ಪುತ್ತೂರು; ನಗರದ ಹೊರವಲಯದ ಕಬಕ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಕ್ಕರಾಜೆ ಬೈಪದವು ಎಂಬಲ್ಲಿನ ರುಕ್ಮ ಹಾಗೂ ಶಾಂತಿ ಎಂಬ ದಂಪತಿಗಳ ಕರುಣಾಜನಕ ಕತೆ ಇದು.
ಹಿರಿಯರಿಂದ ಬಳುವಳಿಯಾಗಿ ಬಂದ ಭೂಮಿಯನ್ನು ರುಕ್ಮ ಹಾಗೂ ಆತನ ಅಣ್ಣನಿಗೆ ಪಾಲು ಮಾಡಲಾಗಿತ್ತು. ಆದರೆ ತಮ್ಮನಿಗೆ ಅಣ್ಣನ ಜಾಗದಲ್ಲಿ ಇರುವ ಮುರುಕಲು ಜೋಪಡಿ ನೀಡಲಾಗಿತ್ತು. ಸರಿಯಾಗಿ ಕಾಲು ಚಾಚಿ ಮಲಗಲು ಸಾಧ್ಯವಿಲ್ಲದ ಕೋಳಿಗೂಡಿನಂತಿರುವ ಈ ಜೋಪಡಿಯಲ್ಲಿ ಮಳೆಯ ದೆಸೆಯಿಂದ ತಪ್ಪಿಸಿಕೊಳ್ಳಲು ಸೋಗೆ ಮತ್ತು ಪ್ಲಾಸ್ಟಿಕ್ ಹಾಕಿ ಮುಚ್ಚಲಾಗಿದೆ. ಗಾಳಿ ಬಂದರೆ ಮೇಲ್ಛಾವಣಿ ಹಾರಿ ಹೋಗುವ ಸ್ಥಿತಿಯಲ್ಲಿದೆ. ಈ ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಈ ಕುಟುಂಬ ಬದುಕುತ್ತಿದೆ. ಆದರೆ ಇದೀಗ ಅಣ್ಣ ಆ ಮನೆಯಿಂದಲೂ ಹೊರ ಹೋಗುವಂತೆ ಒತ್ತಾಯಿಸುತ್ತಿದ್ದಾರೆ. ಮುರುಕಲು ಮನೆಯಿಂದ ಹೊರ ಹೋದಲ್ಲಿ ಈ ಕುಟುಂಬ ಬೀದಿಪಾಲಾಗಿದೆ. ಕನಿಷ್ಠ ಮನೆಗಾದರೂ ಸ್ವಲ್ಪ ಜಾಗಕೊಡಿ ಎಂದರೆ ಅಣ್ಣನ ಕುಟುಂಬ ಅದಕ್ಕೆ ತಯಾರಾಗಿಲ್ಲ. ಈ ಕಾರಣದಿಂದ ಮನೆಯನ್ನು ಕಳೆದುಕೊಂಡಿರುವ ರುಕ್ಮ ಬದುಕು ಈಗ ಬೀದಿಗೆ ಬಿದ್ದಿದೆ.
ಈ ದಂಪತಿಗಳಿಗೆ ಮೂರೂವರೆ ವರ್ಷದ ಮಗಳಿದ್ದು, ವರ್ಷದ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಬಂದ ಬಳಿಕ ಆಕೆಗೆ ಎರಡೂ ಕಾಲುಗಳಲ್ಲಿ ಶಕ್ತಿ ಇಲ್ಲದಂತಾಗಿತ್ತು. ಆಟವಾಡಿಕೊಂಡು ಇರಬೇಕಾದ ಪುಟಾಣಿ ನಡೆದಾಡಲೂ ಸಾಧ್ಯವಾಗದೆ ಹಾಸಿಗೆ ಮೇಲೆ ಮಲಗಿದ್ದಾಳೆ. ಈಕೆಗೆ ಮದ್ದು ಮಾಡಲು ಪೋಷಕರ ಬಳಿ ದುಡ್ಡಿಲ್ಲ. ರುಕ್ಮ ಕೂಲಿ ಮಾಡಿ ಸಿಗುವ ಹಣ ಊಟಕ್ಕೂ ಸಾಕಾಗುವುದಿಲ್ಲ. ಅತ್ತ ಮನೆಯಿಲ್ಲ. ಇತ್ತ ಮಗಳ ಆರೋಗ್ಯ ಸರಿಯಿಲ್ಲ. ಮಗುವನ್ನು ನೋಡಿಕೊಳ್ಳುವ ಸಲುವಾಗಿ ಹೆಂಡತಿ ಕೆಲಸಕ್ಕೆ ಹೋಗುವಂತಿಲ್ಲ. ಸರ್ಕಾರದ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದ್ದರೂ ಈ ಮಗುವಿಗೆ ಸಿಗಬೇಕಾದ ಆರ್ಥಿಕ ಸೌಲಭ್ಯವೂ ಸಿಕ್ಕಿಲ್ಲ. ಇಂತಹ ಸ್ಥಿತಿಯಲ್ಲಿ ಬದುಕುವುದು ಹೇಗೆ ಎಂಬ ಪ್ರಶ್ನೆ ಈ ಕುಟುಂಬದ ಮುಂದೆ ಬೃಹದಾಕಾರವಾಗಿ ನಿಂತಿದೆ. ಕೋಳಿಗೂಡಿನ ಮನೆಯಲ್ಲಿರುವ ಈ ಕುಟುಂಬಕ್ಕೆ ಯಾವುದೇ ಮೂಲ ಸೌಕರ್ಯಗಳಿಲ್ಲ. ಶೌಚಾಲಯವಿಲ್ಲ. ಕುಡಿಯುವ ನೀರಿಲ್ಲ. ವಿದ್ಯುತ್ ವ್ಯವಸ್ಥೆ ಇಲ್ಲ. ಎಲ್ಲದಕ್ಕಿಂತ ಮೊದಲು ಸೂರೇ ಇಲ್ಲ.
ಇದನ್ನು ಓದಿ: ಗ್ರಹಣದ ದಿನ ಚಾಮುಂಡಿಬೆಟ್ಟ, ನಂಜನಗೂಡು ದೇವಾಲಯ ಮುಚ್ಚಲಿವೆ; ಆದರೆ ಈ ವೇಳೆ ಚಾಮುಂಡಿ, ವಿಷಕಂಠನಿಗೆ ನಡೆಯಲಿದೆ ವಿಶೇಷ ಪೂಜೆ
ಈ ಕುಟುಂಬದ ಪರಿಸ್ಥಿತಿ ಸ್ಥಳೀಯ ಕಬಕ ಗ್ರಾಪಂ ವ್ಯವಸ್ಥೆಗೂ ಅರಿವಾಗಿದೆ. ಹೇಗಾದರೂ ಮಾಡಿ ಈ ಕುಟುಂಬಕ್ಕೊಂದು ಸೂರು ನೀಡಬೇಕು ಎನ್ನುವ ಪ್ರಯತ್ನ ನಡೆಸಿದ್ದರೂ, ಮನೆ ನೀಡಲು ಬೇಕಾದ ದಾಖಲೆಗಳು ಸದ್ಯ ಈ ಕುಟುಂಬದ ಬಳಿ ಇಲ್ಲ. ಆದರೂ ಬಡಕುಟುಂಬದ ಪಕ್ಕದಲ್ಲಿರುವ ಡೀಸಿ ಮನ್ನಾ ಭೂಮಿಯಲ್ಲಿ ಈ ಕುಟುಂಬಕ್ಕೆ 5 ಸೆಂಟ್ಸ್ ನೀಡಿ ಮನೆ ನೀಡಲು ಗ್ರಾಪಂ ಮುಂದಾಗಿದೆ. ಆದರೆ ಸ್ಥಳೀಯ ವ್ಯಕ್ತಿಯೊಬ್ಬರು ಈ ಭೂಮಿಗೆ ಹೋಗುವ ದಾರಿಗೆ ಬೇಲಿ ಹಾಕಿ ತಡೆ ಒಡ್ಡಿದ್ದಾರೆ. ಈ ಕುಟುಂಬಕ್ಕೆ ಮನೆ ನೀಡಲು ಗ್ರಾಪಂ ಈಗಾಗಲೇ ರೂ.1.40 ಲಕ್ಷ ಅನುದಾನ ಮಂಜೂರು ಮಾಡಿದ್ದರೂ ಈ ತನಕ ಜಾಗವೇ ಸಿಕ್ಕಿಲ್ಲ. ಈ ನಡುವೆ ಕೆಲವು ಸಂಘಟನೆಗಳು ರುಕ್ಮ ಅವರ ಅಣ್ಣನ 3 ಎಕರೆಯಲ್ಲಿ 5 ಸೆಂಟ್ಸ್ ಸ್ಥಳವನ್ನು ದಾನಪತ್ರದ ಮೂಲಕ ಪಡೆಯಲು ಪ್ರಯತ್ನ ನಡೆಸಲಾಗಿತ್ತು. ಆದರೆ ಇದಕ್ಕೂ ಸ್ಪಂದನೆ ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಅವರಿಗೆ ನಿವೇಶನಕ್ಕಾಗಿ ಮನವಿ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ