• Home
  • »
  • News
  • »
  • district
  • »
  • ಎಪಿಎಂಸಿಯಲ್ಲಿ ಸ್ಯಾಂಪಲ್ ಹೆಸರಲ್ಲಿ ರೈತರಿಗೆ ಮೋಸ; ಲಾಭ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು

ಎಪಿಎಂಸಿಯಲ್ಲಿ ಸ್ಯಾಂಪಲ್ ಹೆಸರಲ್ಲಿ ರೈತರಿಗೆ ಮೋಸ; ಲಾಭ ಮಾಡಿಕೊಳ್ಳುತ್ತಿರುವ ವ್ಯಾಪಾರಿಗಳು

ರಾಯಚೂರಿನ ಎಪಿಎಂಸಿ

ರಾಯಚೂರಿನ ಎಪಿಎಂಸಿ

ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರ ಬೇಳೆ ಕಾಳು ಉತ್ಪನ್ನಕ್ಕೆ ಬೆಲೆ ನಿಗದಿಯಾದ ಬಳಿಕ ಅಲ್ಲಿನ ವರ್ತಕರು ಸ್ಯಾಂಪಲ್ ಹೆಸರಿನಲ್ಲಿ ಕೆಲ ಪ್ರಮಾಣದ ಬೇಳೆ ಕಾಳುಗಳನ್ನ ಉಚಿತವಾಗಿ ತೆಗೆದುಕೊಂಡು ಹೋಗುತ್ತಾರೆ. ಇದರಿಂದ ರೈತರಿಗೆ ವಂಚನೆಯಾಗಿ ವ್ಯಾಪಾರಿಗಳು ಲಾಭ ಮಾಡಿಕೊಳ್ಳುತ್ತಿದ್ದಾರೆ.

  • Share this:

ರಾಯಚೂರು: ವರ್ಷವಿಡೀ ಹೊಲದಲ್ಲಿ ಕಷ್ಟಪಟ್ಟು ದುಡಿಯುವ ರೈತ ಕಾಳು, ಕಾಳನ್ನು ಸೇರಿಸುತ್ತಾನೆ. ಒಂದು ಕಾಳೂ ಹಾಳಾಗದಂತೆ ಕೂಡಿ ಹಾಕುತ್ತಾನೆ. ಬೆಳೆದ ಕಾಳು, ಧಾನ್ಯವನ್ನು ಮಾರುಕಟ್ಟೆಗೆ ತಂದಾಗ ಅದರಿಂದ ಲಾಭದ ಆಸೆ ಹೊಂದಿರುತ್ತಾನೆ. ಆದರೆ ರೈತ ತಂದಿರುವ ಫಸಲಿನಲ್ಲಿ ಸ್ಯಾಂಪಲ್ ಹೆಸರಿನಲ್ಲಿ ರೈತರಿಗೆ ಎಪಿಎಂಸಿಯಲ್ಲಿ ಮೋಸ ಮಾಡಲಾಗುತ್ತಿದೆ. ರಾಯಚೂರು ಎಪಿಎಂಸಿಯಲ್ಲಿ ವ್ಯಾಪಾರಿಗಳಿಂದ ಮೋಸವಾಗುತ್ತಿರುವುದು ಈಗ ಬಯಲಾಗಿದೆ. ಈ ಮೋಸವನ್ನು ತಡೆಯಲು ರೈತರು ಆಗ್ರಹಿಸಿದ್ದಾರೆ.


ಭತ್ತ, ಹತ್ತಿ, ತೊಗರಿ ಹಾಗು ಕಡಲೆ, ಉಳ್ಳಾಗಡ್ಡಿ ಸೇರಿದಂತೆ ವಿವಿಧ ಬೆಳೆಗಳನ್ನು ರಾಯಚೂರು ಜಿಲ್ಲೆಯ ರೈತರು ಬೆಳೆಯುತ್ತಿದ್ದಾರೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವುದು ಸಹಜ, ಮಾರುಕಟ್ಟೆಗೆ ತಂದ ಧಾನ್ಯವನ್ನು ಪರೀಕ್ಷಿಸಿ ಅದಕ್ಕೆ ಧಾರಣೆ ಫಿಕ್ಸ್ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಮಾರಾಟವಾದ ಕಡಲೆ, ತೊಗರಿಯನ್ನು ಸ್ಯಾಂಪಲ್ ರೂಪದಲ್ಲಿ ತೆಗೆದುಕೊಂಡು ವ್ಯಾಪಾರಿಗಳು ಹೋಗುತ್ತಾರೆ. ಯಾಕೆ ಎಂದು ಕೇಳಿದರೆ, ನಿಮ್ಮ ಮಾಲು ಮಾರಾಟವಾಗಿದೆ. ಖರೀದಿದಾರರಿಗೆ ತೋರಿಸಲು ಸ್ಯಾಂಪಲ್ ಬೇಕು ಎಂದು ಹೇಳುತ್ತಾರೆ. ಮಾರಾಟವಾದ ಪ್ರತಿ ರೈತರ ಧಾನ್ಯ ದಲ್ಲಿ 2-3 ಕೆಜಿ ತೆಗೆದುಕೊಂಡು ಹೋಗುತ್ತಿದ್ದಾರೆ.


ರಾಯಚೂರು ಜಿಲ್ಲೆಯ ರಾಜೇಂದ್ರ ಗಂಜ್​ಗೆ ನಿತ್ಯ ಸಾವಿರಾರು ರೈತರು ಲಕ್ಷಕ್ಕೂ ಕ್ವಿಂಟಾಲ್ ಅಧಿಕ ಫಸಲನ್ನು ಮಾರಾಟ ಮಾಡಲು ಬರುತ್ತಾರೆ. ಸ್ಯಾಂಪಲ್ ರೂಪದಲ್ಲಿ ಪ್ರತಿ ಅಂಗಡಿಯವರು ಕನಿಷ್ಠ 1-2 ಕ್ವಿಂಟಾಲ್ ಸ್ಯಾಂಪಲ್ ರೂಪದ ಧಾನ್ಯವನ್ನು ಸಂಗ್ರಹಿಸುತ್ತಾರೆ. ಸಾಮಾನ್ಯವಾಗಿ ಎಪಿಎಂಸಿ ಅಂಗಳಕ್ಕೆ ಬರುವ ಧಾನ್ಯವನ್ನು ಮೊದಲು ಪರೀಕ್ಷೆ ಮಾಡಿಯೇ ಧಾರಣೆ ನಿಗದಿ ಮಾಡಿರುತ್ತಾರೆ. ಆದರೆ ವ್ಯಾಪಾರವಾದ ನಂತರ ಸ್ಯಾಂಪಲ್ ನೋಡುವುದು ಕಡಿಮೆ. ಆದರೆ ಮುಗ್ದರಾಗಿರುವ ರೈತರಿಗೆ ಏನೇನೋ ಹೇಳಿ ದರ ನಿಗಿದಿ ನಂತರ ಸ್ಯಾಂಪಲ್ ಹೆಸರಿನಲ್ಲಿ ಧಾನ್ಯ ತೆಗೆದುಕೊಂಡು ಹೋಗುತ್ತಾರೆ. ಇದು ಸರಿಯಾದ ಕ್ರಮವಲ್ಲ ಎಂದು ರೈತರು ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


ಇದನ್ನೂ ಓದಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಸಂಕಷ್ಟ: ಬಸವಸಾಗರ ಜಲಾಶಯದಿಂದ ಎಪ್ರಿಲ್ 12 ರವರೆಗೆ ನೀರು ಬಿಡಲು ಆಗ್ರಹ


ರಾಜ್ಯದ ಎಪಿಎಂಸಿಗಳಲ್ಲಿ ಸ್ಯಾಂಪಲ್ ಹೆಸರಿನಲ್ಲಿ ಧಾನ್ಯ ಪಡೆಯದಂತೆ ಅದು ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ. ಕಷ್ಟ ಪಟ್ಟು ದುಡಿದು ಕಾಳಿಗೆ ಕಾಳು ಸೇರಿಸಿ ಮಾರುಕಟ್ಟೆಗೆ ತರುವ ರೈತರಿಗೆ ಮಾರುಕಟ್ಟೆಯಲ್ಲಿ ಮೋಸವಾಗುತ್ತಿದೆ. ರಾಯಚೂರು ಎಪಿಎಂಸಿಯಲ್ಲಿ ಕೆಲವು ರೈತರು ಈ ಮೋಸವನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿ ಎಪಿಎಂಸಿ ಅಧಿಕಾರಿಗಳಿಗೆ ನೀಡಿದ್ದಾರೆ. ರೈತರ ದೂರಿನ್ವಯ ಪರಿಶೀಲನೆ ಮಾಡುವುದಾಗಿ ಎಪಿಎಂಸಿ ಅಧಿಕಾರಿಗಳ ಹೇಳಿದ್ದಾರೆ.


ಈ ಮೊದಲು ಈರುಳ್ಳಿಯನ್ನು ಸಹ ಇದೇ ರೀತಿ ಸ್ಯಾಂಪಲ್ ರೂಪದಲ್ಲಿ ಪಡೆಯಲಾಗುತ್ತಿತ್ತು. ನಿಯಮ ಬಾಹಿರವಾಗಿ ಸ್ಯಾಂಪಲ್ ಪಡೆಯುವುದನ್ನು ನಿಲ್ಲಿಸಬೇಕು ಎಂದು ರೈತರು ಹೋರಾಟ ಮಾಡಿದ  ನಂತರ ಉಳ್ಳಾಗಡ್ಡಿ ಸ್ಯಾಂಪಲ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಾಗಿದೆ. ಆದರೆ ಕಡಲೆ ಹಾಗು ತೊಗರಿಯನ್ನು ಸ್ಯಾಂಪಲ್ ರೂಪದಲ್ಲಿ ಪಡೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ತೊಗರಿಗೆ ಪ್ರತಿ ಕೆಜಿಗೆ 60 ರೂಪಾಯಿ, ಕಡಲೆಯೂ ಸಹ 50 ರೂ ಪ್ರತಿ ಕೆಜಿಗೆ ಇದೆ. ಪ್ರತಿ ರೈತರಿಂದ ಎರಡು ಕೆಜಿ ಸ್ಯಾಂಪಲ್ ತೆಗೆದುಕೊಳ್ಳುವುದರಿಂದ ಪ್ರತಿ ರೈತರಿಗೆ 10-200 ರೂಪಾಯಿ ನಷ್ಟವಾಗುತ್ತಿದೆ. ಇದು ಕೇವಲ ಒಬ್ಬ ರೈತನಿಗೆ ನಷ್ಟ ಅಷ್ಟೇ, ಅದೇನು ದೊಡ್ಡದಲ್ಲ ಎಂದು ಕೊಳ್ಳಬಹುದು. ಆದರೆ ಮಾರುಕಟ್ಟೆಗೆ ತಂದ ಎಲ್ಲಾ ರೈತರಿಂದ ಪಡೆದ ಸ್ಯಾಂಪಲ್ ಪ್ರತಿ ಅಂಗಡಿಯವರಿಗೆ 10,000 ರೂಪಾಯಿಯವರೆಗೂ ಲಾಭವಾಗುತ್ತಿದೆ. ಮುಂದೆ ಈ ರೀತಿ ಸ್ಯಾಂಪಲ್ ಪಡೆಯುವುದನ್ನು ನಿಲ್ಲಿಸದಿದ್ದರೆ ಹೋರಾಟ ಮಾಡುವುದಾಗಿ ರೈತರ ಎಚ್ಚರಿಕೆ ನೀಡಿದ್ದಾರೆ.


ವರದಿ: ಶರಣಪ್ಪ ಬಾಚಲಾಪುರ

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು