ಎಸಿಬಿ ಎಸ್​ಪಿ ಕಾಲಿಗೆ ಬೀಳಲು ಮುಂದಾದ ಆಫೀಸರ್; ಲಂಚ ಪಡೆದು ಸಿಕ್ಕಿಬಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ

ಹನಿ ನೀರಾವರಿ ಯೋಜನೆಯ ಸೌಲಭ್ಯ ಒದಗಿಸಲು ರೈತನಿಂದ ಲಂಚ ಸ್ವೀಕರಿಸುವಾಗ ತೋಟಗಾರಿಕೆ ಇಲಾಖೆ ಅಧಿಕಾರಿ ಎಸಿಬಿ ಕೈಗೆ ಸಿಕ್ಕಿಬಿದ್ದಿದ್ದಾರೆ. ಯಾದಗಿರಿಯ ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಎಸಿಬಿ ರೇಡ್ ನಡೆಯಿತು.

ಎಸಿಬಿ ಎಸ್​ಪಿಯವರ ಕಾಲಿಗೆ ಬೀಳಲು ಯತ್ನಿಸಿದ ಭ್ರಷ್ಟ ಆರೋಪಿ ಅಧಿಕಾರಿ

ಎಸಿಬಿ ಎಸ್​ಪಿಯವರ ಕಾಲಿಗೆ ಬೀಳಲು ಯತ್ನಿಸಿದ ಭ್ರಷ್ಟ ಆರೋಪಿ ಅಧಿಕಾರಿ

  • Share this:
ಯಾದಗಿರಿ: ಬೆಳೆ ಹಾನಿಯಿಂದ ಅನ್ನದಾತರು ಸಂಕಷ್ಟದಲ್ಲಿದ್ದಾಗ ರೈತರಿಗೆ ಸರ್ಕಾರ ಒದಗಿಸುವ ಸೌಲಭ್ಯ ವನ್ನು ಸಮರ್ಪಕವಾಗಿ ವಿತರಿಸುವುದು ಅಧಿಕಾರಿಗಳ ಹೊಣೆಗಾರಿಕೆ. ಆದರೆ, ಅನ್ನದಾತರಿಗೆ ಆಶ್ರಯವಾಗಬೇಕಾದ ಅಧಿಕಾರಿಯೊಬ್ಬರು ರೈತರಿಂದಲೇ ಹಣ ಪೀಕುವ ಕೆಲಸಕ್ಕೆ ಕೈಹಾಕಿ ಈಗ ಎಸಿಬಿ ಬಲೆಗೆ ಸಿಕ್ಕಿಕೊಂಡಿದ್ದಾನೆ. ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದ ಅಧಿಕಾರಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ‌ಮಲ್ಲಿಕಾರ್ಜುನ ಬಾಬು. ಲಂಚ ತೆಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಲೇ ಭ್ರಷ್ಟ ಆರೋಪಿ ಅಧಿಕಾರಿಯು ಎಸಿಬಿ ಎಸ್​ಪಿ ಮಹೇಶ್ ಮೇಘಣ್ಣನವರ್ ಅವರ ಕಾಲಿಗೆ ಬೀಳಲು ಮುಂದಾದ ಘಟನೆಯೂ ನಡೆಯಿತು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನಬಾಬು ಅವರು ಕೌಳುರು ಗ್ರಾಮದ ರೈತ ಶಿವಾರೆಡ್ಡಿ ಅವರಿಂದ ಹನಿ‌ ನೀರಾವರಿಯ 1.50 ಲಕ್ಷ ರೂ ಯೋಜನೆ ಸೌಲಭ್ಯ ನೀಡಲು ಪ್ರತಿಯಾಗಿ 6 ಸಾವಿರ ರೂ ಹಣಕ್ಕೆ ಬೇಡಿಕೆ ಇಟ್ಟಿದರು. ರೈತ ಶಿವಾರೆಡ್ಡಿ ಪರವಾಗಿ ವೀರುಪಾಕ್ಷಿ ಮೂಲಕ ಇಂದು 5 ಸಾವಿರ ಲಂಚದ ಹಣವನ್ನು ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದಾರೆ. ಜಿಲ್ಲಾಡಳಿತ ಭವನದ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕಚೇರಿಯಲ್ಲಿ ಹಣ ಪಡೆಯುವಾಗ ಎಸಿಬಿ ಎಸ್​ಪಿ ಮಹೇಶ ಮೇಘಣ್ಣನವರ್, ಡಿವೈಎಸ್​ಪಿ ಬಿ.ಬಿ. ಪಟೇಲ, ಪಿಐಗಳಾದ ರಾಜು ಬಿರಾದಾರ, ರಾಘವೇಂದ್ರ ಹಾಗೂ ಸಿಬ್ಬಂದಿಯವರಾದ ವಿಜಯಕುಮಾರ್, ಸಾಬಣ್ಣ, ಅಮರನಾಥ, ಗುತ್ತಪ್ಪ ಗೌಡ, ರವಿ ಅವರಿದ್ದ ತಂಡವು ದಾಳಿ ಮಾಡಿದೆ.

ಇದನ್ನೂ ಓದಿ: ರೇಷ್ಮೆಗೂಡು ಮಾರಾಟ ಮಾಡಿದರೂ ರೈತರ ಸೇರದ ಹಣ; ಬ್ಯಾಂಕ್ ಖಾತೆ ತೊಂದರೆಯಿಂದ ಅನ್ನದಾತರು ಹೈರಾಣ

ಐದು ಸಾವಿರ ಹಣ ಪಡೆಯುವಾಗ ಅಧಿಕಾರಿ ಮಲ್ಲಿಕಾರ್ಜುನ ಬಾಬು ಸಿಕ್ಕಿಹಾಕಿಕೊಂಡಿದ್ದಾನೆ. ಈತನ ವಿಚಾರಣೆ ನಡೆಸಿ ಎಸಿಬಿ ಪೊಲೀಸರು ಬಂಧನ ಮಾಡಿದ್ದಾರೆ. ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸಿಬಿ ಎಸ್​ಪಿ ಮಹೇಶ‌ ಮೇಘಣ್ಣನವರ್ ಅವರು ಮಾತನಾಡಿ, 5 ಸಾವಿರ ರೂ ಲಂಚದ ಹಣ ಪಡೆಯುವಾಗ ತೋಟಗಾರಿಕೆ ಇಲಾಖೆ ಅಧಿಕಾರಿ ‌ಮಲ್ಲಿಕಾರ್ಜುನ ಸಿಕ್ಕಿಹಾಕಿಕೊಂಡಿದ್ದು ಈಗ ವಿಚಾರಣೆ ಮಾಡಿ ಬಂಧಿಸಲಾಗಿದೆ ಎಂದರು.

ACB raid on horticulture department
ಎಸಿಬಿ ಬಲೆಗೆ ಬಿದ್ದ ತೋಟಗಾರಿಕೆ ಇಲಾಖೆ ಅಧಿಕಾರಿ (ಎಡದಿಂದ ಎರಡನೆಯವರು)


ಜಿಲ್ಲಾಡಳಿತ ಭವನದಲ್ಲಿ ಹಣ ಪೀಕುವ ಅಧಿಕಾರಿಗಳು...!

ಯಾದಗಿರಿ ಜಿಲ್ಲಾಡಳಿತ ಭವನದಲ್ಲಿ ಹಲವಾರು ಇಲಾಖೆ ಕಚೇರಿಗಳಿವೆ. ಆದರೆ, ಕೆಲ ಕಚೇರಿಯಲ್ಲಿ ಅಧಿಕಾರಿಗಳು ಹಣ ಪೀಕುವ ಕೆಲಸ ಮಾಡುತ್ತಿದ್ದು ಎಸಿಬಿ ಅಧಿಕಾರಿಗಳ ದಾಳಿಯಿಂದ ನಿಜಬಣ್ಣ ಹೊರಬರುತ್ತಿದೆ. ಒಂದೇ ತಿಂಗಳಲ್ಲಿ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಸೆಪ್ಟೆಂಬರ್ ತಿಂಗಳು 23 ರಂದು ಜಿಲ್ಲಾಧಿಕಾರಿ ಕಚೇರಿ ಮೇಲ್ಭಾಗದಲ್ಲಿಯೇ ಲೆಕ್ಕಪರಿಶೋಧನಾ ಇಲಾಖೆ ಕಚೇರಿ‌ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದಾಗ ಆಡಿಟ್ ಅಧಿಕಾರಿ ಪಿಡಿಓ ಅವರಿಂದ ಲಂಚದ ಹಣ ಪಡೆಯುವಾಗ ಸಿಕ್ಕಿಹಾಕಿಕೊಂಡಿದ್ದರು. ಈ ಘಟನೆ ನಡೆದ ಕೆಲವೇ ದಿನದಲ್ಲಿ ಮತ್ತೆ ಇಂದು ತೋಟಗಾರಿಕೆ ಇಲಾಖೆ ಅಧಿಕಾರಿ ಲಂಚದ ಹಣ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ. ಜಿಲ್ಲಾಡಳಿತ ಭವನದಲ್ಲಿಯೇ ಅಧಿಕಾರಿಗಳು ಲಂಚ ಪಡೆಯುವ ಕೆಲಸಕ್ಕೆ ಕೈಹಾಕಿದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.

ವರದಿ: ನಾಗಪ್ಪ ಮಾಲಿಪಾಟೀಲ
Published by:Vijayasarthy SN
First published: