• Home
 • »
 • News
 • »
 • district
 • »
 • ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಘಟನೆ: ಸಿಐಡಿ ತನಿಖೆಗೆ ಗೃಹ ಸಚಿವರ ಆದೇಶ

ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ಘಟನೆ: ಸಿಐಡಿ ತನಿಖೆಗೆ ಗೃಹ ಸಚಿವರ ಆದೇಶ

ಸಚಿವ ಬಸವರಾಜ್​ ಬೊಮ್ಮಾಯಿ

ಸಚಿವ ಬಸವರಾಜ್​ ಬೊಮ್ಮಾಯಿ

ಚಿಕ್ಕಬಳ್ಳಾಪುರದಲ್ಲಿ ಪೆಟ್ರೋಲಿಯಂ ಜೆಲ್ ಮತ್ತು ಅಮೋನಿಯಮ್ ನೈಟ್ರೇಟ್​ನಿಂದ ಸ್ಫೋಟವಾಗಿದೆ. ಕೈಯಲ್ಲಿ ಎತ್ತಿ ಸಾಗಿಸುವಾಗ ಸ್ಫೋಟಗೊಂಡಿರಬಹುದು ಎಂಬುದು ಪ್ರಾಥಮಿಕ ಹಂತದ ತನಿಖೆಯಿಂದ ಮಾಹಿತಿ ತಿಳಿದುಬಂದಿದೆ ಎಂದು ಗೃಹಸಚಿವ ಬೊಮ್ಮಾಯಿ ತಿಳಿಸಿದ್ದಾರೆ.

 • Share this:

  ಚಿಕ್ಕಬಳ್ಳಾಪುರ(ಫೆ. 23): ಇಲ್ಲಿಯ ಗುಡಿಬಂಡೆ ಅರಣ್ಯ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಜಿಲೆಟಿನ್ ಸ್ಫೋಟ ಘಟನೆಯನ್ನು ಸಿಐಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಇಂದು ಬೆಳಗ್ಗೆ ದುರಂತ ಘಟನೆಯ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ಬಳಿಕ ಗೃಹ ಸಚಿವರು, ಈ ಘಟನೆ ಬಗ್ಗೆ ಬಹಳ ನೋವು ವ್ಯಕ್ತಪಡಿಸಿದರು. ಜನವರಿ 20ರಂದು ಶಿವಮೊಗ್ಗದ ಹುಣಸೋಡು ಗ್ರಾಮದ ಬಳಿ ಇಂಥದ್ದೇ ದುರಂತ ಘಟನೆ ನಡೆದಿತ್ತು. ಆದರೆ ಎಲ್ಲಾ ಜಿಲ್ಲಾಡಳಿತಗಳಿಗೂ ಕಟ್ಟೆಚ್ಚರದಲ್ಲಿರುವಂತೆ ಸೂಚನೆ ನೀಡಲಾಗಿತ್ತು. ಆದರೂ ಈಗ ಒಂದೇ ತಿಂಗಳಲ್ಲಿ ಇಲ್ಲಿ ದುರಂತ ಸಂಭವಿಸಿದೆ ಎಂದು ಚಿಕ್ಕಬಳ್ಳಾಪುರದ ಜಿಲ್ಲಾಡಳಿತವನ್ನು ಗೃಹ ಸಚಿವರು ತರಾಟೆಗೆ ತೆಗೆದುಕೊಂಡರು.


  ಗೃಹ ಸಚಿವರು ನೀಡಿದ ಮಾಹಿತಿ ಪ್ರಕಾರ, ಗೋಮಾಳ ಜಾಗದಲ್ಲಿ ಕ್ವಾರಿ ನಡೆಸಲಾಗುತ್ತಿತ್ತು. ನಾಗರಾಜ್ ಎಂಬುವವರಿಗೆ ಸೇರಿದ ಈ ಕ್ವಾರಿ ಮೂರು ಎಕರೆಯಲ್ಲಿದೆ. ಫೆ. 7ರಂದು ಪೊಲೀಸರು ಇಲ್ಲಿ ರೇಡ್ ಮಾಡಿ ಕೆಲ ವಾಹನಗಳನ್ನ ಸೀಜ್ ಮಾಡಿದ್ದರು. ಆ ವೇಳೆ ಸ್ಫೋಟಕಗಳನ್ನ ಮುಚ್ಚಿಟ್ಟಿರುವ ಸಾಧ್ಯತೆ ಇದೆ. ಹೊರಗಿನಿಂದ ಸ್ಫೋಟಕ ತರಲಾಗಿತ್ತೆ ಎಂಬುದು ಗೊತ್ತಾಗಬೇಕು. ಈ ಪ್ರಕರಣದಲ್ಲಿ ಸ್ಥಳೀಯ ಪೊಲೀಸರೂ ಶಾಮೀಲಾಗಿರಬಹುದು. ಎಸ್​ಪಿ ಆಗಲೀ, ಪಿಎಸ್​ಐ ಆಗಲೀ, ಇನ್ಸ್​ಪೆಕ್ಟರ್ ಆಗಲಿ ಯಾರೇ ತಪ್ಪಿತಸ್ಥರು ಇದ್ದರೂ ಕ್ರಮ ಕೈಗೊಳ್ಳುತ್ತೇವೆ. ಗಣಿ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆಯಿಂದ ತಪ್ಪಾಗಿದೆಯಾ ಎಂಬುದೆಲ್ಲವನ್ನೂ ಅವಲೋಕಿಸಲು ಸಿಐಡಿ ತನಿಖೆ ನಡೆಸಲಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.


  ಇದನ್ನೂ ಓದಿ: ಜಿಲೆಟಿನ್ ಸ್ಫೋಟ ಪ್ರಕರಣ: ಸರ್ಕಾರದ ಬೇಜವಾಬ್ದಾರಿಗೆ ಇನ್ನೆಷ್ಟು ಜೀವಗಳು ಬಲಿಯಾಗಬೇಕು?; ಡಿ.ಕೆ.ಶಿವಕುಮಾರ್ ಆಕ್ರೋಶ


  ಪೆಟ್ರೋಲಿಯಂ ಜೆಲ್ ಮತ್ತು ಅಮ್ಮೋನಿಯಮ್ ನೈಟ್ರೇಟ್​ನಿಂದ ಸ್ಫೋಟ ಸಂಭವಿಸಿರಬಹುದು ಎಂದು ತಜ್ಞರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ನೆಲದಲ್ಲಿ ಸ್ಫೋಟವಾಗಿಲ್ಲ. ಜಿಲೆಟಿನ್ ಕಡ್ಡಿಗಳನ್ನ ಎತ್ತಿಕೊಂಡು ಹೋಗುವಾಗ ಗಾಳಿಯಲ್ಲೇ ಸ್ಫೋಟವಾಗಿದೆ. ಇಬ್ಬರು ವ್ಯಕ್ತಿಗಳ ದೇಹ ಸಂಪೂರ್ಣವಾಗಿ ಛಿದ್ರವಾಗಿರುವುದರಿಂದ ಅವರಿಬ್ಬರು ಆ ಸ್ಫೋಟಕವನ್ನ ಸಾಗಿಸುತ್ತಿದ್ದಿರಬಹುದು ಎಂಬ ಶಂಕೆ ಇದೆ. ಈ ಸ್ಠೋಟಕಗಳನ್ನ ತಜ್ಞರು ಮಾತ್ರ ನಿರ್ವಹಿಸಬೇಕು. ಆದರೆ, ಇಲ್ಲಿ ತರಬೇತಿ ಇಲ್ಲ ಸ್ಥಳೀಯರನ್ನ ಈ ಸ್ಫೋಟಕ ಸಾಗಣೆಗೆ ಬಳಸಿಕೊಂಡಂತಿದೆ ಎಂದು ಗೃಹ ಸಚಿವರು ಮಾಹಿತಿ ನೀಡಿದರು.


  ಜಿಲ್ಲಾಡಳಿತದ ಅಧಿಕಾರಿಗಳಿಗೆ ಇದೇ ವೇಳೆ ಗೃಹ ಸಚಿವರು ಬೆವರಿಸಿಳಿಸಿದರು. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಮತ್ತು ಗಣಿ ಭೂವಿಜ್ಞಾನ ಇಲಾಖೆ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು. ಶಿವಮೊಗ್ಗದ ಸ್ಫೋಟದ ನಂತರ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕೆಂದು ತಿಳಿಸಲಾಗಿತ್ತು. ಆದರೂ ನೀವೇನು ಕಣ್ಮುಚ್ಚಿ ಕುಳಿತಿದ್ದೀರಾ? ಎಫ್​ಐಆರ್ ಆದ ಮೇಲೂ ಕ್ರಷರ್ ಮಾಲೀಕನನ್ನು ಯಾಕೆ ಬಂಧಿಸಲಿಲ್ಲ ಎಂದು ಜಿಲ್ಲಾಧಿಕಾರಿ ಲತಾ, ಎಸ್​ಪಿ ಮಿಥುನ್ ಕುಮಾರ್ ಅವರನ್ನ ಸಚಿವರು ಪ್ರಶ್ನಿಸಿದರು.


  ಇದನ್ನೂ ಓದಿ: ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕಿಂಗ್​ಮೇಕರ್ ಆದ ಜೆಡಿಎಸ್; ಎರಡೂ ಪಕ್ಷಗಳಿಗೆ ಜೆಡಿಎಸ್‌ ದೋಸ್ತಿಯೇ ಅನಿವಾರ್ಯ


  ಕಾಡಿನಲ್ಲಿ ಈ ಕ್ವಾರಿ ಇರುವುದರಿಂದ ಇಂಥ ದುರಂತ ಘಟನೆ ನಡೆದಾಗ ಮಾತ್ರ ಪ್ರಕರಣ ಬೆಳಕಿಗೆ ಬರುತ್ತಿದೆ. ಬೆಟ್ಟಗುಡ್ಡದಲ್ಲಿ ಇರುವುದರಿಂದ ಬಹಳ ದೊಡ್ಡ ಮಟ್ಟದಲ್ಲಿ ಕ್ವಾರಿ ನಡೆಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಮಾಡಿದರೆ ಸರಿ, ಇಲ್ಲವೆಂದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. 14 ಗಂಟೆಯೊಳಗೆ ರಿಪೋರ್ಟ್ ಕೊಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾಕಷ್ಟು ಕ್ವಾರಿಗಳು ಇರುವುದು ಗೊತ್ತಾಗಿದೆ. ಈ ಎಲ್ಲಾ ಕ್ವಾರೆಗಳಿಗೆ ಭೇಟಿ ನೀಡಿ ವರದಿ ನೀಡಲು ಜಿಲ್ಲಾಡಳಿತಕ್ಕೆ ತಿಳಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.


  ಹಿರೇನಾಗವಲ್ಲಿ ಗ್ರಾಮದಿಂದ 1 ಕಿಮೀ ದೂರದಲ್ಲಿ ಗುಡ್ಡದಲ್ಲಿ ನಿನ್ನೆ ರಾತ್ರಿ 12:30ಕ್ಕೆ ಭಾರೀ ಸ್ಫೋಟ ಸಂಭವಿಸಿದೆ. ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ ಇನ್ನೂ ಮೂವರು ಗಂಭೀರವಾಗಿ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸಿದ್ದಾರೆ.

  Published by:Vijayasarthy SN
  First published: