Poornima Srinivas- ಪಕ್ಷ ಸಂಘಟಿಸಿ ದುಡಿದ ನನ್ನನ್ನ ಕಡೆಗಣಿಸಲಾಗಿದೆ: ಪೂರ್ಣಿಮಾ ಶ್ರೀನಿವಾಸ್ ಆಕ್ರೋಶ

ಸಚಿವ ಸ್ಥಾನ ಕೈ ತಪ್ಪಿದಕ್ಕೆ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಸಮಾಧಾನಗೊಂಡಿದ್ದಾರೆ. ತಾನು ಪಕ್ಷಕ್ಕಾಗಿ ದುಡಿದು, ಎಲ್ಲಾ ಚುನಾವಣೆಗಳಲ್ಲಿ ತಮ್ಮ ಗೊಲ್ಲ ಸಮುದಾಯದ ಮತಗಳನ್ನ ಸೆಳೆದಿದ್ದರೂ ಪಕ್ಷ ಅದನ್ನೆಲ್ಲಾ ಮರೆತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ಧಾರೆ.

ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಶಾಸಕಿ ಪೂರ್ಣಿಮಾ ಶ್ರೀನಿವಾಸ್

  • Share this:
ಚಿತ್ರದುರ್ಗ: ರಾಜ್ಯ ಸರ್ಕಾರದ ಸಚಿವ ಸಂಪುಟ ರಚನೆ ಸರ್ಕಸ್ ಕೊನೆಗೂ ಸಕ್ಸಸ್ ಕಂಡಿದೆ. ಆದರೆ ಯಾರೆಲ್ಲ ಶಾಸಕರಿಗೆ ಸಚಿವ ಸ್ಥಾನ ಸಿಗುತ್ತದೆ ಎಂದುಕೊಂಡಿದ್ದರೋ ಅವರ ನಿರೀಕ್ಷೆ ಹುಸಿಯಾಗಿದ್ದು, ಪಕ್ಷ, ಮತ್ತು ಪಕ್ಷದ ನಾಯಕರ ವಿರುದ್ದ ಅನೇಕ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಅದರಲ್ಲೂ ಈ ಬಾರಿ ಮಹಿಳಾ ಕೋಟಾದಲ್ಲಿ ಚಿತ್ರದುರ್ಗ ಜಿಲ್ಲೆಯ ಯಾದವ ಸಮುದಾಯದ ಏಕೈಕ ಶಾಸಕಿ ಪೂರ್ಣಿಮಾಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಅನ್ನೋದು ನಿರ್ಧಾರವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಶಾಸಕಿ  ಪೂರ್ಣಿಮಾ ಬದಲು ಮತ್ತೆ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದು, ಶಾಸಕಿ ಪೂರ್ಣಿಮಾ ನಿರೀಕ್ಷೆ ಸುಳ್ಳಾಗಿದೆ. ಇದರಿಂದ ಬೇಸರಗೊಂಡಿರೋ ಪೂರ್ಣಿಮಾ, ಸ್ಥಾನಮಾನ ಕೊಡದೆ ನಿರ್ಲಕ್ಷ ತೋರಿದ್ದಕ್ಕೆ ಗರಂ ಆಗಿದ್ದಾರೆ. ಅಲ್ಲದೇ ತಮ್ಮ ಬೇಸರವನ್ನ ಫೇಸ್​ಬುಕ್​ನಲ್ಲಿ ಬರೆದು ಪಕ್ಷದ ನಡೆಯನ್ನ ಖಂಡಿಸಿದ್ದಾರೆ.

ತಮ್ಮದೇ ಫೇಸ್ಬುಕ್ ಖಾತೆಯಲ್ಲಿ ಅಸಮಾಧಾನ ಹೊರ ಹಾಕಿರೋ ಪೂರ್ಣಿಮಾ ಶ್ರೀನಿವಾಸ್, ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಮನೆಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾಗಲೂ ನಾನು ಪಕ್ಷನಿಷ್ಠೆ ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿ ಶಿರಾ ಬೈ ಎಲೆಕ್ಷನ್​ನಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾಗಿದ್ದೆ. ಹಾಗೂ ಎಂಎಲ್​ಸಿ ಚುನಾವಣೆಯಲ್ಲೂ ಕೂಡ ನನ್ನ ಯಜಮಾನರ ಪರವಾಗಿ ಪ್ರಚಾರ ಮಾಡಿರಲಿಲ್ಲ. ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಪಕ್ಷಕ್ಕೆ  ತಂದಿದ್ದೆ. ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿಗಳನ್ನು ಸೋಲಿಸಲು ನಮ್ಮ ಸಮುದಾಯದ ಮತಗಳು ಹೆಚ್ಚು ನಿರ್ಣಯವಾಗಿದ್ದವು. ಪಕ್ಷವು ಅದನ್ನೆಲ್ಲ ಮರೆತಿದೆ. ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೇನೆ. ಎಲ್ಲವನ್ನೂ ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ ಎಂದಿದ್ದಾರೆ.

ಇದನ್ನೂ ಓದಿ: Neelakurinji Flowers: ಮನುಷ್ಯರ ವಯಸ್ಸನ್ನು ಹೇಳುವ ನೀಲಿ ಹೂಗಳು.. ನಿಗೂಢಗಳ ಆಗರ ಈ ನೀಲಿ ಸುಂದರಿ!

ಅಲ್ಲದೇ ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಇರಲಿಲ್ಲ. ಯಾವುದೇ ಹಗರಣಗಳು ನನ್ನ ಸುತ್ತಿಕೊಂಡಿರಲಿಲ್ಲ. ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರದಿಂದ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಒಂದೇ ಮನೇಲಿ ಎರಡು ಮೂರು ಅಧಿಕಾರ ನೀಡಿದೆ. ಯಾವುದೇ ಹಗರಣ ಇಲ್ಲದೆ ಇರುವ ಇನ್ನೊಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿದರೆ ಸಂತೋಷದಿಂದ ಸ್ವಾಗತಿಸುತ್ತೇನೆ. ಸ್ವಂತ ಬಲದಿಂದ ಗೆದ್ದಿರುವ ನನಗೂ ಹಾಗೂ ಇನ್ನೊಬ್ಬ ಮಹಿಳಾ ಶಾಸಕಿಗೂ ಇದು ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇನ್ನು, ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್, ಚಂದ್ರಪ್ಪ ಅವರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಂತಹ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80ರಷ್ಟು ಭಾಗವು ಬಿಜೆಪಿಗೆ ಮತ ನೀಡಿದೆ. ಇದನ್ನ ಪಕ್ಷ ಮರೆಯಬಾರದಿತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ. ರಾಜ್ಯ ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಎಲ್ಲಾ ಸಚಿವರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

ವರದಿ: ವಿನಾಯಕ ತೊಡರನಾಳ್
Published by:Vijayasarthy SN
First published: