ಚಾಮರಾಜನಗರ(ಆಗಸ್ಟ್. 31): ಕಾಡುಗಳ್ಳ ವೀರಪ್ಪನ್ ವಿರುದ್ದ ಹೋರಾಡಿ ಪೊಲೀಸ್ ಹಾಗು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹುತಾತ್ಮರಾದ ಸ್ಥಳಗಳಲ್ಲಿ ಸ್ಮಾರಕ ನಿರ್ಮಿಸಿ ಐತಿಹಾಸಿಕ ಸ್ಥಳಗಳನ್ನಾಗಿ ರೂಪಿಸುವ ಪ್ರಸ್ತಾವನೆಗೆ ಚಾಮರಾಜನಗರ ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.
ದಂತಚೋರ, ನರಹಂತಕ ವೀರಪ್ಪನ್ ಸೆರೆಹಿಡಿಯುವ ಕಾರ್ಯಾಚರಣೆ ವೇಳೆ ಅನೇಕ ಪೊಲೀಸ್ ಅಧಿಕಾರಿಗಳು ಅರಣ್ಯಾಧಿಕಾರಿಗಳು ಹಾಗು ಸಿಬ್ಬಂದಿ ಬಲಿದಾನಗೈದಿರುವುದು ಈಗ ಇತಿಹಾಸ. ಇವರ ತ್ಯಾಗ ಬಲಿದಾನವನ್ನು ಸಾರುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲೆಯ ಮೂರು ಕಡೆ ಸ್ಮಾರಕ ನಿರ್ಮಿಸಿ ಐತಿಹಾಸಿಕ ಸ್ಥಳಗಳನ್ನಾಗಿ ರೂಪಿಸಲು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಾಥಮಿಕ ಹಾಗು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಸ್ಮಾರಕ ನಿರ್ಮಾಣ ಕೆಲಸ ಜಿಲ್ಲಾಡಳಿತದ ಹಂತದಲ್ಲಿಯೇ ಆದರೆ ಉತ್ತಮ ಎಂಬ ಸಲಹೆ ನೀಡಿದ್ದರು. ಈ ಸಂಬಂಧ ಸಚಿವ ಸುರೇಶ್ ಕುಮಾರ್ ಅವರು ಚಾಮರಾಜನಗರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದರು. ನಮ್ಮ ಪೊಲೀಸರ ಸಾಹಸಗಾಥೆ, ಅವರ ತ್ಯಾಗ ಬಲಿದಾನಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಈ ನಿಟ್ಟಿನಲ್ಲಿ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಮೂರು ಕಡೆ ಸ್ಮಾರಕ ನಿರ್ಮಿಸಿ ಐತಿಹಾಸಿಕ ಸ್ಥಳಗಳನ್ನಾಗಿ ರೂಪಿಸುವಂತೆ ಸೂಚಿಸಿದ್ದರು.
1991 ನವೆಂಬರ್ ತಿಂಗಳಿನಲ್ಲಿ ಕಾಡುಗಳ್ಳ ವೀರಪ್ಪನ್ ತಾನು ಶರಣಾಗುವುದಾಗಿ ನಂಬಿಸಿ ಗೋಪಿನಾಥಂ ಬಳಿಯ ಯರೆಹಳ್ಳದ ಬಳಿ ಅಂದಿನ ಡಿ.ಸಿ.ಎಫ್. ಶ್ರೀನಿವಾಸ್ ಅವರು ಬರುವಂತೆ ಮಾಡಿ ಮರಮೋಸದಿಂದ ಅವರ ರುಂಡ ಕತ್ತರಿಸಿದ್ದ. 1992ರ ಆಗಸ್ಟ್ 14 ರಂದು ಮೀಣ್ಯಂ ಬಳಿ ಕಾಡುಗಳ್ಳ ವೀರಪ್ಪನ್ ಸೆರೆ ಯಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಎಸ್ಪಿ ಹರಿಕೃಷ್ಣ, ಸಬ್ ಇನ್ಸ್ಪೆಕ್ಟರ್ ಶಕೀಲ್ ಅಹಮದ್, ಪೊಲೀಸ್ ಸಿಬ್ಬಂದಿ ನಾಗರಾಜು, ಅಪ್ಪಚ್ಚು, ಕಾಳಪ್ಪ, ಸುಂದರ್, ವೃಷಬೇಂದ್ರಪ್ಪ ಎಂಬುವರನ್ನು ಗುಂಡಿನ ಸುರಿಮಳೆಗೈದು ಹತ್ಯೆ ಮಾಡಿದ್ದ.
ಇದನ್ನೂ ಓದಿ : ಕಲಬುರ್ಗಿಯಲ್ಲಿ ವ್ಯಕ್ತಿಯ ರುಂಡ ಕತ್ತರಿಸಿ ಬರ್ಬರ ಹತ್ಯೆ ; ಭೀಮಾ ತೀರದಲ್ಲಿ ಮತ್ತೆ ರಕ್ತಪಾತ
1992ರ ಮೇ 19 ರಂದು ರಾಮಾಪುರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿ, ಕಾನ್ಸ್ಟೇಬಲ್ಗಳಾದ ಇಳಂಗೋವನ್, ಪ್ರೇಮ್ ಕುಮಾರ್, ಸಿದ್ದರಾಜು, ರಾಚಪ್ಪ , ಗೋವಿಂದರಾಜು ಎಂಬುವರನ್ನು ಹತ್ಯೆ ಮಾಡಿ ಠಾಣೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ದೋಚಿದ್ದ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ