Puttur: ಲಾಡ್ಜ್​​ನಲ್ಲಿ ಅನ್ಯಕೋಮಿನ ಪುರಷರ ಜೊತೆ ಮಹಿಳೆ ಪತ್ತೆ; ದಾಳಿ ನಡೆಸಿದ ಹಿಂದೂ ಸಂಘಟನೆಗಳು

ಮಹಿಳೆಯ ಜೊತೆ ಅನ್ಯಕೋಮಿನ ಪುರುಷರು ಲಾಡ್ಜ್ ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೆಪ್ಟಂಬರ್ 20ರ ತಡರಾತ್ರಿ ಲಾಡ್ಜ್ ಗೆ ದಾಳಿ ಮಾಡಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಅನ್ಯಕೋಮಿನ ಪುರುಷರೊಂದಿಗೆ ಮಹಿಳೆಯೊಬ್ಬರು ಲಾಡ್ಜ್ ನಲ್ಲಿ ತಂಗಿದ್ದ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಡ್ಜ್ ಗೆ ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ದೌರ್ಜನ್ಯ ಎಸಗಿದ ದೂರು ದಾಖಲಾಗಿದೆ. ಪುತ್ತೂರಿ(Puttur)ನ ಬೈಪಾಸ್ ರಸ್ತೆಯಲ್ಲಿರುವ ಆಸ್ಮಿ ಲಾಡ್ಜ್(lodge) ನಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರು(Bengaluru) ಮೂಲದ ರಾಜೇಶ್ವರಿ ಎನ್ನುವ ಮಹಿಳೆ ಸೆಪ್ಟೆಂಬರ್ 17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದು, ಸೆಪ್ಟಂಬರ್ 18 ರಂದು ಪುತ್ತೂರಿಗೆ ತಲುಪಿ ಲಾಡ್ಜ್ ನಲ್ಲಿ ತಂಗಿದ್ದರು.

ಪುತ್ತೂರು ನಗರ ಪೋಲೀಸರ ವಶದಲ್ಲಿದ್ದ ತನ್ನ ಕಾರನ್ನು ಬಿಡಿಸಿಕೊಳ್ಳುವ ಹಿನ್ನಲೆಯಲ್ಲಿ ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದ ಈ ಮಹಿಳೆಯ ಜೊತೆ ಆಕೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಉಳ್ಳಾಲ ಮಹಮ್ಮದ್ ಅರಾಫತ್ ಮತ್ತು ಬೆಂಗಳೂರಿನ ಕೊಟ್ಟಿಗೇರಿ ನಿವಾಸಿ ಶಿವ ಎಂಬವರೂ ಇದ್ದರು. ಮಹಿಳೆಯ ಜೊತೆ ಅನ್ಯಕೋಮಿನ ಪುರುಷರು ಲಾಡ್ಜ್ ನಲ್ಲಿ ತಂಗಿದ್ದಾರೆ ಎನ್ನುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಸೆಪ್ಟಂಬರ್ 20ರ ತಡರಾತ್ರಿ ಲಾಡ್ಜ್ ಗೆ ದಾಳಿ ಮಾಡಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಹಲ್ಲೆ ಮಾಡಿದ್ದಾರೆ.

ಸುಮಾರು 10 ರಿಂದ 15 ಜನರಿದ್ದ ಗುಂಪು ಲಾಡ್ಜ್ ಮುಂಭಾಗದಲ್ಲಿ ಸೇರಿದ್ದು, ಇದರಲ್ಲಿ ನಾಲ್ಕೈದು ಜನರ ಗುಂಪು ಲಾಡ್ಜ್ ಗೆ ನುಗ್ಗಿ ಮಹಿಳೆ ಹಾಗೂ ಆಕೆಯ ಸಹೋದ್ಯೋಗಿಗಳು ತಂಗಿದ್ದ ರೂಂ ಗೆ ನುಗ್ಗಿದ್ದಾರೆ. ಈ ಸಂದರ್ಭದಲ್ಲಿ ಸಂಘಟನೆಯ ಕಾರ್ಯಕರ್ತರು ಪೋಲೀಸರಿಗೂ ಮಾಹಿತಿ ನೀಡಿದ್ದು, ಪುತ್ತೂರು ಡಿವೈಎಸ್ಪಿ ಗಾನ ಕುಮಾರ್ ನೇತೃತ್ವದ ತಂಡ ಲಾಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರನ್ನು ಪೋಲೀಸ್ ಠಾಣೆಗೆ ಕರೆಸಿ ತನಿಖೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ರಾಜೇಶ್ವರಿ ಪುತ್ತೂರು ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದು, ದಾಳಿ ಮಾಡಿದ ಇಬ್ಬರನ್ನು ಪೋಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ:Bengaluru Crime: ಮುಸ್ಲಿಂ ಯುವತಿಗೆ ಡ್ರಾಪ್ ಮಾಡಿದ್ದಕ್ಕೆ ಹಿಂದೂ ಯುವಕನಿಗೆ ಹಲ್ಲೆ; ಅರ್ಧ ದಿನದಲ್ಲಿ ಆರೋಪಿಗಳು ಅರೆಸ್ಟ್

 ಹಿಂದೂ ಸಂಘಟನೆ ಆರೋಪ

ಪುತ್ತೂರು ಹಾಗೂ ಇತರ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಲಾಡ್ಜ್ ಗಳಲ್ಲಿ ತಂಗಲು ಬರುವವರ ಸರಿಯಾದ ವಿಳಾಸ ಹಾಗೂ ಗುರುತು ಪತ್ರವನ್ನು ಪರಿಶೀಲನೆ ನಡೆಸಲಾಗುತ್ತಿಲ್ಲ ಎಂದು ಹಿಂದೂ ಜಾಗರಣ ವೇದಿಕೆ ಆರೋಪಿಸಿದೆ. ಇದರಿಂದಾಗಿ ಲಾಡ್ಜ್ ಗಳಲ್ಲಿ ತಂಗಲು ಬರುವ ಜನರು ಕೆಲವು ಕಾನೂನು ಬಾಹಿರ ಕೃತ್ಯಗಳಲ್ಲೂ ತೊಡಗುತ್ತಿದ್ದಾರೆ. ಇದು ಸಾಮಾಜದ ಸ್ವಾಸ್ತ್ಯಕ್ಕೂ ಧಕ್ಕೆಯುಂಟಾಗುತ್ತಿದೆ. ಇದರಿಂದಾಗಿ ಪೋಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸಂಘಟನೆಗಳು ಆರೋಪಿಸಿವೆ.

ಬೆಂಗಳೂರಿನಲ್ಲಿ ಮಹಿಳೆಯೋರ್ವರಿಗೆ ಬೈಕ್ ನಲ್ಲಿ ಲಿಫ್ಟ್ ಕೊಟ್ಟ ಒಂದೇ ಕಾರಣಕ್ಕೆ ಬೈಕ್ ಸವಾರನ ಹಲ್ಲೆ ನಡೆಸಿದ ಘಟನೆಯ ಬಿಸಿ ಆರುವ ಮೊದಲೇ ಪುತ್ತೂರಿನಲ್ಲಿ ಮತ್ತೊಂದು ಇಂಥಹುದೇ ಘಟನೆ ನಡೆದಿದೆ. ಬೆಂಗಳೂರಿನ ಘಟನೆಯ ಬಳಿಕ ಪೋಲೀಸರು ಇಂಥ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಶೀಘ್ರ ಪತ್ತೆಗೆ ಮುಂದಾಗುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆದ ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಮುಸ್ಲಿಂ ಮಹಿಳೆ ಬ್ಯಾಂಕ್ ವೊಂದರಲ್ಲಿ ಉದ್ಯೋಗಿಯಾಗಿದ್ದು, ತನ್ನ ಸಹೋದ್ಯೋಗಿ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಳು. ಆ ವೇಳೆ ಕೆಲವು ಪುಂಡರು ಅನ್ಯಕೋಮಿನ ಗಂಡಸಿನ ಜೊತೆ ಹೋಗುತ್ತಿದ್ದಾಳೆ ಎಂದು ಬೈಕ್​ನ್ನು ಅಡ್ಡಗಟ್ಟಿ ಹಿಂದೂ ಯುವಕನಿಗೆ ಹಲ್ಲೆ ಮಾಡಿದ್ದರು. ಆ ವಿಡಿಯೋ ಎಲ್ಲೆಡೆ ಸಾಕಷ್ಟು ವೈರಲ್ ಆಗಿತ್ತು. ಬಳಿಕ ಎಚ್ಚೆತ್ತ ಪೊಲೀಸರು ರಾತ್ರಿಯಿಡೀ ಆರೋಪಿಗಳನ್ನು ಹುಡುಕಿ ಪತ್ತೆ ಹಚ್ಚಿದ್ದರು.
Published by:Latha CG
First published: