HOME » NEWS » District » HOT WATER LAKE NOW BECAME EMPTY IN PUTURU TALUK RH AKP

ಮನುಷ್ಯನ ಅತಿಯಾದ ಹಸ್ತಕ್ಷೇಪ; ಅವಸಾನದ ಹಾದಿಯಲ್ಲಿ ಐತಿಹಾಸಿಕ ಬಿಸಿ ನೀರಿನ ಚಿಲುಮೆ!

ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುವುದರಿಂದ ಬೆಂದ್ರೆತೀರ್ಥದಲ್ಲಿ ತೀರ್ಥಸ್ನಾನ ಮಾಡಲು ಬರುವವರಿಗಾಗಿ ಶೌಚಗೃಹ ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇವೆಲ್ಲವೂ ಇದೀಗ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ಮತ್ತೆ ಈ ವಿಸ್ಮಯಕಾರಿ ಕೆರೆಯಲ್ಲಿ ಮತ್ತೆ ಬಿಸಿ ನೀರು ಚಿಮ್ಮುವಂತೆ ಮಾಡುವ ಕಾಯಕಲ್ಪದ ಅನಿವಾರ್ಯತೆಯಿದೆ.

news18-kannada
Updated:November 19, 2020, 8:59 PM IST
ಮನುಷ್ಯನ ಅತಿಯಾದ ಹಸ್ತಕ್ಷೇಪ; ಅವಸಾನದ ಹಾದಿಯಲ್ಲಿ ಐತಿಹಾಸಿಕ ಬಿಸಿ ನೀರಿನ ಚಿಲುಮೆ!
ಖಾಲಿಯಾಗಿರುವ ಬಿಸಿ ನೀರಿನ ಚಿಲುಮೆಯ ಕೆರೆ.
  • Share this:
ಪುತ್ತೂರು; ಶತಮಾನಗಳಿಂದ ಜನತೆಗೆ ನಂಬಿಕೆಯ, ಆರಾಧನೆಯ ಕೇಂದ್ರವೊಂದು ಇದೀಗ ಇತಿಹಾಸದ ಪುಟ ಸೇರಿಕೊಂಡಿದೆ. ಪ್ರಕೃತಿಯ ಸಮತೋಲನದ ಮೇಲಿನ ಮನುಷ್ಯನ ಅತಿಯಾದ ಹಸ್ತಕ್ಷೇಪ ಈ ವಿಸ್ಮಯದ ಕೇಂದ್ರವನ್ನು ನಶಿಸುವಂತೆ ಮಾಡಿದೆ. ಹೌದು, ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಇರ್ದೆ ಗ್ರಾಮದಲ್ಲಿರುವ ಬೆಂದ್ರತೀರ್ಥ ಎನ್ನುವ ಪ್ರವಾಸಿ ತಾಣ ಪ್ರಸ್ತುತ ಚಿತ್ರಣ.

ಬೆಂದ್ರ್ ಎಂದರೆ ಸ್ಥಳೀಯ ಭಾಷೆಯಾದ ತುಳುವಿನಲ್ಲಿ ಬಿಸಿಯಾದ ಎನ್ನುವ ಅರ್ಥವನ್ನೂ ನೀಡುತ್ತದೆ. ಇಲ್ಲಿರುವ ಈ ಕೆರೆ ದಿನದ ಇಪ್ಪತ್ತನಾಲ್ಕು ಗಂಟೆಯೂ, ವರ್ಷದ 365 ದಿನವೂ ಬಿಸಿಯಾಗಿಯೇ ಇದ್ದ ಕಾರಣ ಇದಕ್ಕೆ ಬಿಸಿ ನೀರಿನ ಚಿಲುಮೆ ಎನ್ನುವ ಹೆಸರು ಬಂದಿದೆ. ಈ ಕೆರೆಯ ಅಡಿ ಭಾಗದಿಂದ ನಿರಂತರವಾಗಿ ಬಿಸಿ ನೀರಿನ ಬುಗ್ಗೆಗಳು ಏಳುತ್ತಿದ್ದ ಸಂದರ್ಭದಲ್ಲಿ ಈ ಕ್ಷೇತ್ರಕ್ಕೆ ಜನ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಇಲ್ಲಿ ತೀರ್ಥ ಸ್ನಾನಗಳನ್ನು ಮಾಡುತ್ತಿದ್ದರು. ಈ ಕೆರೆ ಇರುವ ಪ್ರದೇಶದ ಪಕ್ಕದಲ್ಲೇ ಇರುವ ದೇವಸ್ಥಾನಕ್ಕೂ ಸಂಬಂಧಪಟ್ಟದ್ದು ಎನ್ನುವ ನಂಬಿಕೆಯಿದ್ದ ಕಾರಣ ಇದಕ್ಕೆ ಧಾರ್ಮಿಕ ಹಿನ್ನಲೆಯೂ ಇದೆ.

ರಾಮಾಯಣದಲ್ಲಿ ಶ್ರೀ ರಾಮ ಸೀತೆಯ ಜೊತೆಗೆ ಇದೇ ಕೆರೆಯಲ್ಲಿ ಸ್ನಾನ ಮಾಡಿ ಹೋಗಿದ್ದ ಎನ್ನುವ ನಂಬಿಕೆಯೂ ಇಲ್ಲಿನ ಜನರಲ್ಲಿದೆ. ಆದರೆ ಕಳೆದ ಎರಡು ದಶಕಗಳಿಂದೀಚೆಗೆ ನಿರಂತರವಾಗಿ ಈ ಕೆರೆಯ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಾ ಬಂದು ಇದೀಗ ಸಂಪೂರ್ಣ ಖಾಲಿಯಾಗಿದೆ. ಈ ಪರಿಸರದಲ್ಲಿ ಅಗತ್ಯಕ್ಕೂ ಮಿಕ್ಕಿದ ಕೊಳವೆ ಬಾವಿಗಳ ಕೊರೆತದಿಂದಾಗಿ ಅಂತರ್ಜಲ ಸಂಪೂರ್ಣ ಕುಸಿದಿದ್ದರಿಂದ ಬೆಂದ್ರತೀರ್ಥವೂ ಬತ್ತಿಹೋಗಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.

ದಶಕಗಳ ಹಿಂದೆಯಷ್ಟೇ ಆಸ್ತಿಕರ ಶ್ರದ್ಧಾಕೇಂದ್ರವಾಗಿದ್ದ ಬೆಂದ್ರೆತೀರ್ಥ ಇಂದು ಅವಸಾನದ ಅಂಚಿಗೆ ತಲುಪಿರುವುದು  ಆಸ್ತಿಕರ ನಿರಾಶೆಗೂ ಕಾರಣವಾಗಿದೆ. ಆಸ್ತಿಕರ ಶ್ರದ್ಧಾಕೇಂದ್ರವನ್ನು ಉಳಿಸಿಕೊಳ್ಳಲಾಗದ ಸ್ಥಳೀಯರ ವೈಫಲವೂ ಇಲ್ಲಿ ಎದ್ದು ಕಾಣಿಸಲಾರಂಭಿಸಿದ್ದು, ಪ್ರಕೃತಿಯ ಮೇಲಿನ ಅತಿಯಾದ ಶೋಷಣೆಯೇ ಈ ತೀರ್ಥ ಕೇಂದ್ರ ನಾಶವಾಗಲು ಕಾರಣ ಎನ್ನುವ ಆರೋಪವೂ ವ್ಯಕ್ತವಾಗುತ್ತಿದೆ.

ಇದನ್ನು ಓದಿ: ಅಧಿಕೃತವಾಗಿ ಮರಳು ತೆಗೆಯಲು ಅವಕಾಶ ಕೊಟ್ಟಿದ್ದೆ ಇಲ್ಲಿ ಶಾಪವಾಯ್ತು; ರೈತರ ಬದುಕಿಗೆ ಮುಳುವಾದ ಮರಳುಗಾರಿಕೆ

ಬೆಂದ್ರೆತೀರ್ಥ ಇರುವಂತಹ ಸ್ಥಳದ ಪಕ್ಕದಲ್ಲೇ ಸೀರೆಹೊಳೆ ಹರಿಯುತ್ತಿದ್ದು, ಇದರ ನೀರಿನ ಮಟ್ಟವೂ ಕುಸಿಯಲಾರಂಭಿಸಿದೆ. ಈ ಕಾರಣಕ್ಕಾಗಿ ಈ ಹೊಳೆಗೆ ಅಲ್ಲಲ್ಲಿ ಕಟ್ಟೆಗಳನ್ನು ಕಟ್ಟಿ ನೀರಿಂಗಿಸುವ ಕಾರ್ಯ ನಡೆಸಿದಲ್ಲಿ ಬೆಂದ್ರೆತೀರ್ಥದಲ್ಲಿ ನೀರು ನಿಲ್ಲುವ ಸಾಧ್ಯತೆಯೂ ಇದೆ. ಅಲ್ಲದೆ ಈಗಿರುವ ಕೆರೆಯನ್ನು ಕೊಂಚ ಕೊರೆದಲ್ಲೂ ನೀರು ಸಿಗುವ ಸಾಧ್ಯತೆಯೂ ಇದೆ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ. ವಿಪರ್ಯಾಸವೆಂದರೆ ಬೆಂದ್ರೆತೀರ್ಥದಲ್ಲಿ ಬರುತ್ತಿದ್ದ ಬಿಸಿ ನೀರು ಇದೀಗ ಇದರ ಪಕ್ಕದ ತೋಟಗಳಲ್ಲಿ ಕೊರೆದ ಕೊಳವೆ ಬಾವಿಗಳಲ್ಲಿ ಬರುತ್ತಿವೆ. ಈ ನಿಟ್ಟಿನಲ್ಲೂ ಸಂಬಂಧಪಟ್ಟ ಪ್ರವಾಸೋದ್ಯಮ ಇಲಾಖೆ ಬೆಂದ್ರೆತೀರ್ಥದಲ್ಲಿ ಮತ್ತೆ ಬಿಸಿ ನೀರಿನ ಚಿಲುಮೆ ಚಿಮ್ಮುವಂತೆ ಮಾಡಬೇಕೆನ್ನುವುದು ಎಲ್ಲರ ಆಶಯವೂ ಆಗಿದೆ.
ಪ್ರವಾಸೋದ್ಯಮ ಇಲಾಖೆಯ ಅಡಿಯಲ್ಲಿ ಬರುವುದರಿಂದ ಬೆಂದ್ರೆತೀರ್ಥದಲ್ಲಿ ತೀರ್ಥಸ್ನಾನ ಮಾಡಲು ಬರುವವರಿಗಾಗಿ ಶೌಚಗೃಹ ಹಾಗೂ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ. ಆದರೆ ಇವೆಲ್ಲವೂ ಇದೀಗ ಪಾಳು ಬೀಳುವ ಸ್ಥಿತಿಗೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ಮತ್ತೆ ಈ ವಿಸ್ಮಯಕಾರಿ ಕೆರೆಯಲ್ಲಿ ಮತ್ತೆ ಬಿಸಿ ನೀರು ಚಿಮ್ಮುವಂತೆ ಮಾಡುವ ಕಾಯಕಲ್ಪದ ಅನಿವಾರ್ಯತೆಯಿದೆ.
Published by: HR Ramesh
First published: November 19, 2020, 8:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories