ಪಕ್ಷಿ ಪ್ರೇಮಿ ಕುಟುಂಬವನ್ನು ಅರಸಿಬರುವ ಹಾರ್ನ್​​​ಬಿಲ್​​ : ಮಾನವನ ಪ್ರೀತಿಗಾಗಿ ಹಾತೊರೆಯುತ್ತೆ ಈ ಪಕ್ಷಿ

ಬೆಳಗ್ಗೆ, ಮಧ್ಯಾಹ್ನ ಸಂಜೆ ಹೀಗೆ ಮೂರು ಹೊತ್ತು ಮನೆ ಬಾಗಿಲಿಗೆ ಹಾರಿ ಬರುವ ಹಾರ್ನ್​​ಬಿಲ್​​ ಪಕ್ಷಿ ಮನೆಯವರೊಂದಿಗೆ ಆತ್ಮೀಯ ಒಡನಾಟ ಬೆಳಸಿಕೊಂಡಿದೆ.

ಹಾರ್ನ್​​ಬಿಲ್​​​​ ಪಕ್ಷಿ

ಹಾರ್ನ್​​ಬಿಲ್​​​​ ಪಕ್ಷಿ

  • Share this:
ಕಾರವಾರ(ಆಗಸ್ಟ್​. 18): ಮನುಷ್ಯರೊಂದಿಗೆ ಎಂದಿಗೂ ಬೆರೆಯದ ಅಪರೂಪದ ಪಕ್ಷಿಯೊಂದು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಕೇರಿಯಲ್ಲಿ ಒಂದು ಕುಟುಂಬದೊಂದಿಗೆ ಅನ್ಯೋನ್ಯತೆಯ ಬಾಂಧವ್ಯ ಬೆಸೆದುಕೊಂಡಿದೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೊನ್ನೆಕೇರಿ ಗ್ರಾಮದ ಕೃಷ್ಣಾನಂದ ಶೇಟ್ ಎಂಬುವವರ ಮನೆಗೆ ಪ್ರತಿನಿತ್ಯ ಬರುವ " ಹಾರ್ನ್ ಬಿಲ್ " ಪಕ್ಷಿಯೊಂದು ಎಲ್ಲರ ಗಮನ ಸೆಳೆಯುತ್ತಿದೆ.

ಬೆಳಗ್ಗೆ, ಮಧ್ಯಾಹ್ನ ಸಂಜೆ ಹೀಗೆ ಮೂರು ಹೊತ್ತು ಮನೆ ಬಾಗಿಲಿಗೆ ಹಾರಿ ಬರುವ ಪಕ್ಷಿ ಮನೆಯವರೊಂದಿಗೆ ಆತ್ಮೀಯ ಒಡನಾಟ ಬೆಳಸಿಕೊಂಡಿದೆ. ವಿಶೇಷ ಅಂದ್ರೆ ಸುತ್ತ ಮುತ್ತ ಹತ್ತಾರು ಮನೆಗಳಿದ್ದರು ಕೂಡ ಪಕ್ಷಿ ಮಾತ್ರ ತಪ್ಪದೆ ಕೃಷ್ಣಾನಂದ ಅವರ ಮನೆಗೆ ಬರುತ್ತದೆ.

ಮನೆಯವರಿಗೂ ಹಾರ್ನ್ ಬಿಲ್ ಪಕ್ಷಿ ಕಂಡ್ರೆ ಪಂಚಪ್ರಾಣ. ಮನೆಗೆ ಬರುವುದನ್ನೇ ಪ್ರತಿ ನಿತ್ಯ ಎದುರು ನೋಡುವ ಮಕ್ಕಳು ಮನೆಯಲ್ಲಿ ಮಾಡಿದ ಚಪಾತಿ, ದೋಸೆ ಹಾಗೂ ಬಾಳೆ ಹಣ್ಣುಗಳನ್ನು ನೀಡಿದಾಗ ಖುಷಿಯಿಂದಲೇ ಸೇವನೆ ಮಾಡುತ್ತದೆ. ಅದರಲ್ಲಿಯೂ ಜಿಲೆಬಿ ಅಂದ್ರೆ ಪಕ್ಷಿಗೆ ತುಂಬಾ ಇಷ್ಟ, ಮನೆಯ ಒಳಭಾಗದವರೆಗೂ ತೆರಳುವ ಹಕ್ಕಿ ಮಕ್ಕಳೊಂದಿಗೆ ಆಟ ಆಡುತ್ತದೆ. ಮೊದಲು ಪಕ್ಷಿ ನೋಡಿದಾಗ ಕರೆದು ಆಹಾರ ನೀಡಿದ್ದೆವು. ಅದನ್ನು ತಿಂದ ಪಕ್ಷಿ ಮತ್ತೆ ಮತ್ತೆ ಬಂದಾಗ ತುಂಬಾ ಖುಷಿಯಾಗಿ ಇದೀಗ ನಮ್ಮ ಕುಟುಂಬದ ಸದಸ್ಯರ ರೀತಿಯೇ ಆಗಿದೆ ಎನ್ನುತ್ತಾರೆ ಮನೆಯವರು.

ಇನ್ನು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಕಂಡು ಬರುವ ಈ ಹಕ್ಕಿಗಳು ದಾಂಡೇಲಿ ಭಾಗಗಳಲ್ಲಿ ಹೇರಳವಾಗಿವೆ . ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆಯೂ ಅಪರೂಪಕ್ಕೊಂದು ಗೋಚರಿಸುತ್ತವೆ. ಕನ್ನಡದಲ್ಲಿ ಮಂಗಟ್ಟೆ ಎಂದು ಕರೆಯುವ ಈ ಪಕ್ಷಿಗಳಿಗೆ ನಾಚಿಕೆ ಹೆಚ್ಚು ಮಾತ್ರವಲ್ಲದೆ ಉದ್ದ ಕೊಕ್ಕು ಹೊಂದಿದ್ದು, ಗಾತ್ರದಲ್ಲಿಯೂ ದೊಡ್ಡದಾಗಿರುತ್ತವೆ. ಇಂತಹ ಪಕ್ಷಿ ಇದೀಗ ಮನೆಯವರೊಂದಿಗೆ ಆತ್ಮೀಯ ಒಡನಾಟ ಬೆಳಸಿರುವುದು ಅಚ್ಚರಿಗೂ ಕಾರಣವಾಗಿದೆ.

ಕಳೆದ ಸುಮಾರು ಆರು ತಿಂಗಳಿಂದ ಬರುವ ಪಕ್ಷಿಯಿಂದಾಗಿ ಮನೆಯವರು ಫುಲ್ ಖುಷಿಯಾಗಿದ್ದಾರೆ. ಪಕ್ಷಿ ಮನೆಗೆ ಬರುವ ವಿಷಯ ತಿಳಿದ ಜನ ಕೂಡ ಪ್ರತಿನಿತ್ಯ ಬಂದು ನೋಡಿ ಆನಂದಿಸಿ ತೆರಳುತ್ತಿದ್ದಾರೆ. ಬೆಳಿಗ್ಗೆ 6.30ರ ಸುಮಾರಿಗೆ ಬರುವ ಹಕ್ಕಿ ನಾವು ಕರೆದಾಗ ಮನೆ ಬಾಗಿಲಿಗೆ ಬರುತ್ತದೆ. ಬಳಿಕ ಅದಕ್ಕೆ ಹಣ್ಣು ತಿಂಡಿ ನೀಡುತ್ತೇವೆ. ಬಳಿಕ ಅದರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತೇವೆ. ಅದು ಕೂಡ ನಮ್ಮೊಂದಿಗೆ ಆಡುತ್ತದೆ. ಇದರಿಂದ ನಮಗೂ ಕೂಡ ತುಂಬಾ ಖುಷಿಯಾಗುತ್ತದೆ ಎನ್ನುತ್ತಾರೆ ಮಕ್ಕಳು .

ಇನ್ನು ಹಾರ್ನ್ ಬಿಲ್ ಕೃಷ್ಣಾನಂದ ಮನೆಗೆ ಬರುತ್ತಿರುವುದನ್ನು ತಿಳಿದ ಅವರ ಸಂಬಂಧಿಕರು ಹಾಗೂ ಜನರು ಬಂದು ಹೋಗುತ್ತಿದ್ದಾರೆ . ಮೊದ ಮೊದಲು ಹೆಚ್ಚಿನ ಜನರನ್ನು ಕಂಡರೆ ಹೆದರುತ್ತಿದ್ದ ಪಕ್ಷಿ ಇದೀಗ ಯಾರೇ ಬಂದರು ಅವರೊಂದಿಗೆ ಸಲುಗೆಯಿಂದ ಇರುತ್ತದೆ. ಇದರಿಂದ ಮನೆಯರಿಗೂ ಒಂದು ದಿನವೂ ಹಕ್ಕಿಯನ್ನು ನೋಡದೇ ಇರಲಾರದಷ್ಟು ಬಾಂಧವ್ಯ ಬೆಸೆದುಕೊಂಡಿದೆ .

ಒಟ್ಟಾರೆ ಮನುಷ್ಯನನ್ನು ಕಂಡರೇ ಹಾರಿ ಹೋಗುವ ಪಕ್ಷಿಗಳ ಪೈಕಿ ಗ್ರೇಟ್ ಇಂಡಿಯನ್ ಹಾರ್ನ್ ಬಿಲ್ ಪಕ್ಷಿಯೂ ಕೃಷ್ಣಾನಂದ ಅವರ ಕುಟುಂಬದವರೊಂದಿಗೆ ವಿಶೇಷ ಬಾಂಧವ್ಯ ಬೆಳಸಿಕೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿದೆ .
Published by:G Hareeshkumar
First published: