ಹುಬ್ಬಳ್ಳಿ(ಜುಲೈ.07): ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಬಿಟ್ಟು ಹೋಗಿದ್ದ 15, 820 ರೂಪಾಯಿ ನಗದು ಹಣ ಮತ್ತು ಬೆಲೆ ಬಾಳುವ ದಾಖಲಾತಿಗಳನ್ನು ವಾರಸುದಾರರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ನಿರ್ವಾಹಕ ಗುರುಸಿದ್ದಯ್ಯ ಜಿ. ಗೌಡರ್ ಮತ್ತು ಚಾಲಕ ಬಸವರಾಜ ಎನ್. ಬಾದಾಮಿ ರವರನ್ನು ವಾಕರಸಾ ಸಂಸ್ಥೆಯ ಹುಬ್ಬಳ್ಳಿ ವಿಭಾಗೀಯ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಮತ್ತು ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ್ ಗೌರವಿಸಿ ಅಭಿನಂದಿಸಿದರು.
ವಾಕರಸಾ ಸಂಸ್ಥೆಯ ಬಾಗಲಕೋಟೆ ವಿಭಾಗದ ಗುಳೇದಗುಡ್ಡ ಘಟಕಕ್ಕೆ ಸೇರಿದ ಕೆ.ಎ.29 ಎಫ್ 1251 ಸಂಖ್ಯೆಯ ಬಸ್ಸು ಜುಲೈ 2 ರಂದು ಗುಳೇದಗುಡ್ಡ ದಿಂದ ಹುಬ್ಬಳ್ಳಿಗೆ ಬರುವಾಗ ಸದರಿ ಬಸ್ಸಿನಲ್ಲಿ ನವಲಗುಂದ ದಿಂದ ಹುಬ್ಬಳ್ಳಿಗೆ ಪ್ರಯಾಣ ಮಾಡಿದ ಪ್ರಯಾಣಿಕರೊಬ್ಬರು ಹುಬ್ಬಳ್ಳಿಯ ಹೊಸೂರು ಪ್ರಾದೇಶಿಕ ಬಸ್ ನಿಲ್ದಾಣದಲ್ಲಿ ಇಳಿಯುವಾಗ ತಮ್ಮ ಪರ್ಸ್ ನ್ನು ಬಸ್ಸಿನಲ್ಲಿಯೇ ಬಿಟ್ಟು ಹೋಗಿರುತ್ತಾರೆ. ನಂತರ ಹುಬ್ಬಳ್ಳಿಯಿಂದ ಗುಡ್ಡಕ್ಕೆ ಹೊರಡುವುದಕ್ಕಾಗಿ ಬಸ್ಸನ್ನು ಬಸ್ ನಿಲ್ದಾಣದಲ್ಲಿ ಅಂಕಣಕ್ಕೆ ನಿಲ್ಲಿಸುವಾಗ ನಿರ್ವಾಹಕರು ಪ್ರಯಾಣಿಕರ ಆಸನದಲ್ಲಿ ಪರ್ಸ್ ಇರುವುದನ್ನು ಗಮನಿಸಿರುತ್ತಾರೆ.
ಪರ್ಸ್ ನ್ನು ಪರಿಶೀಲಿಸಲಾಗಿ ಅದರಲ್ಲಿ 15, 820 ರೂ. ನಗದು ಹಣದ ಜೊತೆಗೆ ಮೂರು ಎಟಿಎಂ ಕಾರ್ಡ್ ಗಳು, ಪಾನ್ ಕಾರ್ಡ್, ಚಾಲನಾ ಪರವಾನಿಗೆ, ದ್ವಿಚಕ್ರ ವಾಹನದ ಆರ್. ಸಿ. ಪುಸ್ತಕ ಮತ್ತಿತರ ಮುಖ್ಯ ದಾಖಲೆಗಳು ಇರುವುದು ಕಂಡು ಬಂದಿರುತ್ತದೆ.ಅದರಲ್ಲಿ ಪ್ರಯಾಣಿಕರ ಹೆಸರು,ವಿಳಾಸ, ದೂರವಾಣಿ ಸಂಖ್ಯೆ ಲಭ್ಯವಿಲ್ಲದ್ದರಿಂದ ಪರ್ಸ್ ನಲ್ಲಿದ್ದ ಎಟಿಎಂ ಕಾರ್ಡ್ ಮೂಲಕ ಹುನಗುಂದದ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ.
ಪ್ರಯಾಣಿಕರನ್ನು ತುಮಕೂರು ಮೂಲದ ಹಾಲಿ ಹುಬ್ಬಳ್ಳಿ ನಿವಾಸಿ ಬಿ.ಎನ್. ನಟರಾಜು ಎಂಬುದಾಗಿ ಪತ್ತೆ ಮಾಡಿ ಅವರಿಗೆ ಪರ್ಸ್ ಸಿಕ್ಕಿರುವ ವಿಚಾರವನ್ನು ತಿಳಿಸಿರುತ್ತಾರೆ. ಸದರಿ ಪ್ರಯಾಣಿಕರನ್ನು ವಿಭಾಗ ಕಚೇರಿಗೆ ಕರೆಸಿ ನಿರ್ವಾಹಕರ ಮೂಲಕ ಅವರ ಪರ್ಸ್ ನ್ನು ಹಿಂದಿರುಗಿಸಲಾಗಿಯಿತು.
ಇದನ್ನೂ ಓದಿ : ಕೊರೋನಾ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿ ; ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚನೆ
ಪ್ರಾಮಾಣಿಕತೆ ಮೆರೆದು ಇತರರಿಗೆ ಮಾದರಿಯಾದ ಚಾಲಕ ಮತ್ತು ನಿರ್ವಾಹಕರಿಗೆ ನಗದು ಬಹುಮಾನಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ