ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಕದಂಬರ ನಾಡು ಕನ್ನಡದ ಮೊದಲ ರಾಜಧಾನಿ ಶಿರಸಿ ತಾಲೂಕಿನ ಬನವಾಸಿ ಕ್ಷೇತ್ರವನ್ನು ಅಭಿವೃದ್ದಿಪಡಿಸಬೇಕು, ಇಲ್ಲಿನ ಐತಿಹಾಸಿಕ ಕ್ಷೇತ್ರದ ಬಗ್ಗೆ ನಾಡಿನ ಜನತೆಗೆ ತಿಳಿಸಿ ಇಲ್ಲಿ ಆಳಿದ ಕದಂಬರ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಬನವಾಸಿ ಅಭಿವೃದ್ದಿ ಪ್ರಾಧಿಕಾರವನ್ನು ರಚನೆ ಮಾಡಿತ್ತು. ಪ್ರಾಧಿಕಾರ ಈಗ ಕೇವಲ ಹೆಸರಿಗೆ ಮಾತ್ರ ಆಗಿದ್ದು ಬನವಾಸಿ ಹೇಗೆ ಇದೆಯೋ ಹಾಗೆ ಇದೆ. ಅಭಿವೃದ್ದಿ ಪ್ರಾಧಿಕಾರ ರಚನೆ ಆದ ಬಳಿಕ ಯಾವುದೇ ಅಭಿವೃದ್ದಿ ಕಂಡಿಲ್ಲ. ಪ್ರಾಧಿಕಾರ ರಚನೆ ಆಗುವ ಮುಂಚೆಯೂ ಕೂಡಾ ಅಭಿವೃದ್ದಿಯಲ್ಲಿ ಒಂದು ಹೆಜ್ಜೆ ಹಿಂದೆಯೇ ಇತ್ತು ಈಗಲೂ ಅದು ಮುಂದುವರೆದಿದೆ.
ಕಳೆದ ನಾಲ್ಕು ವರ್ಷದ ಹಿಂದೆ ಬನವಾಸಿ ಅಭಿವೃದ್ದಿ ಪ್ರಾಧಿಕಾರ ರಚನೆ ಆದ್ಮೇಲೆ ಅಭಿವೃದ್ದಿಯ ಕನಸನ್ನ ಕಂಡ ಬನವಾಸಿಯ ಜನರ ಕನಸು ನುಚ್ಚುನೂರಾಗಿದೆ. ಜಿಲ್ಲಾಡಳಿತದ ಮಾಹಿತಿಯಂತೆ ಪ್ರಾಧಿಕಾರ ರಚನೆ ಆದ ಬಳಿಕ ಇನ್ನೂ ಕೂಡಾ ಒಂದು ನಯಾ ಪೈಸೆಯೂ ಪ್ರಾಧಿಕಾರಕ್ಕೆ ಬಂದಿಲ್ಲವಂತೆ. ಪ್ರಾಧಿಕಾರಕ್ಕೆ ಇನ್ನೂ ಕೂಡಾ ಸಮಿತಿ ಕೂಡ ರಚನೆ ಆಗಿಲ್ಲ. ಕೇವಲ ಹೆಸರಲ್ಲಿ ಮಾತ್ರ ಇದೆ ಬನವಾಸಿ ಅಭಿವೃದ್ಧಿ ಪ್ರಾಧಿಕಾರ.
ಇಲ್ಲಿನ ಕದಂಬರ ಕಾಲದ ಮಧುಕೇಶ್ವರ ದೇವಾಲಯಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಅವರಿಗೆ ಇತಿಹಾಸದ ಮಾಹಿತಿ ಹೇಳಲು ಕೂಡ ಯಾರೊಬ್ಬ ಮಾರ್ಗದರ್ಶಿಯೂ ಇಲ್ಲ. ವರ್ಷಕ್ಕೆ ಒಮ್ಮೆ ಬನವಾಸಿ ಕದಂಬ ಉತ್ಸವವನ್ನು ಸರಕಾರ ತನ್ನ ಕಾರ್ಯಕ್ರಮವನ್ನಾಗಿ ಆಚರಿಸುತ್ತದೆ. ಅಲ್ಲಿಯೂ ಕೂಡ ಕೇವಲ ಕಾಟಾಚಾರದ ಹಬ್ಬವಾಗಿರುತ್ತೆ. ಕಳೆದ ಬಜೆಟ್ನಲ್ಲಿ ಪ್ರಾಧಿಕಾರಕ್ಕೆ ಹಣ ಮೀಸಲು ಇಡದೆ ಇರೋದು ಸಾಹಿತಿಗಳಲ್ಲಿ ಮತ್ತು ಚಿಂತಕರಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈಗ ಬನವಾಸಿ ಅಭಿವೃದ್ದಿ ಪ್ರಾಧಿಕಾರ ಕೇವಲ ಹೆಸರಿಗೆ ಮಾತ್ರ ಇದೆಯೇ ಹೊರತು ಅಭಿವೃದ್ದಿಯಿಂದ ಕೊಂಚ ದೂರವೇ ಇದೆ.
ಇದನ್ನು ಓದಿ: ಕುಸಿದು ಬೀಳುವ ಸ್ಥಿತಿಯಲ್ಲಿ ಓಬಿರಾಯನ ಕಾಲದ ನೀರಿನ ಟ್ಯಾಂಕ್; ಆತಂಕದಲ್ಲಿರುವ ಸ್ಥಳೀಯ ಜನತೆ
ಸಾಹಿತಿಗಳ ಆಕ್ರೋಶ
ಇತ್ತೀಚಿಗೆ ರಾಜ್ಯ ಸರಕಾರದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಕನ್ನಡ ನಾಡು ನುಡಿಗೆ ಹಣ ಮೀಸಲು ಇಟ್ಟಿಲ್ಲ ಎಂದು ಸಾಹಿತಿಗಳು, ಬರಹಗಾರರು, ಚಿಂತಕರು ಆರೋಪಿಸಿದ್ದರು. ಈ ಬೆನ್ನಲ್ಲೇ ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ಕದಂಬರ ನಾಡು ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣ ನೀಡದೆ ಇರುವುದು ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗಳು ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು ಆಕ್ರೋಶ ಹೊರ ಹಾಕಿದ್ದಾರೆ. ಸರಕಾರ ಬನವಾಸಿ ಕನ್ನಡದ ಮೊದಲ ರಾಜಧಾನಿ ಎನ್ನೋದು ಸಂಪೂರ್ಣ ಮರೆತಿದೆ ಎನ್ನುತ್ತಿದ್ದಾರೆ. ನಾಡು ನುಡಿಗಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದು ಮಾತಿನಲ್ಲಿ ಹೇಳುವ ಸರಕಾರ ಅದನ್ನು ಕಾರ್ಯರೂಪಕ್ಕೆ ತಂದು ಅಭಿವೃದ್ಧಿಪಡಿಸುವಲ್ಲಿ ಮೀನಾಮೇಷ ಎಣಿಸುತ್ತಿದೆ. ಕದಂಬರ ನಾಡು ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣ ನೀಡುವಲ್ಲಿ ಮತ್ತು ಬನವಾಸಿ ಅಭಿವೃದ್ಧಿ ಪಡಿಸುವಲ್ಲಿ ತಳೆದಿರುವ ನಿರ್ಲಕ್ಷ್ಯ ಧೋರಣೆ ಉದಾಹರಣೆ ಅಂತಾರೆ ಸಾಹಿತಿಗಳು.
ಬನವಾಸಿಯ ಕೆಲವು ಕಡೆ ಇನ್ನು ಕೂಡ ಹಾಳು ಬಿದ್ದ ರಸ್ತೆಗಳೇ ರಾಚುತ್ತಿವೆ. ಅಭಿವೃದ್ಧಿ ಭರವಸೆಯಲ್ಲೆ ಕಳೆದು ಹೋಗಿವೆ. ಶಿಕ್ಷಣಕ್ಕೆ ಸಂಬಂಧಿಸಿ ಪದವಿಪೂರ್ವ ಕಾಲೇಜು ಬೇಕು ಎಂಬ ಕೂಗು ಇಲ್ಲಿನ ಜನರದ್ದು. ಆದ್ರೆ ಇದಕ್ಕೆ ಸ್ಪಂದಿಸುವ ಕೆಲಸವನ್ನು ಜನಪ್ರತಿನಿಧಿಗಳಾಗಲಿ ಅಥವಾ ಸರಕಾರವಾಗಲಿ ಮಾಡಿಲ್ಲ. ಸರಕಾರದ ಗಮನ ಸೆಳೆಯುವ ಕೆಲಸ ಸ್ಥಳೀಯ ಜನಪ್ರತಿನಿಧಿಗಳಿಂದ ಆಗಿಲ್ಲ. ಜನರ ಕೂಗು ಮಾತ್ರ ನಿರಂತರವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ