ಹುಬ್ಬಳ್ಳಿ : ಹುಬ್ಬಳ್ಳಿ – ಧಾರವಾಡ (Hubballi Dharwada) ಮಹಾನಗರ ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಮಹಾನಗರ ಪಾಲಿಕೆ ಚುನಾವಣೆ (Corporation Election) ಭಿನ್ನಮತ ಭುಗಿಲೇಳುವಂತೆ ಮಾಡಿದೆ. ನಾಮಪತ್ರ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬಂಡಾಯ ಬೂದಿ ಮುಚ್ಚಿದ ಕೆಂಡವಾಗಿ ಮಾರ್ಪಟ್ಟಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬಂಡಾಯದ ಬಿಸಿ ತಟ್ಟಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಬಂಡಾಯ ಕಸಿವಿಸಿಯುಂಟು ಮಾಡಿದೆ. ಅದರಲ್ಲಿಯೂ ಆಡಳಿತಾರೂಢ ಬಿಜೆಪಿಗೆ ಅತೃಪ್ತರು ದೊಡ್ಡ ತಲೆನೋವಾಗಿ ಪರಿಣಮಿಸಿದ್ದಾರೆ.
ಟಿಕೆಟ್ ಸಿಗದವರು ಪಕ್ಷೇತರರಾಗಿ ಸ್ಪರ್ಧೆ ಮಾಡಿ, ಬಂಡಾಯದ ಬಾವುಟ ಹಾರಿಸಿದ್ದಾರೆ. ಹತ್ತಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 7 – 8 ವಾರ್ಡ್ ಗಳಲ್ಲಿ ಕಾಂಗ್ರೆಸ್ ಗೆ ಬಂಡಾಯ ಅಭ್ಯರ್ಥಿಗಳ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವದ ಕೊರತೆ ಕಂಡು ಬಂದರೆ, ಬಿಜೆಪಿಗೆ ನಾಯಕರ ಸ್ವ ಪ್ರತಿಷ್ಠೆ ಮುಳುವಾಗಿ ಪರಿಣಮಿಸ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲ 82 ವಾರ್ಡ್ ಗಳಲ್ಲಿಯೂ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಿದ್ದಾರೆ.
ಆದರೆ ಕಾಂಗ್ರೆಸ್ ನಿಂದ ಎರಡು ವಾರ್ಡ್ ಗಳಲ್ಲಿ ಇಬ್ಬಿಬ್ಬರಿಗೆ ಬಿ ಫಾರಂ ನೀಡಿ ಅಚ್ಚರಿಯ ನಡೆ ಅನುಸರಿಸಿದೆ. ಸ್ವತಃ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಪುತ್ರನಿಗೆ ಟಿಕೆಟ್ ನೀಡಿರೋ ವಾರ್ಡ್ ನಲ್ಲಿಯೇ ಮತ್ತೊಬ್ಬರಿಗೆ ಬಿ ಫಾರಂ ನೀಡಲಾಗಿದೆ. 71ನೇ ವಾರ್ಡ್ ನಲ್ಲಿ ಮಹ್ಮದ್ ಹಳ್ಳೂರ ಹಾಗೂ ಗಣೇಶ್ ಟಗರಗುಂಟಿ ಇಬ್ಬರಿಗೂ ಬಿ ಫಾರಂ ನೀಡಲಾಗಿದೆ. ಬಂಡಾಯಗಾರರನ್ನು ಶಮನ ಮಾಡಲಾರದ ಅಸಹಾಯಕತೆ ಕಾಂಗ್ರೆಸ್ ನಾಯಕರದ್ದಾಗಿದೆ. ಎರಡು ವಾರ್ಡ್ ಗಳಿಗೆ ಇಬ್ಬಿಬ್ಬರಿಗೆ ಬಿ ಫಾರಂ ನೀಡಿರೋದು ಯಾರ ಮೇಲೆ ಯಾರಿಗೂ ನಿಯಂತ್ರಣ ಇಲ್ಲ ಅನ್ನೋದಕ್ಕೆ ಸಾಕ್ಷಿಯಾಗಿದೆ.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಿಎಂ ರೇಸ್ ನಲ್ಲಿದ್ದ ಅರವಿಂದ ಬೆಲ್ಲದ್ ಯಾರಿಂದಲೂ ಬಂಡಾಯ ಅಭ್ಯರ್ಥಿಗಳ ಆಕ್ರೋಶವನ್ನು ತಣಿಸಲಾಗಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಬಿಟ್ಟು ನಿನ್ನೆ, ಮೊನ್ನೆ ಬಂದವರಿಗೆ ಟಿಕೆಟ್ ನೀಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಮಾಜಿ ಮೇಯರ್, ಉಪ ಮೇಯರ್, ಎರಡು, ಮೂರು ಬಾರಿ ಮೆಂಬರ್ ಆದವರಿಗೆ ಟಿಕೆಟ್ ಭಾಗ್ಯ ಸಿಕ್ಕಿಲ್ಲ. ನಮ್ಮ ಕಥೆಯೇ ಹೀಗಾದರೆ ಬೇರೆಯವರ ಕಥೆ ಇನ್ನು ಹೇಗೆನ್ನೋ ಪ್ರಶ್ನೆ ಬಂಡಾಯಗಾರರದ್ದಾಗಿದೆ.
ಪೂರ್ವ ಘಟಕದ ಬಿಜೆಪಿ ಅಧ್ಯಕ್ಷ ಪ್ರಭು ನವಲಗುಂದಮಠ ಹಾಗೂ ಕೇಂದ್ರ ಘಟಕದ ಬಿಜೆಪಿ ಅಧ್ಯಕ್ಷ ಸಂತೋಶ್ ಚವ್ಹಾಣಗೆ ಟಿಕೆಟ್ ನೀಡಿರೋದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಧ್ಯಕ್ಷರಾಗಿದ್ದವರಿಗೆ ಟಿಕೆಟ್ ನೀಡೋದಾದ್ರೆ ನಾವೇಕೆ ಪಕ್ಷಕ್ಕೆ ದುಡಿಯಬೇಕು ಎನ್ನೊ ಪ್ರಶ್ನೆಯನ್ನು ನಾಯಕರಿಗೆ ಕೇಳುತ್ತಿದ್ದಾರೆ. ಹತ್ತಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿದೆ. ಬಿಜೆಪಿ ಅತೃಪ್ತರು ಪಕ್ಷೇತರರಾಗಿ ಸ್ಪರ್ಧಿಸಿ ಸೆಡ್ಡು ಹೊಡೆದಿದ್ದಾರೆ. ಅತೃಪ್ತರ ನಡೆ ಬಿಜೆಪಿಗೆ ದೊಡ್ಡ ಮುಳುವಾಗೋ ಆತಂಕ ಎದುರಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷರು, ಹಿರಿಯ ನಾಯಕರು ಹೇಳುವುದು ಒಂದು, ಮಾಡುವುದು ಮತ್ತೊಂದು ಎಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ಕಿರಣ್ ಉಪ್ಪಾರ ಆರೋಪಿಸಿದ್ದಾರೆ. ಪರೋಕ್ಷವಾಗಿ ಪ್ರಹ್ಲಾದ್ ಜೋಷಿ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಬೆಂಬಲಿಗರ ಒತ್ತಾಸೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದೇವೆ. ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಗೆದ್ದು ಬರ್ತೇವೆ ಅನ್ನೋ ವಿಶ್ವಾಸವನ್ನು ಕಿರಣ್ ವ್ಯಕ್ತಪಡಿಸಿದ್ದಾರೆ.
ಎರಡೂ ಪಕ್ಷಗಳಿಗೆ ಬಂಡಾಯ ಅಭ್ಯರ್ಥಿಗಳು ಮುಳುವಾಗ್ತಾರೆ ಅನ್ನೋ ಭೀತಿ ಸೃಷ್ಟಿಯಾಗಿದೆ. ಭಿನ್ನಮತ ಶಮನ ಮಾಡೋಕೆ ಕಾಂಗ್ರೆಸ್ ನಲ್ಲಿ ನಾಯಕರೇ ಇಲ್ಲದಂತಾಗಿದೆ. ಬಿಜೆಪಿಯಲ್ಲಿ ನಾಯಕರಿದ್ದರೂ ಭಿನ್ನಮತ ಶಮನಗೊಳಿಸೋ ಗೋಜಿಗೆ ಹೋಗಿಲ್ಲ. ಇದರ ಲಾಭ ಯಾರಿಗೆ ಆಗುತ್ತೆ ಅನ್ನೋದು ಮಾತ್ರ ಸಸ್ಪೆನ್ಸ್ ಆಗಿ ಉಳಿದಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರೋ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮತ್ತು ಜವಳಿ ಹಾಗೂ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಕೆಲ ಅತೃಪ್ತರು ಮಾತ್ರ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಅವರ ಮನವೊಲಿಕೆ ಮಾಡಿ ಅಖಾಡದಿಂದ ಹಿಂದೆ ಸರಿಸೋದಾಗಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಮುಖಂಡರು, ಹುಬ್ಬಳ್ಳಿ – ಧಾರವಾಡ ಮಹಾನಗರ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್ ಸಿಕ್ಕಿಲ್ಲವೆಂದು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಬಿಜೆಪಿ ಶಿಸ್ತಿನ ಪಕ್ಷ, ಶಿಸ್ತಿಗೆ ತಲೆಬಾಗ್ತಾರೇ ಅನ್ನೋ ನಂಬಿಕೆಯಿದೆ. ಆದಷ್ಟು ಬೇಗನೇ ಬಂಡಾಯದ ಉಪಶಮನ ಮಾಡಲಾಗುವುದು.
ವರದಿ - ಶಿವರಾಮ ಅಸುಂಡಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ