ಹಾವೇರಿ (ನ.30): ಇಷ್ಟ ಪಟ್ಟು ಪ್ರೀತಿಸಿದ ಹುಡುಗಿಯನ್ನೇ ಮನೆಯವರ ಮನವೊಲಿಸಿ ಮದುವೆಯಾದವನೇ ಈಗ ಆಕೆಯ ಪ್ರಾಣ ತೆಗೆದಿದ್ದಾನೆ. ಪ್ರೀತಿಯ ಹೆಂಡತಿಯನ್ನೇ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ ಬಳಿಕ ನೇರವಾಗಿ ಪೊಲೀಸರಿಗೆ ಶರಣಾಗಿದ್ದಾನೆ. ಜಿಲ್ಲೆಯ ರಾಣೇಬೆನ್ನೂರು ನಗರದ ಮಾರುತಿ ಬಡಾವಣೆಯ ನಿವಾಸಿ ನವೀನ್ ಎಂಬಂತಾನೇ ಈ ಕೊಲೆ ಆರೋಪಿ. ಕಳೆದ ಒಂಭತ್ತು ವರ್ಷಗಳಿಂದ ನೇತ್ರಾವತಿ ಜೊತೆಯಲ್ಲಿ ಸಂಸಾರ ನಡೆಸುತ್ತಿದ್ದ. ಇವರ ಪ್ರೀತಿ ಕುರುಹಾಗಿ ಎರಡು ಮಕ್ಕಳು ಕೂಡ ಇದ್ದಾರೆ. ಬಾರ್ ನಡೆಸುತ್ತಿದ್ದ ನವೀನ್ ನೇತ್ರಾವತಿ ಸುಖವಾಗಿಯೇ ಜೀವನ ನಡೆಸುತ್ತಿದ್ದರು. ಇವರ ಮಧ್ಯೆ ಯಾವುದೇ ಬಿರುಕು ಇರಲಿಲ್ಲ. ಸಣ್ಣಪುಟ್ಟ ಜಗಳ ಬಂದರೂ ಪ್ರೀತಿಯಿಂದ ಇರುತ್ತಿದ್ದ. ಈತ ಕೊಲೆ ಮಾಡಿದ್ದಾನೆ ಎಂಬುದನ್ನು ನಂಬಲು ಅಸಾಧ್ಯ ಎನ್ನುತ್ತಿದ್ದಾರೆ. ಸಂಬಂಧಿಕರು.
ಇನ್ನು ಕೊಲೆ ಘಟನೆ ತಿಳಿಯುತ್ತಿದ್ದಂತೆ ದಿಗ್ಭ್ರಮೆ ವ್ಯಕ್ತಪಡಿಸಿರುವ ನೇತ್ರಾವತಿ ಕುಟುಂಬಸ್ಥರು ಆತನಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಮೃತ ನೇತ್ರಾವತಿ ಕುಟುಂಬದ ಆರೋಪದಂತೆ ನೇತ್ರಾವತಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಳಂತೆ. ಇದರಿಂದಾಗಿ ಆರೋಪಿ ನವೀನ್ ಮಕ್ಕಳನ್ನು ಕೂಡ ಹೆಂಡತಿ ಹತ್ತಿರ ಬಿಡುತ್ತಿರಲಿಲ್ಲ. ಆಕೆಯ ಆರೋಗ್ಯ ಸಮಸ್ಯೆಯಿಂದಲೇ ನವೀನ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಇತ್ತ ಸದ್ಯ ಪೊಲೀಸರ ವಶದಲ್ಲಿರುವ ನವೀನ್ ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಈ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆದರೆ, ಈ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಒಟ್ಟಿನಲ್ಲಿ ಕ್ಷುಲಕ ಕಾರಣವೊಂದಕ್ಕೆ ಹೆಂಡತಿಯನ್ನು ಈತ ಕೊಲೆ ಮಾಡಿದ್ದಾನೋ ಅಥವಾ ಗಂಡ -ಹೆಂಡತಿ ನಡುವಿನ ವಿರಾಸ ಕೊಲೆ ಮಾಡಲು ಪ್ರೇರಿಪಿಸಲು ಕಾರಣ ಏನು ಎಂಬುದು ಆರೋಪಿ ಬಾಯ್ಬಿಟ್ಟಗಲೇ ತಿಳಿಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ