ಕೊಡಗು: ಮಂಜಿನ ನಗರಿ ಮಡಿಕೇರಿ ಬೆಟ್ಟಗುಡ್ಡಗಳಿಂದ ಕಂಗಳೊಳಿಸುವ ದಕ್ಷಿಣದ ಕಾಶ್ಮೀರ. ಈ ಬೆಟ್ಟಗಳ ಸಾಲಿನಲ್ಲಿ ಕೃತಕ ಬೆಟ್ಟವೊಂದು ಬೆಳೆಯುತ್ತಲೇ ಇದೆ. ಹೌದು ಮಡಿಕೇರಿ ನಗರಸಭೆಯು ಸಂಗ್ರಹಿಸುವ ಕಸವನ್ನು ನಗರಕ್ಕೆ ಹೊಂದಿಕೊಂಡಂ ತಿರುವ ನಿಶಾನಿ ಮೊಟ್ಟೆ ಪ್ರದೇಶದಲ್ಲಿ ಸುರಿಯುತ್ತಿದೆ. ಅದೀಗ ದೊಡ್ಡ ಬೆಟ್ಟವಾಗಿ ಪರಿವರ್ತನೆಯಾಗಿದೆ. ಆ ಕಸ ಅಲ್ಲಿಯೇ ಕರಗಿ ತಗ್ಗು ಪ್ರದೇಶಕ್ಕೆ ಹರಿದು, ಮಳೆಗಾಲ ಸಮಯದಲ್ಲಿ ಸ್ಥಳೀಯರ ಮನೆಗಳಿಗೆ ನುಗ್ಗುತ್ತಿದೆ. ಹೀಗಾಗಿಯೇ ಎಸ್ಆರ್ವಿಕೆ ಸಂಘದ ನೇತೃತ್ವದಲ್ಲಿ ಸ್ಥಳೀಯರಾದ ಮೋಹನ್ ಅಪ್ಪಾಜಿ ಮತ್ತು ಇತರರು ನಗರಸಭೆ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ್ದರು. ವಾದ ಆಲಿಸಿದ್ದ ನ್ಯಾಮೂರ್ತಿ ಎಸ್.ಎ. ಓಕಾ ನೇತೃತ್ವದ ಪೀಠ ತಕ್ಷಣವೇ ಕಸವನ್ನು ತೆರವು ಮಾಡಿ ಸೂಕ್ತ ಸ್ಥಳದಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಜೊತೆಗೆ ನಾಲ್ಕು ವಾರಗಳಲ್ಲಿ ಅದಕ್ಕಾಗಿ ಸೂಕ್ತ ಸ್ಥಳವನ್ನು ಗುರುತಿಸುವಂತೆ ಸೂಚಿಸಿತ್ತು.
ಆದರೆ, ಸ್ಥಳವನ್ನು ಗುರುತಿಸುವಲ್ಲಿಯೂ ನಗರಸಭೆ ಸೋತಿತ್ತು. ಹೀಗಾಗಿಯೇ ಹೈಕೋರ್ಟ್ ಗರಂ ಆಗಿತ್ತು. ಹೀಗಾಗಿ ಮಡಿಕೇರಿ ನಗರಸಭೆ ಈಗ ಮೊಣ್ಣಂಗೇರಿಯಲ್ಲಿ ಜಾಗ ಗುರುತಿಸಿದೆ. ಆದರೆ, ನ್ಯಾಯಾಲಯವು ಸ್ಥಳೀಯ ಆಡಳಿತ ಎಲ್ಲಿ ಮತ್ತು ವೈಜ್ಞಾನಿಕವಾಗಿ ಹೇಗೆ ಕಸವಿಲೇವಾರಿ ಮಾಡುತ್ತೆ? ಎಂದು ಪ್ರಶ್ನೆ ಮಾಡಿದೆ. ಅಲ್ಲದೆ, ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‍ಓಸಿಯನ್ನು ಪಡೆಯುವಂತೆ ಸೂಚಿಸಿದೆ.
ಇದೆಲ್ಲದರ ಕುರಿತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯೇ ಮುಂದಿನ ವಾದದ ವೇಳೆ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಈ ಕುರಿತು ನಗರಸಭೆ ಆಯುಕ್ತ ರಾಮದಾಸ್ ಅವರನ್ನು ಪ್ರಶ್ನಿಸಿದರೆ, ಅದನ್ನು ವಿಲೇವಾರಿ ಮಾಡುವುದಕ್ಕೆ ಎರಡನೇ ಮೊಣ್ಣಂಗೇರಿಯಲ್ಲಿ 21 ಎಕರೆ ಜಾಗ ಗುರುತ್ತಿಸಿದ್ದೇವೆ. ಅಲ್ಲಿಗೆ ನೀರು, ರಸ್ತೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಎರಡರಿಂದ ಮೂರು ವರ್ಷಗಳು ಬೇಕಾಗಬಹುದು. ಹೀಗಾಗಿ ಈ ಅವಧಿಯ ಕಾಲವಕಾಶ ನೀಡುವಂತೆ ಕೋರ್ಟ್ ನಲ್ಲಿ ಮನವಿ ಮಾಡಿದ್ದೇವೆ ಎನ್ನುತ್ತಾರೆ.
ಆದರೆ, ಈಗಾಗಲೇ ನಿಶಾನಿಮೊಟ್ಟೆಯಲ್ಲಿ ಸಂಗ್ರಹವಾಗಿರುವ ಕಸವನ್ನು ಏನು ಮಾಡುತ್ತೀರಿ? ಎನ್ನೋ ಪ್ರಶ್ನೆಗೆ, ಮಡಿಕೇರಿ ನಗರದಲ್ಲಿ ನಿತ್ಯ 10 ಟನ್ ಕಸ ಸಂಗ್ರಹವಾಗುತ್ತಿದೆ. ಅದರಲ್ಲಿ ಒಂದು ಟನ್ ಮಾತ್ರವೇ ಗೊಬ್ಬರವಾಗಿ ಪರಿವರ್ತನೆ ಮಾಡಲಾಗುತ್ತಿದೆ. ಉಳಿದ ಕಸವನ್ನು ಡಿಕಂಫೋಸ್ಟ್ ಮಾಡಲು ಪ್ಲಾನ್ ರೂಪಿಸಿದ್ದೇವೆ. ಅದಕ್ಕಾಗಿ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಆರು ಸಂಸ್ಥೆಗಳು ಮುಂದೆ ಬಂದಿವೆ. ಅದರಲ್ಲಿ ಯಾವ ಸಂಸ್ಥೆಯ ಯೋಜನೆ ಉತ್ತಮವಾಗಿದೆಯೋ ಅದಕ್ಕೆ ಡಿ ಕಂಪೋಸ್ಟ್ ಮಾಡಲು ಟೆಂಡರ್ ನೀಡುತ್ತೇವೆ ಎನ್ನುತ್ತಾರೆ ನಗರಸಭೆ ಆಯುಕ್ತ ರಾಮದಾಸ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ