ಭಯೋತ್ಪಾದಕರ ಬಂಧನದ ಅಣಕು ಪ್ರದರ್ಶನ ಮಾಡಿದ ಪೊಲೀಸರು : ನೈಜತೆ ಕಂಡು ಉಗ್ರರ ದಾಳಿ ಎಂದು ಗಾಬರಿಯಾದ ಹುಬ್ಬಳ್ಳಿ ಜನರು

ಪೊಲೀಸರು ಪೂರ್ವ ತಯಾರಿಯೊಂದಿಗೆ ಮಾಡಿದ್ದ ಈ ಅಣಕು ಪ್ರದರ್ಶನ ನೈಜತೆಯಿಂದ ಕೂಡಿದ್ದರಿಂದ ಜನರಲ್ಲಿ ಗೊಂದಲ ಸೃಷ್ಟಿಸಿತು. ಜನರು ಪೊಲೀಸರ ಕಾರ್ಯಾಚರಣೆ ಕಂಡು ಕೆಲಹೊತ್ತು ನಿಜವೇ ಅಂದುಕೊಂಡಿದ್ದರು

ಅಣುಕು ಪ್ರದರ್ಶನ

ಅಣುಕು ಪ್ರದರ್ಶನ

  • Share this:
ಹುಬ್ಬಳ್ಳಿ(ಆಗಸ್ಟ್​ 23): ಉಪನಗರ ಠಾಣೆ ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಭಯೋತ್ಪಾದಕರನ್ನು ಬಂಧಿಸುವ ಅಣಕು ಪ್ರದರ್ಶನ ಮಾಡಿದ್ದಾರೆ. ನಗರದ ಹಳೇ ಬಸ್ ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲಿ ಜನಜಾಗ್ರತಿಗಾಗಿ ಅಣಕು ಪ್ರದರ್ಶನ ನಡೆಸಿದ್ದಾರೆ. ಮುಖಗವಸು ಧರಿಸಿ, ಸ್ಪೋಟಕದ ಬ್ಯಾಗ್ ಬೆನ್ನಿಗೆ ಏರಿಸಿಕೊಂಡು ವಿಮಾನ ನಿಲ್ದಾಣಕ್ಕೆ ಭಯೋತ್ಪಾದಕರು ನುಗ್ಗುತ್ತಾರೆ. ವಿಷಯ ತಿಳಿದು ಶಸ್ತ್ರಸಜ್ಜಿತರಾಗಿ ಸ್ಥಳಕ್ಕೆ ಪೊಲೀಸರು ದೌಡಾಯಿಸುತ್ತಾರೆ. ಭಯೋತ್ಪಾದಕರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ನಡೆದು ಓರ್ವ ಉಗ್ರನನ್ನು ಪೊಲೀಸರು ಹೊಡೆದುರುಳಿಸುತ್ತಾರೆ. ನಂತರ ಶವವನ್ನು ಅಂಬ್ಯುಲೆನ್ಸ್‌ಗೆ ಹಾಕಿಕೊಂಡು ಹೋಗುತ್ತಾರೆ. ಮತ್ತೋರ್ವ ಉಗ್ರನನ್ನು ಬಂಧಿಸಿ, ಶಸ್ತ್ರಾಸ್ತ್ರ ವಶಕ್ಕೆ ಪಡೆದು ಸ್ಪೋಟಕಗಳನ್ನು ನಿಷ್ಕ್ರಿಯಗೊಳಿಸುತ್ತಾರೆ. ಹೀಗೆ ನೈಜ ಘಟನೆಯಂತೆಯೇ ಪೊಲೀಸರು ಅಣಕು ಪ್ರದರ್ಶನ ಮಾಡಿದ್ದಾರೆ.

ನಂತರ ಹಳೇ ಬಸ್ ನಿಲ್ದಾಣದಲ್ಲಿ ಭಯೋತ್ಪಾದಕನೊಬ್ಬ ಬಸ್ ಹೈಜಾಕ್‌ಗೆ ಪ್ರಯತ್ನಿಸುತ್ತಿರುತ್ತಾನೆ ಸ್ಥಳಕ್ಕೆ ದಾವಿಸುವ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಸ್‌ನಿಂದ ಕೆಳಗೆ ಇಳಿಸುತ್ತಾರೆ. ಆತನ ಬಳಿಯಿದ್ದ ಸ್ಪೋಟಕಗಳನ್ನು ದೂರ ಎಸೆದು ಉಗ್ರನ ಕೈಗೆ ಬೇಡಿ ತೊಡಿಸುವ ನಂತರ ಉಗ್ರನನ್ನು ಬಂಧಿಸಿ ಜನರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ.

ಇಲ್ಲಿ ಭಯೋತ್ಪಾದಕನ ವೇಷ ತೊಟ್ಟವರೂ ಪೊಲೀಸರೇ. ದಾಳಿಗಳು ದಿಢೀರನೆ ನಡೆದರೆ ತಾವು ಹೇಗೆ ಅಲರ್ಟ್ ಆಗಿರುತ್ತೇವೆ ಎನ್ನುವುದನ್ನು ಪೊಲೀಸರು ಈ ಪ್ರದರ್ಶನದ ಮೂಲಕ ಜನರಿಗೆ ತಿಳಿಸಿಕೊಟ್ಟಿದ್ದಾರೆ. ಮಾತ್ರವಲ್ಲ ಉಗ್ರರ ವಿರುದ್ಧ ಹೋರಾಡುವ ಚಾಕಚಕ್ಯತೆ, ಧೈರ್ಯ ಮತ್ತು ತರಬೇತಿ ಹೇಗಿದೆ ಎನ್ನುವುದನ್ನು ತೋರಿಸಿದ್ದಾರೆ. ಈ ಮೂಲಕ ಜನರಲ್ಲಿ ಸುರಕ್ಷತೆಯ ಭಾವನೆ ಮೂಡಿಸಲು ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ : ಕಾರವಾರದಲ್ಲಿ ಮಳೆ ಕಡಿಮೆಯಾದರೂ ನಿಲ್ಲದ ಗುಡ್ಡ ಕುಸಿತ : ಆತಂಕದಲ್ಲಿ ಅಸ್ನೋಟಿ ಗ್ರಾಮದ ಜನ

ಪೊಲೀಸರು ಪೂರ್ವ ತಯಾರಿಯೊಂದಿಗೆ ಮಾಡಿದ್ದ ಈ ಅಣಕು ಪ್ರದರ್ಶನ ನೈಜತೆಯಿಂದ ಕೂಡಿದ್ದರಿಂದ ಜನರಲ್ಲಿ ಗೊಂದಲ ಸೃಷ್ಟಿಸಿತು. ಜನರು ಪೊಲೀಸರ ಕಾರ್ಯಾಚರಣೆ ಕಂಡು ಕೆಲಹೊತ್ತು ನಿಜವೇ ಅಂದುಕೊಂಡಿದ್ದರು. ಇನ್ನು ಕೆಲವರು ದೃಶ್ಯಾವಳಿಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕಿದ್ದರು. ಅದಕ್ಕೆ ಕೆಲವರು ಹುಬ್ಬಳ್ಳಿಯಲ್ಲಿ ಉಗ್ರರ ಬಂಧನ ಎಂದು ಅಡಿಬರಹ ಬರೆದು ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ಗೆ ಅಪ್ಲೋಡ್ ಮಾಡಿದ್ದರು. ಇದರಿಂದ ಹುಬ್ಬಳ್ಳಿ - ಧಾರವಾಡದ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಅಣಕು ಪ್ರದರ್ಶನದ ವಿಡಿಯೋಗಳಿಂದ ತಪ್ಪು ಮಾಹಿತಿ ಹರಡುತ್ತಿದ್ದಂತೆ ಪೊಲೀಸರೇ ಸ್ಪಷ್ಟನೆ ನೀಡಬೇಕಾಯಿತು. ಭಯೋತ್ಪಾದಕ ಕೃತ್ಯಗಳ ಬಗ್ಗೆ ತಿಳಿವಳಿಕೆ ನೀಡಲು ಈ ರೀತಿ ಅಣಕು ಪ್ರದರ್ಶನ ಹಾಗೂ ಜನ ಜಾಗೃತಿ ಕಾರ್ಯಕ್ರಮ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಪ್ರಕಟನೆ ನೀಡಿ ಆತಂಕಕ್ಕೆ ತೆರೆ ಎಳೆಯಬೇಕಾಯಿತು.
Published by:G Hareeshkumar
First published: