ಮಾವನನ್ನು ಹತ್ಯೆ ಮಾಡಿದ ಅಳಿಯ : ಹೆಂಡತಿ ಮತ್ತು ಅತ್ತೆಗೂ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದ ವೈದ್ಯ

ಮಗಳಿಗೆ ಕಾನೂನು ಬೆಂಬಲ ನೀಡಲು ನಿಂತಿದ್ದ ಶಂಕ್ರಪ್ಪನವರ ಮೇಲೆ ಸಂತೋಷ ಮುನಿಸಿಕೊಂಡಿದ್ದ. ಆಗಾಗ ಬಂದು ಜಗಳ ವಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಸಂತೋಷನನ್ನು ಎಲ್ಲರೂ ನಿರ್ಲಕ್ಷಿಸಿ ಬಿಟ್ಟಿದ್ದರು.

news18-kannada
Updated:October 24, 2020, 10:48 PM IST
ಮಾವನನ್ನು ಹತ್ಯೆ ಮಾಡಿದ ಅಳಿಯ : ಹೆಂಡತಿ ಮತ್ತು ಅತ್ತೆಗೂ ಚಾಕುವಿನಿಂದ ಇರಿದು ಅಟ್ಟಹಾಸ ಮೆರೆದ ವೈದ್ಯ
ಕೊಲೆ ಆರೋಪಿ ಡಾ.ಸಂತೋಷ್
  • Share this:
ಹುಬ್ಬಳ್ಳಿ(ಅಕ್ಟೋಬರ್​. 24): ಅಳಿಯನೇ ಹೆಣ್ಣು ಕೊಟ್ಟ ಮಾವನನ್ನು ಹತ್ಯೆ ಮಾಡಿ, ಹೆಂಡತಿ ಮತ್ತು ಅತ್ತೆಗೂ ಚಾಕುವಿನಿಂದ ಇರಿದು ಕೊಲೆ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕುಟುಂಬವನ್ನೇ ಬಲಿ ಪಡೆಯಲು ಬಂದಿದ್ದ‌ ಕಿರಾತಕ ಅಳಿಯ ಜೈಲು ಸೇರಿದ್ದಾನೆ. ಹುಬ್ಬಳ್ಳಿಯ ಲಿಂಗರಾಜ ನಗರದ ಕಟ್ಟಿ ಮಂಗಳಮ್ಮ ದೇವಸ್ಥಾನದ ಬಳಿ‌ ಇಂದು ಬೆಳ್ಳಂಬೆಳಗ್ಗೆ ಮಹಿಳೆಯರ ಆರ್ಥನಾದ ಕೇಳಿಸುತ್ತಿತ್ತು. ಮಹಿಳೆಯರ‌ ಕಿರುಚಾಟ ಕೇಳಿ ಸ್ಥಳೀಯರು ಅತ್ತಕಡೆ ದೌಡಾಯಿಸಿದ್ದರು. ಅಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ರಕ್ತಸಿಕ್ತ ಚಾಕು ಹಿಡಿದು ನಿಂತಿದ್ದ. ಮನೆಯಲ್ಲಿದ್ದ ವೃದ್ಧ ದಂಪತಿ ಮತ್ತವರ ಪುತ್ರಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದರು. ಸ್ಥಳೀಯರು ನೆರವಿಗೆ ದಾವಿಸುಷ್ಟರಲ್ಲಾಗಲೇ ಅನಾಹುತ ನಡೆದುಹೋಗಿತ್ತು. ತೀವ್ರ ರಕ್ತ ಸ್ರಾವದಿಂದ ವೃದ್ಧ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದರು‌. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆ ಮತ್ತವರ  ಮಗಳನ್ನುತಕ್ಷಣ ಆಸ್ಪತ್ರೆಗೆ ರವಾನಿಸಲಾಗಿದೆ‌. ಸಾವನ್ನಪ್ಪಿದವರ ಹೆಸರು ಶಂಕ್ರಪ್ಪ ಮೂಶಣ್ಣವರ್. ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿದ್ದ ಅವರು ಇತ್ತೀಚೆಗೆ ನಿವೃತ್ತರಾಗಿದ್ದರು.

ಪ್ರತಿನಿತ್ಯ ಬೆಳಗಿನ ಜಾವ ವಾಕಿಂಗ್‌ಗೆ ಹೋಗುವುದು ಶಂಕ್ರಪ್ಪನವರ ಹವ್ಯಾಸ. ಎಂದಿನಂತೆ ವಾಕಿಂಗ್‌ಗೆ ಹೋಗಲು ಬೆಳಗ್ಗೆ ಮನೆಯ ಬಾಗಿಲು ತೆರೆಯುತ್ತಿದ್ದಂತೆ ಶಂಕ್ರಪ್ಪ ಮೇಲೆ ಎರಗಿದ ವ್ಯಕ್ತಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದ‌.

ಕೊಲೆ ಮಾಡಿದವನ ಹೆಸರು ಸಂತೋಷ್ ಜಿ.ಎಸ್. ಈತ ಬೇರಾರೂ ಅಲ್ಲಾ. ಮೃತ ಶಂಕ್ರಪ್ಪನವರ ಅಳಿಯ. ಶಂಕ್ರಪ್ಪನವರ ಮಗಳು ಲತಾಳ ಗಂಡ. ದಾವಣಗೆರೆ ಮೂಲದ ಸಂತೋಷ್ ವೃತ್ತಿಯಿಂದ ವೈದ್ಯ. ಲತಾಳೊಂದಿಗೆ ಸಪ್ತಪದಿ ತುಳಿದಿದ್ದ ಇತನ ದಾಂಪತ್ಯ ಜೀವನ ಅಷ್ಟೊಂದು ಹೊಂದಾಣಿಕೆಯಿಂದ ಕೂಡಿರಲಿಲ್ಲ. ದಂತ ವೈದ್ಯೆಯಾಗಿರುವ ಲತಾ ಮತ್ತು ಸಂತೋಷ್ ಪರಸ್ಪರ ಸಣ್ಣಪುಟ್ಟ ವಿಷಯಕ್ಕೂ ಜಗಳವಾಡಿಕೊಳ್ಳುತ್ತಿದ್ದರು. ಇಬ್ಬರ ನಡುವೆ ಹೊಂದಾಣಿಕೆ ಕಷ್ಟ ಎಂದು ಅರಿತ ಲತಾ ಹುಬ್ಬಳ್ಳಿಯಲ್ಲಿ ತವರು ಮನೆ ಸೇರಿದ್ದರು.

ತನ್ನ ಮಗುವಿನೊಂದಿಗೆ ತಂದೆಯ ಮನೆಯಲ್ಲಿದ್ದರು. ಇಲ್ಲಿಯೇ ಖಾಸಗಿ ಆಸ್ಪತ್ರೆಯಲ್ಲಿ ಪ್ರ್ಯಾಕ್ಟಿಸ್ ಮಾಡಿಕೊಂಡಿದ್ದರು. ಆದರೆ, ಇಲ್ಲಿಗೂ ಬಂದು ಕಿರುಕುಳ ನೀಡುತ್ತಿದ್ದ ಸಂತೋಷ್ ದಾವಣಗೆರೆಗೆ ಬರುವಂತೆ ಹೆಂಡತಿಗೆ ಪೀಡಿಸುತ್ತಿದ್ದ. ಆದರೆ, ಲತಾಗೆ ಬೆಂಬಲವಾಗಿ ನಿಂತಿದ್ದ ತಂದೆ ಶಂಕ್ರಪ್ಪನವರು ಯಾವುದೇ ಕಾರಣಕ್ಕೂ ಮಗಳನ್ನು ಸಂತೋಷ್‌ ಜೊತೆ ಕಳಿಸಲ್ಲಾ ಎಂದು ಕಡ್ಡಿಮುರಿದಂತೆ ಹೇಳಿದ್ದರು.

ಇದನ್ನು ಓದಿ : ಬೆಂಗಳೂರಿನಲ್ಲಿ ವರುಣಾಘಾತಕ್ಕೆ ತತ್ತರಿಸಿದ ಹೊಸಕೆರೆಹಳ್ಳಿ ; ಹಬ್ಬದ ದಿನವೂ ಮನೆಯಲ್ಲಿರಲಾಗದ ಪರಿಸ್ಥಿತಿ

ಜೊತೆಗೆ ಇಬ್ಬರ ನಡುವಿನ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಮಗಳಿಗೆ ಕಾನೂನು ಬೆಂಬಲ ನೀಡಲು ನಿಂತಿದ್ದ ಶಂಕ್ರಪ್ಪನವರ ಮೇಲೆ ಸಂತೋಷ ಮುನಿಸಿಕೊಂಡಿದ್ದ. ಆಗಾಗ ಬಂದು ಜಗಳ ವಾಡಿಕೊಂಡು ಹೋಗುತ್ತಿದ್ದ. ಹೀಗಾಗಿ ಸಂತೋಷನನ್ನು ಎಲ್ಲರೂ ನಿರ್ಲಕ್ಷಿಸಿ ಬಿಟ್ಟಿದ್ದರು. ಇಂದು ದಿಢೀರನೆ ಮನೆಗೆ ಬಂದಿರುವ ಸಂತೋಷ ಮನಬಂದಂತೆ ಚಾಕುವಿನಿಂದ ಇರಿದು ಮಾವನನ್ನು ಕೊಂದಿದ್ದಾನೆ. ಬಿಡಿಸಲು ಬಂದ ಅತ್ತೆಗೂ ಚಾಕುವಿನಿಂದ ಇರಿದಿದ್ದಾನೆ. ಹೆಂಡತಿ ಲತಾಳ ಮೇಲೆಯೂ ದಾಳಿ ಮಾಡಿದ್ದಾನೆ. ಮನೆಯಲ್ಲಿದ್ದ ಲತಾಳ ಅಕ್ಕ ಲಲಿತಾ ಅವರು ಓಡಿಹೋಗಿ ಕೊಠಡಿಯಲ್ಲಿ ಸೇರಿ ಬಾಗಿಲು ಹಾಕಿಕೊಂಡು ಬಚಾವಾಗಿದ್ದಾರೆ.
ಭೀಕರ ಕೃತ್ಯ ವೆಸಗಿದ ಸಂತೋಷ್ ಸ್ಥಳದಿಂದ ಕದಲಿರಲಿಲ್ಲ. ಸ್ಥಳೀಯರು ವಿದ್ಯಾನಗರ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ‌. ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಂತೋಷ್ ನನ್ನು ವಶಕ್ಕೆ ಪಡೆದಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಅವರು ಸ್ಥಳ ಪರಿಶೀಲನೆ ನಡೆಸಿದ್ದು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ. ಸಿಟ್ಟಿನ ಕೈಗೆ ಬುದ್ದಿ ಕೊಟ್ಟ ವೈದ್ಯ ಸಂತೋಷ ಮಾಡಬಾರದ್ದನ್ನು ಮಾಡಿ ಈಗ ಜೈಲು ಸೇರಿದ್ದಾನೆ.
Published by: G Hareeshkumar
First published: October 24, 2020, 10:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading