ರಾಯಚೂರು: ರಾಯಚೂರು ಹಾಗು ಯಾದಗಿರಿ ಜಿಲ್ಲೆ ವ್ಯಾಪ್ತಿಯ ರಾಯಚೂರು ವಿಶ್ವವಿದ್ಯಾಲಯ ಮಂಜೂರಾಗಿ ನಾಲ್ಕು ವರ್ಷವಾದರೂ ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಮಧ್ಯೆ ನಾಲ್ಕು ವರ್ಷಗಳಲ್ಲಿ ಇಬ್ಬರು ವಿಶೇಷಾಧಿಕಾರಿ ನೇಮಿಸಿದ್ದರೂ ವಿಶ್ವವಿದ್ಯಾಲಯ ಆರಂಭಕ್ಕೆ ವಿಧಾನಸಭೆಯಲ್ಲಿ ವಿವಿ ಕಾಯ್ದೆ ತಿದ್ದುಪಡಿ ವಿಳಂಬವಾಗಿತ್ತು. ಮೊದಲು ಸುಗ್ರಿವಾಜ್ಞೆ ಮುಖಾಂತರ ವಿವಿ ಆರಂಭಕ್ಕೆ ಒಪ್ಪಿಗೆ ನೀಡಿ ಇತ್ತೀಚೆಗಷ್ಟೇ ಸರಕಾರದಿಂದ ನೋಟಿಫಿಕೇಷನ್ ಆಗಿದೆ. ನಂತರ ವಿವಿ ಆರಂಭಕ್ಕೆ ಚಾಲನೆ ಸಿಕ್ಕಿದೆ. ಈ ಮಧ್ಯೆ ರಾಯಚೂರು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಡಾ. ಹರೀಶ ರಾಮಸ್ವಾಮಿ ನೇಮಕವಾಗಿ 100 ದಿನಗಳಾಗಿದ್ದು, ಈಗ ನೂತನ ವಿವಿ ಆರಂಭಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಲಬುರಗಿ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿರುವ ರಾಯಚೂರು ಹಾಗು ಯಾದಗಿರಿ ಜಿಲ್ಲೆಯ 224 ಕಾಲೇಜುಗಳ ವ್ಯಾಪ್ತಿಯ ರಾಯಚೂರು ವಿಶ್ವವಿದ್ಯಾಲಯದಲ್ಲಿ ಜೆನೆಟಿಕ್ ತಂತ್ರಜ್ಞಾನದ ಬಯೋ ಮೆಡಿಕಲ್ ಕೋರ್ಸ್ ಸೇರಿ 27 ಕೋರ್ಸ್ ಗಳೊಂದಿಗೆ ಇದೇ ಶೈಕ್ಷಣಿಕ ವರ್ಷದಿಂದ ರಾಯಚೂರು ವಿವಿ ಆರಂಭವಾಗಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ಸರಕಾರದಿಂದ ಮಂಜೂರಾತಿ ದೊರೆಯಬೇಕಾಗಿದೆ ಎಂದು ರಾಯಚೂರು ವಿವಿ ಕುಲಪತಿ ಡಾ ಹರೀಶ ರಾಮಸ್ವಾಮಿ ತಿಳಿಸಿದರು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಯಚೂರು ವಿಶ್ವವಿದ್ಯಾಲಯದ ಕ್ಯಾಂಪಸ್ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದಿಂದ 600 ಕೋಟಿ ರೂಪಾಯಿ ಅನುದಾನ ಬೇಕಿದೆ ಎಂದು ಬೇಡಿಕೆ ಸಲ್ಲಿಸಲಾಗಿದೆ. ಈ ಬಜೆಟ್ ನಲ್ಲಿ ಕನಿಷ್ಠ 100 ಕೋಟಿ ರೂಪಾಯಿಯಾದರೂ ದೊರೆಯುವ ಭರವಸೆ ಇದೆ ಎಂದು ಹೇಳಿದರು.
ಇದನ್ನೂ ಓದಿ: Crime News: ಅನೈತಿಕ ಸಂಬಂಧ ಹಿನ್ನೆಲೆ ಹತ್ಯೆ ಪ್ರಕರಣ; ಕಾಡಿನಲ್ಲಿ ವ್ಯಕ್ತಿಯ ಶವ ಪತ್ತೆ, ಮೂವರ ಬಂಧನ!
ಕ್ಯಾಂಪಸ್ ನಿರ್ಮಾಣದ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ, ಸಮುದಾಯದಿಂದ ಹಾಗೂ ಜನಪ್ರತಿನಿಧಿಗಳಿಂದ ಸಕಾರಾತ್ಮಕ ಸ್ಪಂದನೆ ದೊರಕಿದೆ. ಕುಲಪತಿಯಾಗಿ ನೇಮಕವಾದ 100 ದಿನಗಳಲ್ಲಿ ಯಾವ ಕೆಲಸಗಳಾಗಿವೆ ಎಂಬುದನ್ನು ಹಂಚಿಕೊಳ್ಳುವ ಉದ್ದೇಶವಿದೆ. ಎಲ್ಲರಿಂದಲೂ ಸಲಹೆ ಪಡೆದು ಮಾದರಿ ಕ್ಯಾಂಪಸ್ ನಿರ್ಮಿಸಲಾಗುವುದು ಎಂದರು.
ಈ ವರ್ಷ ಕೋವಿಡ್ ಇರುವುದರಿಂದ ರಾಜ್ಯ ಸರ್ಕಾರದಿಂದ ಕನಿಷ್ಠ 100 ಕೋಟಿ ರೂಪಾಯಿ ಅನುದಾನ ಸಿಗುವ ನಿರೀಕ್ಷೆ ಇದೆ. ಅದರಲ್ಲಿ ಆಡಳಿತ ಭವನ, ಪಾಠದ ಕೋಣೆಗಳು, ವಸತಿಗಳು, ತಾತ್ಕಾಲಿಕ ನೇಮಕಾತಿಗಳನ್ನು ಮಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
ಇದಲ್ಲದೆ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ), ಆರ್ಟಿಪಿಎಸ್ ನಿಂದಲೂ ಸಹಕಾರ ಕೋರಲಾಗಿದೆ. ಬಯೋ ಮೆಡಿಕಲ್ ರೀಸರ್ಚ್ ಸೆಂಟರ್ ಸ್ಥಾಪಿಸಲು 57 ಕೋಟಿ ರೂಪಾಯಿ ಅನುದಾನವನ್ನು ಕೆಕೆಆರ್ಡಿಬಿಯಿಂದ ಕೇಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ನಂದಿ ಬೆಟ್ಟಕ್ಕೆ ರೋಪ್ ವೇ ಅಳವಡಿಕೆ ಕನಸು ನನಸು; 10 ಕೋಟಿ ವೆಚ್ಚದಲ್ಲಿ ಕಾಮಗಾರಿ: ಸಚಿವ ಕೆ.ಸುಧಾಕರ್
ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅಗತ್ಯ ಸಹಕಾರ ಸಿಗುತ್ತಿದ್ದು, ಈಗಾಗಲೇ ಪ್ರತ್ಯೇಕ ಹಣಕಾಸು ಖಾತೆ ನಿರ್ವಹಣೆ ಆರಂಭಿಸುವುದಕ್ಕೆ ಒಪ್ಪಿಗೆ ನೀಡಿದೆ. ಈ ಮೊದಲು ರಾಜ್ಯ ಸರ್ಕಾರವು ರಾಯಚೂರು ವಿಶ್ವವಿದ್ಯಾಲಯಕ್ಕಾಗಿ ನೀಡಿದ್ದ 2.24 ಕೋಟಿ ರೂಪಾಯಿ ಅನುದಾನವನ್ನು ಗುಲಬರ್ಗಾ ವಿಶ್ವವಿದ್ಯಾಲಯದವರು ಕೊಡುತ್ತಿದ್ದಾರೆ. ಮಾರ್ಚ್ ಅಂತ್ಯದೊಳಗೆ ಪ್ರತ್ಯೇಕವಾಗುವ ಪ್ರಕ್ರಿಯೆಗಳೆಲ್ಲ ಮುಗಿಯಲಿವೆ ಎಂದು ಹೇಳಿದರು.
ಮುಂದಿನ ಶೈಕ್ಷಣಿಕ ವರ್ಷದಿಂದ ರಾಯಚೂರು ವಿಶ್ವವಿದ್ಯಾಲಯದಿಂದ 25 ಕೋರ್ಸ್ಗಳನ್ನು ಆರಂಭಿಸಲಾಗುವುದು. ಅದಕ್ಕೆ ಬೇಕಾಗುವ ಪ್ರಾದ್ಯಾಪಕರು ಪ್ರತಿ ವಿಭಾಗಕ್ಕೂ ಒಬ್ಬರು ಪ್ರೊಫೆಸರ್, ಇಬ್ಬರು ರೀಡರ್ಸ್ ನೇಮಕದ ಅಗತ್ಯವಿದೆ. ಈ ಕುರಿತು ಸರಕಾರದ ಮಾರ್ಗಸೂಚಿ ಅನ್ವಯ ಕೆಲಸ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ