಮಿಯಲ್ಲಿ ಕಾಂಗ್ರೆಸ್-340 ಸ್ಥಾನ, ಗುಳೇದಗುಡ್ಡ-156ಗಳಿವೆ,ಬಾದಾಮಿಯಲ್ಲಿ ಕಾಂಗ್ರೆಸ್ ಬೆಂಬಲಿತ -196, ಬಿಜೆಪಿ-148. ಗುಳೇದಗುಡ್ಡ ತಾಲೂಕಿನಲ್ಲಿ  ಕಾಂಗ್ರೆಸ್ ಬೆಂಬಲಿತ -92  ಬಿಜೆಪಿ-29, ಜೆಡಿಎಸ್ -1 ಗ್ರಾಪಂ ಪಾಲಾಗಿದೆ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಗೆದ್ದಿದ್ದಾರೆ ಎಂದರು.

ಬಿಜೆಪಿಯವರು ವಿಕೇಂದ್ರೀಕರಣ ವ್ಯವಸ್ಥೆ, ಮೀಸಲಾತಿ ಬಗ್ಗೆ ಯಾವಾಗ ಮಾತನಾಡಿದ್ದಾರೆ ತೋರಿಸಿ ನೋಡೋಣ. ಮಹಿಳೆಯರು ಶೇಕಡಾ 50ಕ್ಕಿಂತಲೂ ಹೆಚ್ಚು ಗ್ರಾಪಂ ನಲ್ಲಿ ಗೆದ್ದಿದ್ದಾರೆ. ಇದು ಹಳ್ಳಿ ಪಾರ್ಲಿಮೆಂಟ್. ಪಾರ್ಲಿಮೆಂಟ್ ಸುಲಭವಾಗಿ ಗೆಲ್ಲಬಹುದು. ಬಾಗಲಕೋಟೆ ಸಂಸದ P C ಗದ್ದಿಗೌಡರ ‌ಸುಲಭವಾಗಿ ಗೆಲ್ಲೋದಿಲ್ವಾ. ಗ್ರಾಮ ಸಭೆ ಪವರ್ ಫುಲ್. ವರ್ಷಕ್ಕೆ ಎರಡು ಬಾರಿ ಗ್ರಾಮ ಸಭೆ ಮಾಡಲೇಬೇಕು. ಗ್ರಾಮ ಸಭೆಯಲ್ಲೇ ಏನೇನು ಕಾಮಗಾರಿ, ಮನೆ ಹಂಚಿಕೆ ಸೇರಿದಂತೆ ಅಭಿವೃದ್ಧಿ ಕಾರ್ಯ ತೀರ್ಮಾನ ವಾಗಬೇಕು. ಪಾರದರ್ಶಕವಾಗಿ ನಡೆಯೋದು ಗ್ರಾಮ ಪಂಚಾಯಿತಿಯಲ್ಲಿ. ಕೆಲವೊಂದು ಕಡೆ ಆಗ್ದೇ ಇರಬಹುದು. ಅಧ್ಯಕ್ಷರಾದವರು, ಪಿಡಿಒ ಹಿಂದೆ ಹೋಗ್ಬೇಡಿ. ಪಿಡಿಒ ನಿಮ್ಮ ಹಿಂದೆ ಇರಬೇಕು. ನೀವೂ ಯಜಮಾನ ತರಹ ಇರಬೇಕು. ಪಿಡಿಒ ಯಜಮಾನನಾಗಬಾರದು. ಮಹಿಳಾ ಸದಸ್ಯರ ಬದಲಿಗೆ ಗಂಡಂದಿರು ದರ್ಬಾರ್ ಮಾಡೋಕೆ ಹೋಗ್ಬೇಡಿ ಎಂದು ಕಿವಿ ಮಾತು ಹೇಳಿದರು. ಮಹಿಳೆಯರಿಗೆ ಸ್ಥಳೀಯ ಸಂಸ್ಥೆಯಲ್ಲಿ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್,  ಬಿಜೆಪಿ ಅಲ್ಲ. ಯಡಿಯೂರಪ್ಪನನ್ನು ಕರೆದುಕೊಂಡು ಬಂದು ಕೇಳಿ ಎಂದರು.

ಇದನ್ನು ಓದಿ: ಶುಂಠಿ ಬೆಳೆಗೆ ಕೊಳೆ ರೋಗ, ರೈತರ ಗಾಯದ ಮೇಲೆ ಬರೆ

ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ವಾರ್ಡ್ ಚುನಾವಣೆಗೆ ಸ್ಪರ್ಧಿಸಿದರೆ ಗೆದ್ದು ಬರುವುದು ಕಷ್ಟ, ಅಂತಹುದರಲ್ಲಿ ನೀವೂ ಗೆದ್ದು ಬಂದಿದ್ದೀರಿ. ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚು ಸದಸ್ಯರು ಗೆದ್ದಿದ್ದಾರೆ ಎಂದರು.

ಸನ್ಮನಾ ಕಾರ್ಯಕ್ರಮ ಆರಂಭದ ವೇಳೆ  ಸಿದ್ದರಾಮಯ್ಯ ಎದುರಲ್ಲೇ ಕಿತ್ತಲಿ ಗ್ರಾಮ ಪಂಚಾಯಿತಿ ಸದಸ್ಯ ಸಂಗಣ್ಣ ಜಾಬಣ್ಣವರ, ಕಿತ್ತಲಿ ಗ್ರಾಮ ಪ್ರವಾಹ ಬಂದು ಮನೆ ಬಿದ್ದಿವೆ, ಮನೆ ಕಟ್ಟಿಕೊಳ್ಳಲು ಪರಿಹಾರ ಕೊಟ್ಟಿದ್ದಾರೆ. ಆದರೆ ಮತ್ತೆ ಪ್ರವಾಹ ಬಂದರೆ ಸಮಸ್ಯೆ. ಮನೆ ಸ್ಥಳಾಂತರಿಸಲು ಕ್ರಮಕೈಗೊಳ್ಳಬೇಕು. ಸಿದ್ದರಾಮಯ್ಯ ಸಾಹೇಬರು ಬಂದಾಗ ಪಿಡಿಓಗೆ ಹೇಳಿದರು. ಇನ್ನೂ ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರಕ್ಕೆ ಕಾಂಗ್ರೆಸ್ ಮುಖಂಡರು ಯಾರು ಬರಲಿಲ್ಲ. ನಾವೇ ಪ್ರಚಾರ ಮಾಡಿ ಗೆದ್ದು ಬಂದಿದ್ದೇವೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಗ್ರಾಮ ಪಂಚಾಯಿತಿ ಸದಸ್ಯ ಸಂಗಣ್ಣ ಜಾಬಣ್ಣವರ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಬಳಿಕ ಸಿದ್ದರಾಮಯ್ಯ ಸಂಗಣ್ಣ ಜಾಬಣ್ಣವರ ಅವರನ್ನು ತಳ್ಳಿ ಕೆಳಗೆ ಹೋಗುವಂತೆ ಮಾಡಿ, ಗೊಂದಲ ವಾತಾವರಣ ನಿವಾರಿಸಿದರು.
Published by:HR Ramesh
First published: