ಜೈಲಿನಲ್ಲಿನ ಅವ್ಯವಹಾರ ಸರಿಪಡಿಸಲು ಸೂಚಿಸಿದ್ದೇನೆ: ನ್ಯೂಸ್18 ವರದಿಯಿಂದ ಎಚ್ಚೆತ್ತ ಗೃಹ ಸಚಿವ

ಜೈಲಿನಲ್ಲಿರುವ ದೋಷಗಳ ಬಗ್ಗೆ ಖೈದಿಯೊಬ್ಬರು ಬರೆದಿದ್ದ ಬಹಿರಂಗ ಪತ್ರ ಬಗ್ಗೆ ನ್ಯೂಸ್18 ಕನ್ನಡ ವರದಿ ಬಿತ್ತರಿಸಿತ್ತು. ಅದರ ಬೆನ್ನಲ್ಲೇ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಅವ್ಯವಹಾರ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿರುವಾಗಿ ಹೇಳಿದ್ದಾರೆ.

ಅರಗ ಜ್ಞಾನೇಂದ್ರ

ಅರಗ ಜ್ಞಾನೇಂದ್ರ

  • Share this:
ಚಿಕ್ಕಮಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಹುಳುಕಗಳ ಬಗ್ಗೆ ಖೈದಿವೊಬ್ಬರು ಗೃಹ ಸಚಿವರಿಗೆ ಬಹಿರಂಗ ಪತ್ರ ಬರೆದಿರೋ ಬಗ್ಗೆ ನ್ಯೂಸ್ 18 ಕನ್ನಡದಲ್ಲಿ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಈ ನ್ಯೂಸ್ 18 ವರದಿ ಬೆನ್ನಲ್ಲೇ ತರೀಕೆರೆಯಲ್ಲಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಸ್ಪಂದಿಸಿದ್ದು, ಜೈಲಿನಲ್ಲಿ ಅವ್ಯವಹಾರ ಆಗೋದು ತನ್ನ ಗಮನದಲ್ಲಿದೆ, ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಮೊನ್ನೆ ಜೈಲಿಗೆ ಭೇಟಿ ನೀಡಿದ್ದಾಗ ಕೆಲವು ಲೋಪದೋಷಗಳು ನನ್ನ ಕಣ್ಣಿಗೆ ಬಿದ್ದಿವೆ. ಅಧಿಕಾರಿಗಳಿಗೆ ಸರಿಪಡಿಸುವಂತೆ ಸೂಚನೆ ನೀಡಿದ್ದೇನೆ. ನಾನು ಕೂಡ ಜೈಲಿಗೆ ಹೋಗಿಬಂದವನು. ಅಲ್ಲಿ ಏನು ನಡೆಯುತ್ತೆ ಅನ್ನೋದು ನನಗೆ ಗೊತ್ತು. ನಾನು ಎಮರ್ಜೆನ್ಸಿ ಟೈಮ್​ನಲ್ಲಿ ಆರು ತಿಂಗಳು ಜೈಲಿನಲ್ಲಿದ್ದೆ. ನಮಗೂ ಕೂಡ ಊಟ ಕೊಟ್ಟಿದ್ದು ಸರಿ ಇರಲಿಲ್ಲ ಎಂದು ಹೇಳುವ ಮೂಲಕ ಜೈಲಿನಲ್ಲಿ ಭ್ರಷ್ಟಾಚಾರ ನಡೆಯೋ ಬಗ್ಗೆ ಸತ್ಯ ಒಪ್ಪಿಕೊಂಡಿದ್ದಾರೆ.

ಮೈಸೂರಿನ ಅತ್ಯಾಚಾರ ಪ್ರಕರಣ ಭೇದಿಸಿದ ಪೊಲೀಸರಿಗೆ ಗೃಹ ಮಂತ್ರಿ ಶಹಬ್ಬಾಸ್​ಗಿರಿ: ಮೈಸೂರು ಅತ್ಯಾಚಾರ ಪ್ರಕರಣದಲ್ಲಿ ಯಾವ ಸಾಕ್ಷಿಗಳು ಇಲ್ಲ. ತೊಂದರೆಗೊಳಗಾದವರು ಹೇಳಿಕೆ ನೀಡಿಲ್ಲ. ನಮ್ಮ ಪೊಲೀಸರು ಪ್ರಕರಣವನ್ನ ಹೇಗೆ ಭೇದಿಸುತ್ತಾರೆ ಎಂದು ಅನ್ನಿಸಿತ್ತು. ಮಂತ್ರಿಯಾಗಿ ನಾನೇ ಕುತೂಹಲದಿಂದ ವೀಕ್ಷಿಸುತ್ತಿದ್ದೆ. ಆದರೆ, ನಮ್ಮ ಪೊಲೀಸರು 85 ಗಂಟೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಆಗ ನನ್ನ ಹೃದಯ ತುಂಬಿ ಬಂತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ 5ನೇ ತಂಡ ತರಬೇತಿ ಪಡೆದು ನಿರ್ಗಮಿತದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡುತ್ತಾ ಈ ವಿಚಾರವನ್ನು ಪ್ರಸ್ತಾಪಿಸಿದರು. ಪೊಲೀಸರು ಈ ಪ್ರಕರಣವನ್ನ ಹೇಗೆ ಹೊರ ತೆಗೆಯುತ್ತಾರೆ ಎಂದು ಅನ್ನಿಸಿತ್ತು. ಆದರೆ, ನಮ್ಮ ಪೊಲೀಸರು 85 ಗಂಟೆಯಲ್ಲೇ ಅವರನ್ನ ಬಂಧಿಸಿದಾಗ ಹೃದಯ ತುಂಬಿ ಬಂತು, ನಮ್ಮ ಪೊಲೀಸರ ಇಮೇಜ್ ಜಾಸ್ತಿಯಾಯ್ತು. ನಮ್ಮ ಪೊಲೀಸ್ ವ್ಯವಸ್ಥೆ ಅತ್ಯಂತ ಬಿಗಿಯಾಗಿದೆ. ವೈಜ್ಞಾನಿಕವಾಗಿ ಇಂತಹಾ ಪ್ರಕರಣಗಳನ್ನ ಪತ್ತೆ ಹಚ್ಚುವ ಎಲ್ಲಾ ಕಲೆ ನಮ್ಮ ಪೊಲಿಸರಿಗೆ ಕರಗತವಾಗಿದೆ ಎಂದರು.

ಇದನ್ನೂ ಓದಿ: ಮೆಟ್ರೋ ಲೈನ್ ಉದ್ಘಾಟನೆ ವೇಳೆ ಕನ್ನಡ ಕಡೆಗಣನೆ: ಸಚಿವ ಸುನೀಲ್ ಕುಮಾರ್ ನೊಟೀಸ್ ಜಾರಿ

ನಮ್ಮ ಸೇನಾ ಪಡೆ ಜಗತ್ತಿನ ಮೂರನೇ ಅತಿ ದೊಡ್ಡ ಪಡೆ. ಜಗತ್ತಿನಲ್ಲಿ ನಮ್ಮ ಪೊಲೀಸ್ ಪಡೆಗೂ ಅತ್ಯಂತ ಒಳ್ಳೆಯ ಹೆಸರಿದೆ. ಅದರಲ್ಲೂ ನಮ್ಮ ಕರ್ನಾಟಕದ ಪೊಲೀಸರಿಗೆ ಇದೆ ಎಂದು ತರಬೇತಿ ಪಡೆದ ನೂತನ ನಿರ್ಗಮಿತ ಪೊಲೀಸರಿಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಹುರಿದುಂಬಿಸಿದರು. ಮೈಸೂರು ಪ್ರಕರಣದ ಎಲ್ಲಾ ಅಪರಾಧಿಗಳನ್ನ ಬಂಧಿಸುತ್ತಿದ್ದಾರೆ. ಅವರಿಗೆ ಶಿಕ್ಷೆ ಆಗುವಂತೆ ನಮ್ಮ ಪೊಲೀಸರು ವಿಶೇಷ ಶ್ರಮ ವಹಿಸಿದ್ದಾರೆ. ಸರ್ಕಾರ ಕೂಡ ಅದರ ಬಗ್ಗೆ ವಿಶೇಷವಾದ ಆದ್ಯತೆ ನೀಡಿದೆ. ಮೈಸೂರಿನ ಎರಡೂ ಪ್ರಕರಣಗಳನ್ನ ಶಾರ್ಟ್ ಪಿರಿಯಡ್‍ನಲ್ಲಿ ಭೇದಿಸಿದ ಎಲ್ಲಾ ಪೊಲೀಸ್ ತಂಡಕ್ಕೆ ನನ್ನ ಕೃತಜ್ಞತೆ ಎಂದರು.

ಯಾರು ಅಪರಾಧ ಮಾಡುತ್ತಾರೋ ಅವರಿಗೆ ದೊಡ್ಡ ಸಂದೇಶ ಹೋಗಿದೆ. ಏನಾದರೂ ಮಾಡಿ ಹೇಗಾದರೂ ಬಚಾವ್ ಆಗಬಹುದು ಅನ್ನೋದು ಆಗಲ್ಲ. ಪೊಲೀಸರು ಅದರ ಹಿಂದೆ ಬೀಳುತ್ತಾರೆ. ಅದನ್ನ ಯಶಸ್ವಿಯಾಗಿ ಭೇದಿಸುತ್ತಾರೆ ಎಂದರು. ಸಂತ್ರಸ್ಥೆ ಈಗ ಹೇಳಿಕೆ ಕೊಡುವ ಸ್ಥಿತಿಯಲ್ಲಿ ಇಲ್ಲ. ಇಂತಹಾ ಸಮಯದಲ್ಲಿ ಹೆಚ್ಚು ಒತ್ತಡ ಹಾಕುವುದು ಸರಿಯಲ್ಲ. ನಮ್ಮ ಮಹಿಳಾ ಪೊಲೀಸ್ ಅಧಿಕಾರಿಗಳು ವಿಶೇಷ ಪ್ರಯತ್ನ ಮಾಡಿದರು. ಸ್ವಲ್ಪ ಸಮಯದ ನಂತರ ಸಂತ್ರಸ್ತೆ ಹೇಳಿಕೆ ನಿಡಬಹುದು. ಮಣಿಪಾಲ್ ಘಟನೆಯಲ್ಲಿ ಹೇಳಿಕೆ ಕೊಡುವುದಿಲ್ಲ ಎಂದವರು ಮೂರು ತಿಂಗಳ ಬಳಿಕ ಹೇಳಿಕೆ ನೀಡಿದ್ದರು. ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ಗೃಹ ಸಚಿವರು ಸ್ಪಷ್ಟಪಡಿಸಿದರು.

ಕುಸಿದು ಬಿದ್ದ ಸಿಬ್ಬಂದಿ, ಮಾನವೀಯತೆ ಮೆರೆದ ಚಿಕ್ಕಮಗಳೂರು ಎಸ್ಪಿ ಅಕ್ಷಯ್:

ಇದೇ ಕಾರ್ಯಕ್ರಮದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಭಾಷಣ ಮಾಡುವ ವೇಳೆ ವೇದಿಕೆ ಮುಂಭಾಗ ಎಡ ಹಾಗೂ ಬಲಭಾಗದಲ್ಲಿ ನಿಂತಿದ್ದ ಪೊಲೀಸರಲ್ಲಿ ಮೈಸೂರಿನ ಅಶ್ವದಳದ ಮೈಲುದ್ದೀನ್ ಎಂಬ ಸಿಬ್ಬಂದಿ ಬಿಸಿಲಿಗೆ ತಲೆಸುತ್ತು ಬಂದು ಬಿದ್ದರು. ಕೂಡಲೇ ಚಿಕ್ಕಮಗಳೂರು ಎಸ್ಪಿ ಅಕ್ಷಯ್ ವೇದಿಕೆ ಮೇಲಿದ್ದ ಎದ್ದು ಬಂದು ಸಿಬ್ಬಂದಿಯನ್ನ ಎತ್ತಿ ನೀರು ಕುಡಿಸಿದರು. ಬಳಿಕ ಆಂಬುಲೆನ್ಸ್‍ಗೆ ಸ್ವತಃ ಎಸ್ಪಿಯೇ ಎತ್ತಿಕೊಂಡು ಹೋಗಿ ಆಂಬುಲೆನ್ಸ್‍ನಲ್ಲಿ ಕೂರಿಸಿ ಮಾನವೀಯತೆ ಮೆರೆದರು.

ವರದಿ: ವೀರೇಶ್ ಹೆಚ್ ಜಿ
Published by:Vijayasarthy SN
First published: