ಹುಬ್ಬಳ್ಳಿಯಲ್ಲಿ ಕನ್ನಡ ನಾಮಫಲಕ ಹಾಕದ ಅಂಗಡಿಗಳಿಗೆ ಪಾಲಿಕೆ ಬಿಸಿ; ಫುಟ್​ಪಾತ್ ಅತಿಕ್ರಮಿಗಳಿಗೂ ಶಾಕ್

ಹಲವು ಬಾರಿ ನೋಟೀಸ್ ಕೊಟ್ಟರೂ ಲೆಕ್ಕಿಸದೇ ಕನ್ನಡ ನಾಮಫಲಕ ಹಾಕದ ಅಂಗಡಿಗಳಿಗೆ ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಅನ್ಯಭಾಷೆಯ ಫಲಕಗಳನ್ನ ಕಿತ್ತು ತೆಗೆದುಕೊಂಡು ಹೋಗಿದ್ಧಾರೆ.

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಿಬ್ಬಂದಿಯಿಂದ ಕನ್ನಡೇತರ ನಾಮಫಲಕಗಳ ತೆರವು ಕಾರ್ಯ

ಹುಬ್ಬಳ್ಳಿ-ಧಾರವಾಡ ಪಾಲಿಕೆ ಸಿಬ್ಬಂದಿಯಿಂದ ಕನ್ನಡೇತರ ನಾಮಫಲಕಗಳ ತೆರವು ಕಾರ್ಯ

  • Share this:
ಹುಬ್ಬಳ್ಳಿ: ಕನ್ನಡ ನಾಮಫಲಕ ಹಾಕದ ಅಂಗಡಿಗಳಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ಬಿಸಿ ಮುಟ್ಟಿಸಲಾಯಿತು. ಪಾಲಿಕೆ ಸಿಬ್ಬಂದಿ ಅನ್ಯಭಾಷಿಕ ನಾಮಫಲಕಗಳನ್ನು ತೆರವು ಮಾಡಿದರು. ಕನ್ನಡ ನಾಮಫಲಕ ಹಾಕದೇ ಇರುವ ಅಂಗಡಿಗಳ ಮೇಲೆ ದಾಳಿ ನಡೆಸಿ ಪರಭಾಷೆಯ ನಾಮಫಲಕಗಳನ್ನು ಕಿತ್ತೊಯ್ದರು‌. ಗೋಕುಲ್ ರಸ್ತೆ, ಕೊಪ್ಪಿಕರ ರಸ್ತೆಯಲ್ಲಿ ಭರ್ಜರಿ ಕಾರ್ಯಾಚರಣೆ ನಡೆಯಿತು. ಪಾಲಿಕೆಯ ಆರೋಗ್ಯಾಧಿಕಾರಿ ಶ್ರೀಧರ್ ದಂಡಪ್ಪನ್ನವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು. ನೋಟೀಸ್ ಜಾರಿ ಮಾಡಿದ್ದರೂ ಲಕ್ಷ್ಯ ವಹಿಸದ ಅಂಗಡಿಗಳಿಗೆ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ಕೊಟ್ಟರು. ಕನ್ನಡದಲ್ಲಿ ನಾಮಫಲಕ ಹಾಕುವಂತೆ ಖಡಕ್ ಸೂಚನೆ ನೀಡಿದರು.

ಫುಟ್​ಪಾತ್ ಅತಿಕ್ರಮಣಕಾರರ ತೆರವು: ಹುಬ್ಬಳ್ಳಿಯಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆಯೂ ನಡೆಯಿತು. ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ರು‌. ಮಧುರಾ ಕಾಲೋನಿ, ರಮೇಶ್ ಭವನ ರಸ್ತೆ, ಶಾಹ್‌ ಬಜಾರ್‌ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಿದ್ರು. ರಸ್ತೆ, ಫುಟ್‌ಪಾತ್ ಮತ್ತು ಪಾರ್ಕಿಂಗ್ ಜಾಗ ಒತ್ತುವರಿ ಮಾಡಿದ್ದವರಿಗೆ ಬಿಸಿ ಮುಟ್ಟಿಸಿದ್ರು. ಜನದಟ್ಟಣೆ ಪ್ರದೇಶದಲ್ಲಿದ್ದ ಡಬ್ಬಿ ಅಂಗಡಿ, ತಳ್ಳುಬಂಡಿ, ಚಾಟ್ ಸೆಂಟರ್‌ಗಳನ್ನು ಕಿತ್ತು ಹಾಕಿದ್ರು. ವಾಹನ ಸಂಚಾರ ಮತ್ತು ಜನರ ಓಡಾಟಕ್ಕೆ ಅಡ್ಡಿಯಾಗಿದ್ದ ಅಂಗಡಿಗಳನ್ನು ತೆಗೆದು ಬಯಲು ಮಾಡಿದ್ರು.

ಇದನ್ನೂ ಓದಿ: ಕೋಲಾರ ನಗರಸಭೆ ಸ್ಥಾಯಿ ಸಮಿತಿ ಚುನಾವಣೆ: ರಾತ್ರಿ 11ರವರೆಗೂ ಹೈಡ್ರಾಮಾ – ಕಾಂಗ್ರೆಸ್ ಕೈ ಹಿಡಿದ ಬಿಜೆಪಿ ಸದಸ್ಯರು

ಧರ್ಮೇಗೌಡರ ನಿಧನಕ್ಕೆ ಶೋಕ:

ಉಪ ಸಭಾಪತಿ ಎಸ್‌.ಎಲ್. ಧರ್ಮೇಗೌಡರ ನಿಧನಕ್ಕೆ ಹುಬ್ಬಳ್ಳಿಯಲ್ಲಿ ಜೆಡಿಎಸ್ ಮುಖಂಡರು ತೀವ್ರ ಸಂತಾಪ ಸೂಚಿಸಿದ್ದಾರೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ್ದಾರೆ.‌ ಧರ್ಮೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಿದ್ದಾರೆ.‌ ಮಾಜಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ರಾಜಣ್ಣ ಕೊರವಿ, ಸಿದ್ದಣ್ಣ ತೇಜಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಧರ್ಮೇಗೌಡರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದ್ರು. ಈ ವೇಳೆ ಧರ್ಮೇಗೌಡರನ್ನು ನೆನೆದು ಮಾಜಿ ಸಚಿವ ಎನ್.ಎಚ್. ಕೊನರಡ್ಡಿ ಭಾವುಕರಾಗಿದರು. ವಿಧಾನ ಪರಿಷತ್‌ನಲ್ಲಿ‌ ನಡೆದ ಘಟನೆಯಿಂದಾಗಿ ತುಂಬಾ ನೊಂದಿದ್ದರು. ಇದು ಆತ್ಮಹತ್ಯೆಯಲ್ಲ, ಕಗ್ಗೊಲೆ ಎಂದು ಕೊನರಡ್ಡಿ ನೋವಿನಿಂದ ನುಡಿದರು.

ಇದನ್ನೂ ಓದಿ: Grama Panchayath Election Results: ಗ್ರಾ.ಪಂ ಚುನಾವಣೆಯಲ್ಲಿ ಶೇ 85 ರಿಂದ 90 ಬಿಜೆಪಿ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ; ಬಿ.ಎಸ್.​ ಯಡಿಯೂರಪ್ಪ

ಬ್ರಿಟನ್ ವೈರಸ್ ಅಪ್​ಡೇಟ್:

ಧಾರವಾಡ ಜಿಲ್ಲೆಗೆ ಬ್ರಿಟನ್ ನಿಂದ ಈವರೆಗೆ 37 ಜನ ಹಿಂತಿರುಗಿದ್ದಾರೆ, ಅವರಲ್ಲಿ 36 ಜನರ ಕೊರೊನಾ ತಪಾಸಣೆ ವರದಿ ನೆಗೆಟಿವ್ ಬಂದಿದೆ. ಇನ್ನೊಬ್ಬರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅವರ ಇಂದು ಸಂಪರ್ಕಕ್ಕೆ ಸಿಗುವ ನಿರೀಕ್ಷೆ ಇದೆ. ತಕ್ಷಣ ಅವರನ್ನು ಕೂಡ ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ರೂಪಾಂತರ ಹೊಂದಿದ ವೈರಸ್  ಕೂಡ ಮುಂಜಾಗ್ರತಾ ಕ್ರಮದಿಂದಲೇ ನಿಯಂತ್ರಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದು ಅತ್ಯಗತ್ಯ ಎಂದು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

ಕುಂದುಕೊರತೆ ಸಭೆ: ಡಿಸೆಂಬರ್ 31ರಂದು, ಅಂದರೆ ಗುರುವಾರದಂದು ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಸಾರ್ವಜನಿಕ ಕುಂದು ಕೊರತೆ ಸಭೆ ಆಯೋಜಿಸಲಾಗಿದೆ. ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ‌ ಆದೇಶದಂತೆ ಹುಬ್ಬಳ್ಳಿ ತಹಶೀಲ್ದಾರರು ಎಲ್ಲಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಾರ್ವಜನಿಕರು ಕುಂದು ಕೊರತೆ ಸಲ್ಲಿಸಬಹುದು ಎಂದು ತಿಳಿಸಲಾಗಿದೆ.

ವರದಿ: ಪರಶುರಾಮ ತಹಶೀಲ್ದಾರ
Published by:Vijayasarthy SN
First published: