ಚಿತ್ರದುರ್ಗ: ದೇಶ ಹಾಗೂ ರಾಜ್ಯದಲ್ಲಿ ಅದೆಷ್ಟೋ ಜನರು ವಾಸ ಮಾಡೋಕೆ ಮನೆಯೂ ಇಲ್ಲದೇ, ನೆಮ್ಮದಿಯ ನಿದ್ರೆಗೆ ಸೂರು ಇಲ್ಲದೆ ಬದುಕುತ್ತಿದ್ದಾರೆ. ಅಂತಹ ವಸತಿರಹಿತ ನಿರಾಶ್ರಿತರಿಗೆ ಆಶ್ರಯ ನೀಡೋ ನಿಟ್ಟಿನಲ್ಲಿ ಸರ್ಕಾರಗಳು ಅನೇಕ ಯೋಜನೆಗಳನ್ನ ಜಾರಿಗೆ ತಂದಿವೆ. ಆದರೆ ಆ ಯೋಜನೆಗಳು ಕಾರ್ಯ ರೂಪಕ್ಕೆ ಬರೋದು ಅತೀ ವಿರಳ. ಅದರ ನಡುವೆಯೂ ಕೆಲವೆಡೆ ಸರ್ಕಾರದ ಆ ಯೋಜನೆಗಳು ಸಾಕಾರಗೊಂಡಿವೆ. ಅದಕ್ಕೆ ಉದಾಹಾರಣೆ ಚಿತ್ರದುರ್ಗ ನಗರದ ಕೆಳಗೋಟೆಯಲ್ಲಿ ಚಿತ್ರದುರ್ಗ ನಗರಸಭೆ ವತಿಯಿಂದ ಡೇ-ನಲ್ಮ್ ಯೋಜನೆಯಡಿ ಚಿತ್ರದುರ್ಗ ನಗರದ ವಸತಿ ರಹಿತರಿಗೆ ಆಶ್ರಯ ಉಪ ಘಟಕದಡಿ ನಿರ್ಮಾಣವಾಗಿರುವ ಶಾಶ್ವತ ಆಶ್ರಯ ಕಟ್ಟಡ.
ನಗರದ ವಸತಿರಹಿತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಯೋಜನೆಯಡಿ ರೂ.45.00 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಈ ಕಟ್ಟಡವನ್ನು ಚಿತ್ರದುರ್ಗ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿ ಉದ್ಘಾಟಿಸಿದ್ದಾರೆ. ಶಾಶ್ವತ ಆಶ್ರಯ ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ನಗರಕ್ಕೆ ವಿವಿಧ ಕಡೆಯಿಂದ ನಿರ್ಗತಿಕರು ವಲಸೆ ಬರುತ್ತಾರೆ. ವಯೋ ವೃದ್ಧರು, ಮಕ್ಕಳಿಲ್ಲದವರು ಸೇರಿದಂತೆ ಅನೇಕರು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಫುಟ್ ಪಾತ್‍ನಲ್ಲಿ ವಾಸವಾಗಿರುತ್ತಾರೆ. ಇಂತಹ ನಿರಾಶ್ರಿತರ ರಕ್ಷಣೆ ಸರ್ಕಾರದ ಕರ್ತವ್ಯ ಆಗಿದ್ದು, ಅವರ ಸುರಕ್ಷತೆಗಾಗಿ ಕೇಂದ್ರ ಸರ್ಕಾರದ ಅನುದಾನದಿಂದ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
ಈ ಕಟ್ಟಡದಲ್ಲಿ ಸುಮಾರು 50 ರಿಂದ 60 ಜನರು ವಾಸ ಮಾಡಬಹುದಾಗಿದ್ದು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯ, ಸ್ನಾನದ ಕೊಠಡಿ ಸೇರಿದಂತೆ ಹೋಟೆಲ್‍ನಲ್ಲಿ ಇರುವ ಹಾಗೆಯೇ ಉತ್ತಮವಾದ ಸುಸಜ್ಜಿತ ಕೊಠಡಿಗಳ ಸೌಲಭ್ಯ ದೊರಯಲಿದೆ. ನಗರಸಭೆ ವತಿಯಿಂದ ಟೆಂಡರ್ ಕರೆದಿದ್ದು ಎನ್‍ಜಿಒಗಳಿಗೆ ಇದರ ನಿರ್ವಹಣೆ ವಹಿಸಲಾಗುವುದು ಎಂದು ಮಾಹಿತಿ ನೀಡಿದ್ಧಾರೆ.
ಇದನ್ನೂ ಓದಿ: ನಷ್ಟದ ಸುಳಿಯಲ್ಲಿ ಬಿಎಂಟಿಸಿ; ಸಾಲ ಪಡೆಯಲು ಬಸ್ಗಳನ್ನೇ ಅಡಮಾನ ಇಡಲು ಮುಂದಾದ ಅಧಿಕಾರಿಗಳು
ಚಿತ್ರದುರ್ಗ ನಗರಸಭೆ ವತಿಯಿಂದ ಮೊದಲು ಬಾಡಿಗೆ ಕಟ್ಟಡದಲ್ಲಿ ನಗರ ವಸತಿ ರಹಿತರಿಗೆ ಆಶ್ರಯ ಸೌಕರ್ಯ ಕಲ್ಪಿಸಲಾಗಿತ್ತು. ಇಲ್ಲಿ ಪ್ರತಿ ದಿನ 20 ರಿಂದ 30 ಜನ ನಿರಾಶ್ರಿತರು ವಾಸ ಮಾಡುತ್ತಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿದೆ. ಇಲ್ಲಿ ಆಶ್ರಯ ಪಡೆದವರಿಗೆ ಉಚಿತವಾಗಿ ಊಟದ ವ್ಯವಸ್ಥೆ ಕಲ್ಪಿಸಲಾಗುವುದು. ಇಲ್ಲಿ ತಂಗುವವರಿಗೆ ನಿರಾಶ್ರಿತರ ಪರಿಹಾರ ಕೇಂದ್ರದ ಮಾದರಿಯಲ್ಲಿ ಎಲ್ಲ ರೀತಿಯ ಸೌಕರ್ಯ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಬದ್ರಿನಾಥ್ ಮಾತನಾಡಿ, ಕೇಂದ್ರ ಸರ್ಕಾರದ ವತಿಯಿಂದ ನಗರ ವಸತಿ ರಹಿತರಿಗೆ ಆಶ್ರಯ ಕಟ್ಟಡ ನಿರ್ಮಾಣ ಮಾಡಲಾಗಿದೆ. ಚಿತ್ರದುರ್ಗ ನಗರದ ವಸತಿ ರಹಿತರಿಗೆ ಈ ಮೊದಲು ಬಾಡಿಗೆ ಕಟ್ಟಡದಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಇದೀಗ ಶಾಶ್ವತ ಆಶ್ರಯ ಕಟ್ಟಡ ನಿರ್ಮಾಣವಾಗಿದ್ದು, ನಿರಾಶ್ರಿತರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ವರದಿ: ವಿನಾಯಕ ತೊಡರನಾಳ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ