ಕಾರವಾರ: ಸೇತುವೆ ನಿರ್ಮಾಣಕ್ಕಾಗಿ ಮೂರು ವರ್ಷಗಳ ಹಿಂದೆ ಪಿಲ್ಲರ್ ಅಳವಡಿಸಿದರೂ ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡದ ಸೇತುವೆ (Uttara Kannada District Salkoda Bridge) ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ತಾತ್ಕಾಲಿಕ ಸಂಪರ್ಕದ ಕೊಂಡಿಯಾಗಿರುವ ಅಡಿಕೆ ದಬ್ಬೆಯ ಮೇಲೆ ಮಕ್ಕಳು, ಗ್ರಾಮಸ್ಥರು ಪ್ರತಿನಿತ್ಯ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಮಳೆಗಾಲದಲ್ಲಿ ಇವರ ಸಂಕಷ್ಟ ಹೇಳತೀರದಾಗಿದೆ.
ಮೂರು ವರ್ಷದ ಹಿಂದೆ ಸಾಲ್ಕೋಡ ಗ್ರಾಮಕ್ಕೆ ಸಂಪರ್ಕಿಸಲು ಸೇತುವೆ ಮಂಜೂರಾಗಿ, 2018ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಮೂರೇ ತಿಂಗಳಲ್ಲಿ ಪಿಲ್ಲರ್ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ನಂತರದಲ್ಲಿ ಗುತ್ತಿಗೆದಾರ ಮಾಯವಾಗಿದ್ದು, ಈವರೆಗೂ ಸೇತುವೆ ಕಾಮಗಾರಿ ಮುಗಿಸಿಲ್ಲ. ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ಜನರು ಪ್ರತಿ ದಿನ ಪಟ್ಟಣಕ್ಕೆ ಹೋಗಬೇಕು ಎಂದರೆ ಈ ಮಾರ್ಗದ ಮೂಲಕವೇ ಸಾಗಬೇಕು. ಸೇತುವೆ ಆಗದ ಕಾರಣ ಚಿಕ್ಕ ಪುಟ್ಟ ವಾಹನ ಸಹ ಈ ಭಾಗದಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ಶಾಲಾ ಮಕ್ಕಳು, ಗ್ರಾಮದವರು ಓಡಾಡಲು ಪಿಲ್ಲರ್ಗಳ ಮೇಲೆ ಅಡಿಕೆ ಮರದ ಸಂಕ ನಿರ್ಮಿಸಿಕೊಂಡು ಅದರಲ್ಲೇ ಸಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಸಂಕದ ಕೆಳಭಾಗದಲ್ಲಿ ಹಳ್ಳವು ಕೂಡ ತುಂಬಿ ಹರಿಯುತ್ತಿದ್ದು, ಕೆಲವೊಮ್ಮೆ ಹಳ್ಳದಲ್ಲಿ ಪ್ರವಾಹ ಬಂದು ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಅಪೂರ್ಣಗೊಂಡಿರುವ ಸೇತುವೆಯನ್ನು ಪೂರ್ಣಗೊಳಿಸಿಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ, ಶಾಸಕರಿಗೆ ಮನವಿ ನೀಡಿದರೂ ಈವರೆಗೂ ಯಾವುದೇ ಕಾರ್ಯ ಪ್ರಾರಂಭವಾಗಿಲ್ಲ. ಹೀಗಾಗಿ ಈ ಬಾರಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯನ್ನು ಇಲ್ಲಿನ ಜನ ಬಹಿಷ್ಕರಿಸಲು ಮುಂದಾಗಿದ್ದಾರೆ.
ಗ್ರಾಮ ಪಂಚಾಯಿತಿಯಿಂದ ಇತ್ತೀಚಿಗೆ ಅಲ್ಪ ಹಣ ಹಾಕಿ ಅಡಿಕೆ ಮರದ ಸಂಕ ನಿರ್ಮಿಸಿಕೊಟ್ಟಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಸಹ ಈ ಭಾಗಕ್ಕೆ ಬಂದು ಸಮಸ್ಯೆ ಆಲಿಸಿ ಹೋಗಿದ್ದಾರೆ. ಆದರೆ ಯಾವುದೇ ಪ್ರತಿಫಲ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.
ಮಳೆ ಹೆಚ್ಚಾದ ವೇಳೆಯಲ್ಲಿ ನೀರು ಉಕ್ಕಿ ಹರಿಯುವಾಗ ಒಂದೊಮ್ಮೆ ಸಂಕದಿಂದ ಕಾಲು ಜಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಆತಂಕದಿಂದಲೇ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಗ್ರಾಮದ ಜನರ ಸಮಸ್ಯೆಯನ್ನ ಬಗೆಹರಿಸಿಕೊಡಬೇಕಿದೆ.
ಮಳೆಗಾಲದಲ್ಲಿ ಅಪಾಯದ ಸ್ಥಿತಿ
ಕಳೆದ ತಿಂಗಳು ಸುರಿದ ಭಾರಿ ಮಳೆಗೆ ಇಲ್ಲಿ ಹರಿಯುವ ಭಾಸ್ಕೇರಿ ನದಿ ಉಕ್ಕಿ ಹರಿದಿದ್ದು ಅಡಿಕೆ ಮರದ ದಬ್ಬೆ ಕೊಚ್ಚಿಹೋಗಿತ್ತು. ಬಳಿಕ ಮತ್ತೆ ಸರಿಪಡಿಸಿಕೊಂಡು ಈಗ ಇದೆ ಅಪಾಯದ ಸ್ಥಿತಿಯಲ್ಲೆ ಇಲ್ಲಿ ಓಡಾಟ ನಡೆಸುತ್ತಿದ್ದಾರೆ ಜನರು. ಅಡಿಕೆ ದಬ್ಬೆಯ ಮೇಲೆ ನಡೆಯುವಾಗ ಕೊಂಚ ಆಯ ತಪ್ಪಿದ್ರು ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಕೂಡಲೇ ಕಾಮಗಾರಿ ಪೂರ್ಣ ಗೊಳಿಸಿ ಉತ್ತಮ ವ್ಯವಸ್ಥೆ ಕಲ್ಪಿಸಿಕೊಡಲು ಗ್ರಾಮಸ್ಥರು ಆಡಳಿತ ವ್ಯವಸ್ಥೆಗೆ ಮನವಿ ಮಾಡಿದ್ದಾರೆ.
ಇದನ್ನುಓದಿ: Koo Application: 'ಕೂ' ಅಪ್ಲಿಕೇಶನ್ ಪ್ರವೇಶಿಸಿದ ಶ್ರೀ ಸಿದ್ದಗಂಗಾ ಮಠ; ದಿನನಿತ್ಯ ಕಾರ್ಯಕ್ರಮಗಳು ಆ್ಯಪ್ನಲ್ಲಿ ಲಭ್ಯ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ. ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ