Eco Beach: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಇಕೋ ಬೀಚ್​ಗೆ ಮತ್ತೆ ಅಂತರಾಷ್ಟ್ರೀಯ ಮನ್ನಣೆ!

ಜಿಲ್ಲೆಯ ಇಕೋ ಕಡಲ ತೀರಕ್ಕೆ ಎರಡನೇಯ ಬಾರಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ. ಸದ್ಯ ಕೊರೋನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಉತ್ತೇಜನ ಸಿಗುವಂತಾಗಲೀ ಅನ್ನೋದೇ ನಮ್ಮ ಆಶಯ.

ಹೊನ್ನಾವರದ ಇಕೋ ಬೀಚ್

ಹೊನ್ನಾವರದ ಇಕೋ ಬೀಚ್

  • Share this:
ಕಾರವಾರ: (Karawara) ಪ್ರವಾಸಿ ತಾಣಗಳ ತವರೂರು ಅಂತಲೇ ಪ್ರಸಿದ್ಧಿಯಾಗಿರುವ ಜಿಲ್ಲೆ ಉತ್ತರ ಕನ್ನಡ. ಇಲ್ಲಿನ ಹತ್ತು ಹಲವು ಪ್ರವಾಸಿ ಸ್ಥಳಗಳು ಪ್ರವಾಸಿಗರ ಅಚ್ಚುಮೆಚ್ಚಿನ ತಾಣಗಳಾಗಿದ್ದು ಇದರೊಂದಿಗೆ ವಿಶಾಲವಾಗಿರುವ ಕಡಲ ತೀರಗಳು ದೇಶ, ವಿದೇಶಗಳ ಪ್ರವಾಸಿಗರನ್ನೂ ತನ್ನತ್ತ ಕೈ ಬೀಸಿ ಕರೆಯುತ್ತಿವೆ. ಕಳೆದ ವರ್ಷವಷ್ಟೇ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಕೋ ಕಡಲತೀರಕ್ಕೆ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ (Blue flag Recognition Of International Recognition)ಲಭಿಸಿದ್ದು ಈ ಬಾರಿ ಸಹ ತನ್ನ ಗುಣಮಟ್ಟವನ್ನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಕರಾವಳಿ ಜಿಲ್ಲೆ ಉತ್ತರಕನ್ನಡದ ಹೊನ್ನಾವರ ತಾಲ್ಲೂಕಿನ ಕಾಸರಕೋಡ್‌ನಲ್ಲಿ ಜಿಲ್ಲಾಡಳಿತವು ಇಕೋ ಬೀಚ್‌ (Honnavara Eco Beach)ಅನ್ನು ನಿರ್ಮಾಣ ಮಾಡಿತ್ತು. ಪರಿಸರ ಸ್ನೇಹಿ ಅಭಿವೃದ್ಧಿ ಕಾರ್ಯಗಳನ್ನ ಮಾಡುವ ಮೂಲಕ ಕಡಲ ತೀರವನ್ನ ಪ್ರವಾಸೋದ್ಯಮ ಸ್ನೇಹಿಯಾಗಿ ನಿರ್ಮಾಣ ಮಾಡಿತ್ತು. ಈ ಮೂಲಕ ಕಳೆದ ವರ್ಷವಷ್ಟೇ ಜಿಲ್ಲೆಯ ಇಕೋ ಕಡಲತೀರಕ್ಕೆ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಲಭಿಸಿದ್ದು ಇದು ಜಿಲ್ಲೆಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವಂತಾಗಿತ್ತು. ಈ ಬಾರಿಯೂ ಸಹ ಇಕೋ ಬೀಚ್ ತನ್ನ ಗುಣಮಟ್ಟವನ್ನ ಕಾಯ್ದುಕೊಂಡಿದ್ದು ಈ ಮೂಲಕ ಮತ್ತೊಮ್ಮೆ ಬ್ಲೂ ಫ್ಲ್ಯಾಗ್ ಹಾರಾಟಕ್ಕೆ ಅನುಮತಿ ಪಡೆದುಕೊಂಡಿದೆ. ಇಕೋ ಕಡಲ ತೀರದಲ್ಲಿ ಪ್ರವಾಸಿಗರ ಅನುಕೂಲದ ದೃಷ್ಟಿಯಿಂದ ಕಳೆದ ವರ್ಷ ಸುಮಾರು 8 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನ ಕೈಗೊಂಡಿತ್ತು. ಕಡಲತೀರದ ಸುಮಾರು 750 ಮೀಟರ್ ವ್ಯಾಪ್ತಿಯಲ್ಲಿ ಪ್ರವಾಸಿಗರು ಕುಳಿತುಕೊಳ್ಳಲು ವಿನೂತನ ಬಗೆಯ ಆಸನ ವ್ಯವಸ್ಥೆ, ವಾಚ್ ಟವರ್, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪರಿಸರ ಸ್ನೇಹಿ ಸೌಲಭ್ಯಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಇದರೊಂದಿಗೆ ಮಕ್ಕಳ ಆಟಿಕೆಗಳನ್ನ ಸಹ ಅಳವಡಿಸಲಾಗಿದ್ದು ಅಂತರಾಷ್ಟ್ರೀಯ ಗುಣಮಟ್ಟವನ್ನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಡಲ ತೀರದಲ್ಲಿ ಸ್ವಚ್ಛತೆಯನ್ನ ಸಹ ಕಾಯ್ದುಕೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇಕೋ ಕಡಲತೀರಕ್ಕೆ ಬ್ಲೂ ಫ್ಯಾಗ್ ಮಾನ್ಯತೆ ಲಭಿಸಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಿತ್ತು. ಈ ಬಾರಿ ಸಹ ಜಿಲ್ಲಾಡಳಿತ ಕಡಲ ತೀರದಲ್ಲಿನ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನಿರ್ವವಹಿಸಿದ ಪರಿಣಾಮ ಈ ವರ್ಷವೂ ಇಕೋ ಕಡಲತೀರದಲ್ಲಿ ಬ್ಯೂ ಫ್ಲ್ಯಾಗ್ ಹಾರಾಡಲಿದೆ.

ಎರಡನೇ ಬಾರಿಗೆ ಬ್ಲೂ ಫ್ಲಾಗ್ ಹಾರಾಟದ ಗರಿಮೆ

ಇನ್ನು ಕಳೆದ ವರ್ಷ ಕೊರೋನಾ ಮೊದಲನೇ ಅಲೆಯ ಬಳಿಕ ಸಾಕಷ್ಟು ಪ್ರವಾಸಿಗರು ಬ್ಯೂ ಫ್ಲಾಗ್ ಕಡಲತೀರಕ್ಕೆ ಭೇಟಿ ನೀಡಿದ್ದರು. ಕುಟುಂಬಸ್ಥರು, ಮಕ್ಕಳು ಸಹ ಕಡಲತೀರಕ್ಕೆ ಆಗಮಿಸಿ ಎಂಜಾಯ್ ಮಾಡಲು ಅನುಕೂಲಕರ ವಾತಾವರಣ ಇರುವುದರಿಂದಾಗಿ ಪ್ರವಾಸಿಗರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜೊತೆಗೆ ಕಡಲತೀರದ ನಿರ್ವಹಣೆಗಾಗಿಯೇ ಸಿಬ್ಬಂದಿ ನಿಯೋಜನೆ ಮಾಡಿದ್ದು ಪ್ರತಿನಿತ್ಯ ಬೀಚ್‌ ಅನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಗೆ ಪ್ರವಾಸಿಗರ ಸುರಕ್ಷತೆಗೂ ಇದರಿಂದ ಅನುಕೂಲವಾಗಿತ್ತು. ಈ ಬಾರಿ ತೌಕ್ತೆ ಚಂಡಮಾರುತ ಅಪ್ಪಳಿಸಿದ ವೇಳೆ ಕಡಲತೀರದ ಒಂದು ಬದಿಗೆ ಕೊಂಚ ಹಾನಿಯಾಗಿತ್ತಾದರೂ ಇಲ್ಲಿನ ಸಿಬ್ಬಂದಿ ಕಡಲತೀರವನ್ನ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡಿದ್ದರು. ಈ ಹಿನ್ನಲೆ ಈ ಬಾರಿಯೂ ಸಹ ಕಡಲತೀರಕ್ಕೆ ಬ್ಯೂ ಫ್ಲ್ಯಾಗ್ ಮನ್ನಣೆ ಲಭಿಸುವಂತಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಖ್ಯಾತಿಯನ್ನ ಹೆಚ್ಚಿಸುವಂತಾಗಿದೆ.

ಇದನ್ನು ಓದಿ: Stars Movies: ಸ್ಯಾಂಡಲ್‍ವುಡ್ ದಸರಾದಲ್ಲಿ ಕೋಟಿಗೊಬ್ಬನ ಅಂಬಾರಿ? ದುನಿಯಾ ವಿಜಯ್ ಕೂಡ ನಡೆಸಲಿದ್ದಾರೆ ಸಲಗ ಸವಾರಿ!

ಒಟ್ಟಿನಲ್ಲಿ ಜಿಲ್ಲೆಯ ಇಕೋ ಕಡಲ ತೀರಕ್ಕೆ ಎರಡನೇಯ ಬಾರಿ ಅಂತರಾಷ್ಟ್ರೀಯ ಮಾನ್ಯತೆಯ ಬ್ಲೂ ಫ್ಲ್ಯಾಗ್ ಮನ್ನಣೆ ಸಿಕ್ಕಿರುವುದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ. ಸದ್ಯ ಕೊರೋನಾ ಅಬ್ಬರದಿಂದಾಗಿ ಮಂಕಾಗಿರುವ ಉತ್ತರಕನ್ನಡ ಪ್ರವಾಸೋದ್ಯಮಕ್ಕೆ ಇದರಿಂದ ಉತ್ತೇಜನ ಸಿಗುವಂತಾಗಲೀ ಅನ್ನೋದೇ ನಮ್ಮ ಆಶಯ.
Published by:HR Ramesh
First published: