ಮಹಾರಾಷ್ಟ್ರಕ್ಕೆ ಹೊರಟಿದ್ದ ವಲಸಿಗರಿಗೆ ಊಟೋಪಚಾರ-ಬಸ್ ವ್ಯವಸ್ಥೆ ಕಲ್ಪಿಸಿದ ಹುಬ್ಬಳ್ಳಿ ಅಧಿಕಾರಿಗಳು

ಅಧಿಕಾರಿಗಳ ಸೂಚನೆ ಮೇರೆಗೆ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಆರು ಬಸ್‌ಗಳನ್ನು ಕೂಡಲೆ ಸ್ಥಳಕ್ಕೆ ತರಿಸಿ ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಯಿತು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ್ ನಾಶಿ ಮತ್ತು ಎಸಿ ಮಹ್ಮದ್ ಜುಬೇರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಯಿತು.

news18-kannada
Updated:May 28, 2020, 10:18 PM IST
ಮಹಾರಾಷ್ಟ್ರಕ್ಕೆ ಹೊರಟಿದ್ದ ವಲಸಿಗರಿಗೆ ಊಟೋಪಚಾರ-ಬಸ್ ವ್ಯವಸ್ಥೆ ಕಲ್ಪಿಸಿದ ಹುಬ್ಬಳ್ಳಿ ಅಧಿಕಾರಿಗಳು
ಲಾರಿಯಲ್ಲಿ ಹೊರಟಿದ್ದ ವಲಸೆ ಕಾರ್ಮಿಕರು.
  • Share this:
ಹುಬ್ಬಳ್ಳಿ (ಮೇ 28); ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ಜಾನುವಾರುಗಳಂತೆ ಸಾಗಾಟ ಮಾಡುತ್ತಿದ್ದ ಎರಡು ಲಾರಿಗಳನ್ನು ಹುಬ್ಬಳ್ಳಿಯ ವರೂರು ಬಳಿ ತಡೆಯಲಾಗಿದ್ದು, ಅಧಿಕಾರಿಗಳೇ ಅವರಿಗೆ ಉತ್ತಮ ಊಟ ತಿಂಡಿ ಹಾಗೂ ಸಾರಿಗೆ ವ್ಯವಸ್ಥೆ ಮಾಡಿ ಕಳುಹಿಸಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಚಿತ್ರದುರ್ಗದಿಂದ ಮಹಾರಾಷ್ಟ್ರಕ್ಕೆ ಇಂದು ಎರಡು ಲಾರಿಗಳಲ್ಲಿ ಸುಮಾರು 184 ಕಾರ್ಮಿಕರನ್ನು ಸಾಗಾಟ ಮಾಡಲಾಗುತ್ತಿತ್ತು. ಮಹಿಳೆಯರು ಮಕ್ಕಳು ಸೇರಿದಂತೆ ವೃದ್ಧರನ್ನೂ ಸಹ ಲಾರಿಯಲ್ಲಿ ತುಂಬಲಾಗಿತ್ತು. ಬಳಲಿದ್ದ ವಲಸೆ ಕಾರ್ಮಿಕರನ್ನು ಲಾರಿಯಿಂದ ಕೆಳಗೆ ಇಳಿಸಿದ ಅಧಿಕಾರಿಗಳು ಆರೋಗ್ಯ ತಪಾಸಣೆ ಮಾಡಿಸಿ, ನಂತರ ನಂತರ ಊಟ ಮತ್ತು ನೀರಿನ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ಕಾರ್ಮಿಕರಿಗೆ ಮುಖಕ್ಕೆ ಮಾಸ್ಕ್ ಮತ್ತು ಸ್ಯಾನಿಟೈಜರ್‌ ಸಹ ನೀಡುವ ಮೂಲಕ ಮಾದರಿಯಾಗಿದ್ದಾರೆ.

ಅಧಿಕಾರಿಗಳ ಸೂಚನೆ ಮೇರೆಗೆ ಕೆಎಸ್‌ಆರ್‌ಟಿಸಿ ಸಾರಿಗೆ ಸಂಸ್ಥೆಯ ಆರು ಬಸ್‌ಗಳನ್ನು ಕೂಡಲೆ ಸ್ಥಳಕ್ಕೆ ತರಿಸಿ ವಲಸೆ ಕಾರ್ಮಿಕರನ್ನು ಊರಿಗೆ ತಲುಪಿಸಲು ವ್ಯವಸ್ಥೆ ಮಾಡಲಾಯಿತು. ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ ಪ್ರಕಾಶ್ ನಾಶಿ ಮತ್ತು ಎಸಿ ಮಹ್ಮದ್ ಜುಬೇರ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಯಿತು.

ಮಹಾರಾಷ್ಟ್ರ ರಾಜ್ಯದ ರಾಯಗಢ ಬಳಿಯ ಸುಧಾಗಡ ಪಾಲಿ ನಿವಾಸಿಗಳಾದ ವಲಸೆ ಕಾರ್ಮಿಕರು ತವರಿನತ್ತ ಮರಳಿದ್ದರು. ಇವರೆಲ್ಲ ಚಿತ್ರದುರ್ಗದ ಹಿರಿಯೂರು ಬಳಿ ಕಲ್ಲಿದ್ದಲು ಕೆಲಸದಲ್ಲಿ ತೊಡಗಿದ್ದವರು. ಕಳೆದ ಹಲವು ವರ್ಷಗಳಿಂದ ಅಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಲಾಕ್‌ಡೌನ್‌ ಘೋಷಣೆಯಾದ ನಂತರ ಊರಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.

ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಿತ್ತು. ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಅಶಕ್ತರಾಗಿ ಸಂಕಷ್ಟಕ್ಕೆ ಸಿಲುಕಿದ್ದರು. ಕೆಲಸ ಕೊಟ್ಟವರು ನಿಷ್ಕಾಳಜಿ ತೋರಿಸಿದ್ದರು. ಹೀಗಾಗಿ ಅವರಿವರ ಬಳಿ ಕಾಡಿಬೇಡಿ ಲಾರಿಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದ ಇವರು ಎರಡು ಲಾರಿಗಳಿಗೆ ತಾಡಪತ್ರಿಗಳನ್ನು ಕಟ್ಟಿ ನೆರಳಿನ ವ್ಯವಸ್ಥೆ ಮಾಡಿಕೊಂಡು ಊರತ್ತ ಪ್ರಯಾಣ ಬೆಳೆಸಿದ್ದರು.

ಸಾಮಾಜಿಕ ದೈಹಿಕ ಅಂತರವಿಲ್ಲದೆ ಒಬ್ಬರ ಮೇಲೊಬ್ಬರು ಕುಳಿತಿದ್ದರು. ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳನ್ನು ದಾಟಿದ ಲಾರಿಗಳು ಧಾರವಾಡ ಜಿಲ್ಲೆ ಪ್ರವೇಶಿಸುತ್ತಿದ್ದಂತೆ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದಿದೆ. ಹುಬ್ಬಳ್ಳಿಯ ವರೂರು- ಅಗಡಿ ರಸ್ತೆಯ ಬಳಿ ಲಾರಿಗಳನ್ನು ತಡೆದಿದ್ದಾರೆ. ಜಾನುವಾರುಗಳಂತೆ ವಲಸೆ ಕಾರ್ಮಿಕರನ್ನು ಸಾಗಿಸುತ್ತಿದ್ದ ಲಾರಿ ಚಾಲಕರ ವಿಚಾರಣೆ ನಡೆಸಿದ್ದಾರೆ.

ಈ ವೇಳೆ ಮಾನವೀಯ ದೃಷ್ಟಿಯಿಂದ ಎಲ್ಲರಿಗೂ ಒಂದೆಡೆ ಊಟ ಮತ್ತು ವಿಶ್ರಾಂತಿಯ ವ್ಯವಸ್ಥೆ ಮಾಡಿಸಿ, ನಂತರ ಸುರಕ್ಷಿತವಾಗಿ ಊರಿನತ್ತ ತೆರಳಲು ವ್ಯವಸ್ಥೆ ಕಲ್ಪಿಸಿದ್ದಾರೆ. ಹುಬ್ಬಳ್ಳಿ- ಧಾರವಾಡ ಅಧಿಕಾರಿಗಳ ತಂಡದ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ : ಜೂನ್ ಅಂತ್ಯದೊಳಗೆ ರಾಜ್ಯ ಸಂಪುಟ ವಿಸ್ತರಣೆ; ಹೆಚ್ಚುವರಿಯಾಗಿ ನಾಲ್ವರಿಗೆ ಸಚಿವ ಸ್ಥಾನ ಸಾಧ್ಯತೆ?
First published: May 28, 2020, 10:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading