ಮತ್ತೆ ಕೃಷ್ಣಾ ನದಿ ತೀರದಲ್ಲಿ ಪ್ರವಾಹ ಭೀತಿ, ಬಸವಸಾಗರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ...!

ನದಿ ತೀರದ ಬಂಡೆಗಲ್ಲುಗಳ‌ ಮೇಲೆ ಕುಳಿತು ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಳ ಮೇಲೆ ಕುರಿಗಾಹಿ ನಿಗಾ ವಹಿಸಿದ್ದಾನೆ. ಈಗ 89 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಮತ್ತೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನದಿ ತೀರದ ಜನರು ಜಿಲ್ಲಾಡಳಿತದ ಎಚ್ಚರಿಕೆಯನ್ನು ಪಾಲನೆ ಮಾಡಬೇಕಾಗಿದೆ.

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಟ್ಟಿರುವುದು.

ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಹರಿಬಿಟ್ಟಿರುವುದು.

  • Share this:
ಯಾದಗಿರಿ: ನಿನ್ನೆ ತಾನೆ ಕೃಷ್ಣಾ ನದಿ ನೀರಿನ ಹರಿವಿನ ಪ್ರಮಾಣ ಇಳಿಮುಖವಾದ ಹಿನ್ನೆಲೆ ಕೃಷ್ಣಾ ನದಿ ಪಾತ್ರದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈಗ ಮತ್ತೆ ಕೃಷ್ಣಾ ನದಿ ತನ್ನ ರೌದ್ರಾವತಾರ ತೊರುತ್ತಿದೆ. ಇದರಿಂದ ಮತ್ತೆ ಕೃಷ್ಣಾ ನದಿ ತೀರದ ಜನರು ಪ್ರವಾಹ ಭೀತಿಯಿಂದ ಆತಂಕಗೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಸುರಿದ ಮಳೆಗೆ ಯಾದಗಿರಿ ಜಿಲ್ಲೆಯ ಕೃಷ್ಣಾ ನದಿಯ ಪಾತ್ರದ ಜನರ ನಿದ್ದೆಗೆಡಿಸಿದೆ. ಮಹಾರಾಷ್ಟ್ರದಿಂದ ನೀರಿನ ಒಳಹರಿವು ಹೆಚ್ಚಳವಾಗಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಸಮೀಪದಲ್ಲಿರುವ ಬಸವಸಾಗರ ಜಲಾಶಯದಿಂದ ಇಂದು ಸಂಜೆ ಕೃಷ್ಣಾ ನದಿಗೆ ಮತ್ತೆ 89 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಒಳಹರಿವು ಹೆಚ್ಚಳವಾದರೆ ಮತ್ತೆ ಜಲಾಶಯದಿಂದ 1 ಲಕ್ಷ 20 ಕ್ಯೂಸೆಕ್ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಜನರು ನದಿ ತೀರಕ್ಕೆ ತೆರಳಬಾರದೆಂದು ಈಗಾಗಲೇ ಜಲಾಶಯದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಬಸವಸಾಗರ ಜಲಾಶಯ 33.313 ಟಿಎಂಸಿ ಸಂಗ್ರಹ ಸಾಮರ್ಥ್ಯವಿದ್ದು, ಇಂದಿನ ನೀರಿನ‌ ಸಂಗ್ರಹವು 31.18 ಟಿಎಂಸಿ ಇದೆ. ಜಲಾಶಯಕ್ಕೆ ಈಗ 40 ಸಾವಿರ ಕ್ಯೂಸೆಕ್ ಒಳಹರಿವಿದೆ. ಆಗಸ್ಟ್ 6 ರಿಂದ 10 ರವರಗೆ 20 ಸಾವಿರ ಕ್ಯೂಸೆಕ್ ನಿಂದ 2 ಲಕ್ಷ 20 ಸಾವಿರ ಕ್ಯೂಸೆಕ್ ವರೆಗೆ ನೀರು ಬಿಡಲಾಗಿತ್ತು. ಇದರಿಂದ ನದಿ ಪಾತ್ರದ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗುವ ಜೊತೆ ನದಿ ತೀರದಲ್ಲಿ ರೈತರ ಐಪಿ ಸೆಟ್​ಗಳು ನೀರು ಪಾಲಾಗಿದ್ದವು. ಅದೇ ರೀತಿ ಜಲಾಶಯದ ಸಮೀಪದ ನಾರಾಯಣಪುರದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಓರ್ವ ಕುರಿಗಾಹಿ ಕೂಡ ಕುರಿಗಳ ಸಮೇತ ಸಿಲುಕಿದ್ದನು. ಎನ್​ಡಿಆರ್​​ಎಫ್ ತಂಡವು ಬೋಟ್ ಮೂಲಕ ಕುರಿಗಾಹಿ ಟೋಪಣ್ಣ ಅವರನ್ನು ಅಪಾಯದ ನಡುವೆಯು ರಕ್ಷಣೆ ಮಾಡಿದ್ದರು. ಆದರೆ, ಇನ್ನೂ ಕೃಷ್ಣಾ ನದಿಯಲ್ಲಿ ಹೆಚ್ಚು ನೀರು ‌ಹರಿಯುತ್ತಿರುವ‌ ಹಿನ್ನೆಲೆ ‌ಕುರಿಗಳು ನಡುಗಡ್ಡೆಯಲ್ಲಿ ಸಿಲುಕಿವೆ. ಜಲಾಶಯದಿಂದ ಹೊರ ಹರಿವು ಸ್ಥಗಿತಗೊಂಡರೆ ಕುರಿಗಳನ್ನು ಕರೆದುಕೊಂಡು ಬರುವ ಲೆಕ್ಕಾಚಾರದಲ್ಲಿ ಕುರಿಗಾಹಿ ಇದ್ದನು. ಆದರೆ, ಕೇವಲ ಒಂದು ದಿನ ಅಂದರೆ ನಿನ್ನೆ ತಾನೆ 13952 ಕ್ಯೂಸೆಕ್ ನೀರು ಜಲಾಶಯದಿಂದ ಬಿಡಲಾಗಿತ್ತು. ಮತ್ತೆ ಈಗ ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು ಈಗ ಕುರಿಗಾಹಿ ಕಣ್ಣೀರು ಹಾಕುವಂತಾಗಿದೆ.

ಇದನ್ನು ಓದಿ: ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಖಿಲ್ ಕುಮಾರಸ್ವಾಮಿ ಭೇಟಿ : ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಒದಗಿಸಲು ಆಗ್ರಹ

ನದಿ ತೀರದ ಬಂಡೆಗಲ್ಲುಗಳ‌ ಮೇಲೆ ಕುಳಿತು ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಳ ಮೇಲೆ ಕುರಿಗಾಹಿ ನಿಗಾ ವಹಿಸಿದ್ದಾನೆ. ಈಗ 89 ಸಾವಿರ ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಮತ್ತೆ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ನದಿ ತೀರದ ಜನರು ಜಿಲ್ಲಾಡಳಿತದ ಎಚ್ಚರಿಕೆಯನ್ನು ಪಾಲನೆ ಮಾಡಬೇಕಾಗಿದೆ.
Published by:HR Ramesh
First published: