• Home
  • »
  • News
  • »
  • district
  • »
  • ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ಹುಬ್ಬಳ್ಳಿ ಜನರಿಗೆ ನಿತ್ಯ ವಿವಿಧ ಮಾಲಿನ್ಯಗಳ ಕಿರಿಕಿರಿ

ಸ್ಮಾರ್ಟ್ ಸಿಟಿ ಕಾಮಗಾರಿ ಹೆಸರಲ್ಲಿ ಹುಬ್ಬಳ್ಳಿ ಜನರಿಗೆ ನಿತ್ಯ ವಿವಿಧ ಮಾಲಿನ್ಯಗಳ ಕಿರಿಕಿರಿ

ಹುಬ್ಬಳ್ಳಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಸದ್ದು

ಹುಬ್ಬಳ್ಳಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಸದ್ದು

ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡುವ ದೃಷ್ಟಿಯಿಂದ ಸ್ಥಳೀಯರು ಒಂದು ವರ್ಷದಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಸಹಿಸಿಕೊಂಡಿದ್ದರು. ಆದರೆ ಒಂದು ವರ್ಷ ಕಳೆದರೂ ವಿವೇಕಾನಂದ ನಗರದಲ್ಲಿ ಸಿಸಿ ರಸ್ತೆ ಮಾಡಿಲ್ಲ.

  • Share this:

ಹುಬ್ಬಳ್ಳಿ: ಸ್ಮಾರ್ಟ್‌ಸಿಟಿ ಯೋಜನೆಯ ಹೆಸರಲ್ಲಿ ಹುಬ್ಬಳ್ಳಿ ಜನರ ನಿದ್ದೆಗೆಡಿಸಲಾಗುತ್ತಿದೆ. ವಿವೇಕಾನಂದ ನಗರದ ಜನವಸತಿ ಪ್ರದೇಶದಲ್ಲಿ ಹಗಲು ರಾತ್ರಿಯೆನ್ನದೆ ನಿಯಮ ಬಾಹಿರವಾಗಿ ಕಾಂಕ್ರೀಟ್‌ ಮಿಕ್ಸಿಂಗ್‌ ಮಾಡಲಾಗುತ್ತಿದೆ. ಗೋಕುಲ ರಸ್ತೆಯಲ್ಲಿರುವ ವಿವೇಕಾನಂದ ನಗರದ ಖುಲ್ಲಾ ಜಾಗೆಯಲ್ಲಿ ಮರಳು, ಕಲ್ಲಿನ ಕಡಿ, ಸಿಮೆಂಟ್‌ ತಂದು ರಾಶಿ ಹಾಕಲಾಗಿದೆ. ಮಿಕ್ಸಿಂಗ್‌ ಯಂತ್ರ ಪ್ರತಿನಿತ್ಯ ದೊಡ್ಡ ಪ್ರಮಾಣದ ಕರ್ಕಶ ಶಬ್ದ ಮಾಡುತ್ತಿದೆ. ಸುತ್ತಲಿನ ಮನೆಗಳವರು ಕರ್ಕಶ ಶಬ್ದ ಕೇಳಿ ಕೇಳಿ ಕಂಗೆಟ್ಟಿದ್ದಾರೆ.

ಅಭಿವೃದ್ಧಿ ಕಾಮಗಾರಿಗೆ ಸಹಕಾರ ನೀಡುವ ದೃಷ್ಟಿಯಿಂದ ಸ್ಥಳೀಯರು ಒಂದು ವರ್ಷದಿಂದ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯವನ್ನು ಸಹಿಸಿಕೊಂಡಿದ್ದರು. ಆದರೆ ಒಂದು ವರ್ಷ ಕಳೆದರೂ ವಿವೇಕಾನಂದ ನಗರದಲ್ಲಿ ಸಿಸಿ ರಸ್ತೆ ಮಾಡಿಲ್ಲ. ಬದಲಾಗಿ ಆಕ್ಕಪಕ್ಕದ ವಾರ್ಡ್‌ಗಳಲ್ಲಿ ರಸ್ತೆ ಮಾಡಲು ಇಲ್ಲಿ ಕಾಂಕ್ರಿಟ್‌ ಮಿಕ್ಸಿಂಗ್‌ ಕೆಲಸ ಮಾಡಲಾಗುತ್ತಿದೆ. ಕಂಗೆಟ್ಟಿರುವ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಜಿಲ್ಲಾಧಿಕಾರಿಗಳು ವಾಯುಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ. ಪೊಲ್ಯೂಶನ್ ಕಂಟ್ರೋಲ್‌ ಬೋರ್ಡ್‌ನವರು ಸ್ಥಳ ಪರಿಶೀಲನೆ ಮಾಡಿದ್ದು, ಮಿಕ್ಸಿಂಗ್‌ ವಸ್ತುಗಳು ಮತ್ತು ಯಂತ್ರವನ್ನು ಜನವಸತಿ ಪ್ರದೇಶದಿಂದ ದೂರ ಇರಿಸುವಂತೆ ಸೂಚನೆ ನೀಡಿದ್ದಾರೆ. ಮಹಾನಗರ ಪಾಲಿಕೆಯಿಂದ ಮಿಕ್ಸಿಂಗ್‌ ಕೆಲಸಕ್ಕೆ ಬೇರೆಡೆ ಸ್ಥಳ ಮಂಜೂರು ಮಾಡಲಾಗಿದೆ. ಆದರೆ ಸ್ಮಾರ್ಟ್‌ಸಿಟಿ ಯೋಜನೆಯ ಇಂಜಿನಿಯರ್‌ ಮತ್ತು ಗುತ್ತಿಗೆದಾರರು ಯಾರ ಸೂಚನೆಗೂ ಕಿಮ್ಮತ್ತು ಕೊಡುತ್ತಿಲ್ಲ. ಕಡಿಮೆ ಖರ್ಚು ಮತ್ತು ಸ್ವಂತ ಲಾಭಕ್ಕಾಗಿ ಸ್ಥಳೀಯರಿಗೆ ಕಿರಿಕಿರಿ ಮಾಡುತ್ತಿದ್ದಾರೆ. ಯಾರ ಮನವಿಗೂ ಕ್ಯಾರೇ ಅನ್ನದೆ ತಮ್ಮಪಾಡಿಗೆ ತಾವು ನಿಯಮ ಬಾಹಿರವಾಗಿ ಕೆಲಸ ಮಾಡಿಸುತ್ತಿದ್ದಾರೆ.

ಇದನ್ನೂ ಓದಿ: ಬಂಡವಾಳ ಹೂಡಿಕೆಗಾಗಿ ಜಪಾನ್ ರಾಯಭಾರಿ ಜೊತೆ ಡಿಸಿಎಂ ಅಶ್ವಥ್ ನಾರಾಯಣ್ ಮಾತುಕತೆ

ಜನವಸತಿ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯ ಮಾಡಲಾಗುತ್ತಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಅನಾರೋಗ್ಯ ಪೀಡಿತರು ಸರಿಯಾಗಿ ಮಲಗಲು ಆಗುತ್ತಿಲ್ಲ. ವೃದ್ಧರು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಆತಂಕದಲ್ಲಿ ಜೀವನ ಕಳೆಯಬೇಕಾಗಿದೆ ಎಂದು ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸ್ಥಳೀಯ ನಿವಾಸಿ ಸಿದ್ದೇಶ್ವರ ಕಾರದಕಟ್ಟಿ ಎಂಬುವವರು ದೂರು ನೀಡಿದ್ದಾರೆ.ಆದರೆ ಪ್ರಭಾವಿಗಳು ತಕರಾರು ಹಿಂಪಡೆಯುವಂತೆ ಬೆದರಿಕೆ ಹಾಕುತ್ತಿದ್ದಾರೆ. ಸುಮ್ಮನಿರುವಂತೆ ಒತ್ತಡ ಹೇರಿ ಕೆಲಸ ಮುಂದುವರಿಸಿದ್ದಾರೆ ಎಂದು ಸಿದ್ದೇಶ್ವರ ಕಾರದಕಟ್ಟಿ ಆರೋಪಿಸಿದ್ದಾರೆ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು