ಚಿಕ್ಕಮಗಳೂರು(ಸೆಪ್ಟೆಂಬರ್. 22): ಮಲೆನಾಡಿನಲ್ಲಿ ಮಳೆ ಪ್ರಮಾಣ ತಗ್ಗಿದ್ದರೂ ಕೂಡ ಬೀಸುತ್ತಿರುವ ಬಿರುಗಾಳಿ ವೇಗಕ್ಕೆ ಬೃಹತ್ ಗಾತ್ರದ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜಾವಳಿ ಸಮೀಪದ ನಡೆದಿದೆ. ಸೋಮವಾರ ಮಧ್ಯಾಹ್ನದಿಂದಲೂ ಮಲೆನಾಡಿನಲ್ಲಿ ಮಳೆ ಪ್ರಮಾಣ ಕುಂಠಿತಗೊಂಡಿದೆ. ಆದರೆ, ಗಾಳಿಯ ಅಬ್ಬರ ಹೆಚ್ಚಾಗಿದೆ. ನಿನ್ನೆ ಸಂಜೆಯಿಂದ ಮೂಡಿಗೆರೆ ತಾಲೂಕಿನಲ್ಲಿ ಭಾರೀ ಗಾಳಿ ಬೀಸುತ್ತಿದ್ದು, ಬೀಸುತ್ತಿರುವ ರಣಗಾಳಿಯನ್ನ ಕಂಡು ಜನ ಕಂಗಾಲಾಗಿದ್ದಾರೆ. ನಿನ್ನೆ ರಾತ್ರಿಯಿಂದಲೂ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್, ನಿಡುವಾಳೆ, ಜಾವಳಿ ಸೇರಿದಂತೆ ಸುತ್ತಮುತ್ತ ಭಾರೀ ಗಾಳಿ ಬೀಸುತ್ತಿದ್ದು. ಇಂದು ಬೆಳಗ್ಗಿನ ಜಾವ ಜಾವಳಿ ಬಳಿ ಬೃಹತ್ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದೆ. ಇದರಿಂದ ಸುಮಾರು ಎರಡು ಗಂಟೆಗಳ ಕಾಲ ಕೊಟ್ಟಿಗೆಹಾರ-ಜಾವಳಿ-ಕಳಸ-ಹೊರನಾಡು ಸಂಪರ್ಕ ಸಂಪೂರ್ಣ ಬಂದ್ ಆಗಿತ್ತು. ಮಲೆನಾಡಲ್ಲಿ ಬೀಸುತ್ತಿರುವ ರಣ ಗಾಳಿ ಸ್ಥಳೀಯರಲ್ಲಿ ಮತ್ತೊಂದು ಆತಂಕ ತಂದೊಡ್ಡಿದೆ.
ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಗಾಳಿ ಅಬ್ಬರ ಮಲೆನಾಡಿಗರ ನಿದ್ದೆಗೆಡಿಸಿದೆ. ಆದರೆ, ಶೃಂಗೇರಿ, ಮೂಡಿಗೆರೆ ತಾಲೂಕಿನ ಕಳಸ, ಕುದುರೆ ಮುಖ, ಕೆರೆಕಟ್ಟೆ ಸೇರಿದಂತೆ ಘಟ್ಟ ಪ್ರದೇಶಗಳಲ್ಲಿ ಮಳೆ ಸುರಿಯುತ್ತಿದ್ದು ನಾಡಿನ ಜೀವನದಿಗಳಾದ ತುಂಗಾ-ಭದ್ರ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಆದರೆ, ಮಲೆನಾಡು ಭಾಗದಲ್ಲಿ ಬೀಸುತ್ತಿರುವ ಗಾಳಿ ಮಲೆನಾಡಿಗರನ್ನ ಆತಂಕಕ್ಕೆ ತಂದೊಡ್ಡಿದೆ.
ಕರಾವಳಿಯಲ್ಲಿ ಮಳೆ ಕೊಂಚ ಇಳಿಮುಖ
ಕರಾವಳಿಯಲ್ಲಿ ನಿರಂತರ ಸುಳಿಯುತ್ತಿದ್ದ ಮಳೆ ಇದೀಗ ಕೊಂಚ ಇಳಿಮುಖವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಮಳೆ ಸುರಿಯುವ ಪರಿಣಾಮ ಕೊಂಚ ಕಡಿಮೆಯಾಗಿದ್ದು, ಇಂದು ಮುಂಜಾನೆಯಿಂದ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನ ಭಾರೀ ಸಂಕಷ್ಟವನ್ನು ಅನುಭವಿಸುವಂತಾಗಿತ್ತು. ಮಂಗಳೂರು ಹೊರವಲಯದ ಸುರತ್ಕಲ್, ಇಡ್ಯಾ, ಚೇಳಾರು, ಹೊಸಬೆಟ್ಟು, ಕಿನ್ನಿಗೋಳಿ ಭಾಗದಲ್ಲಿ ನೂರಕ್ಕೂ ಮಿಕ್ಕಿದ ಮನೆಗಳು ಜಲಾವೃತಗೊಂಡಿತ್ತು. ಆದರೆ ಇದೀಗ ಮಳೆ ಸುರಿಯುವುದು ನಿಂತ ಪರಿಣಾಮ ಜಲಾವೃತಗೊಂಡಿದ್ದ ಮನೆಗಳು ಜಲ ದಿಗ್ಭಂಧನದಿಂದ ಮುಕ್ತವಾಗಿದೆ.
ಇದನ್ನೂ ಓದಿ : ಫೆಬ್ರವರಿಯಲ್ಲೇ ಕೇಂದ್ರ ಸರಿಯಾದ ಕ್ರಮ ಕೈಗೊಂಡಿದ್ದರೆ ಕೊರೋನಾ ಇಷ್ಟು ಹರಡುತ್ತಿರಲಿಲ್ಲ: ಸಿದ್ದರಾಮಯ್ಯ
ಮುಂಜಾಗ್ರತಾ ಕ್ರಮವಾಗಿ ಹೊಸಬೆಟ್ಟು ಪರಿಸರದ ಏಳು ಮನೆ ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು, ಇದೀಗ ಮನೆ ಮಂದಿ ಮತ್ತೆ ಮನೆ ಸೇರಿದ್ದಾರೆ. ಹವಾಮಾನ ಇಲಾಖೆಯ ವರದಿ ಪ್ರಕಾರ ಜಿಲ್ಲೆಯಲ್ಲಿ ಇಂದು ಕೂಡಾ ಭಾರೀ ಮಳೆಯಾಗುವ ಸೂಚನೆಯಿದ್ದು, ರೆಡ್ ಅಲರ್ಟ್ ಘೋಷಿಸಲಾಗಿತ್ತು. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆಯನ್ನೂ ನೀಡಲಾಗಿದೆ. ಮಳೆ ಕಡಿಮೆಯಾದರೂ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳು ತುಂಬಿ ಹರಿಯುತ್ತಿದೆ.
ಕೊಡಗಿನಲ್ಲಿ ಕ್ಷೀಣಿಸಿದ ಮಳೆ
ಕಳೆದ ನಾಲ್ಕು ದಿನಗಳ ಕಾಲ ಕೊಡಗು ಜಿಲ್ಲೆಯಾದ್ಯಂತ ಸುರಿದಿದ್ದ ಧಾರಾಕಾರ ಮಳೆ ಇಂದು ಬಹುತೇಕ ಕ್ಷೀಣಿಸಿದೆ. ಮಡಿಕೇರಿ ತಾಲ್ಲೂಕು, ಬಾಗಮಂಡಲ ಮತ್ತು ತಲಕಾವೇರಿ ಸುತ್ತಮುತ್ತ ಆಗೊಮ್ಮೈ ಈಗೊಮ್ಮೆ ತುಂತುರು ಮಳೆ ಬರುತ್ತಿದೆ. ಇದು ಬಿಟ್ಟರೆ ಉಳಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ನಿಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ