ಚಾಮರಾಜನಗರ (ನವೆಂಬರ್ 19); ಗಡಿ ಜಿಲ್ಲೆ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ 2020-21ನೇ ಸಾಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿಗೆ ಹೈಕೋರ್ಟ್ ಅದೇಶ ನೀಡಿದೆ. ಇದರೊಂದಿಗೆ 150 ಸೀಟುಗಳ ಭರ್ತಿಗೆ ಅವಕಾಶ ದೊರೆತಂತಾಗಿದ್ದು ಪೋಷಕರು ಹಾಗು ವಿದ್ಯಾರ್ಥಿಗಳಲ್ಲಿ ಮನೆಮಾಡಿದ್ದ ಆತಂಕ ದೂರವಾಗಿದೆ. ಅಗತ್ಯ ಸಂಖ್ಯೆಯ ಹಾಸಿಗೆ ಸಾಮರ್ಥ್ಯವುಳ್ಳ ಬೋಧನಾ ಆಸ್ಪತ್ರೆ ಇಲ್ಲ ಎಂಬುದು ಸೇರಿದಂತೆ ಹಲವು ನ್ಯೂನ್ಯತೆಗಳ ಕಾರಣದಿಂದ ರಾಷ್ಟ್ರೀಯ ವೈದ್ಯಕೀಯ ಆಯೋಗ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಈ ಸಾಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿಗೆ ಅನುಮತಿ ನಿರಕಾರಿಸಿತ್ತು.ಈ ಹಿನ್ನೆಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್, ಮೆಡಿಕಲ್ ಕಾಲೇಜುಗಳ ವಿವರ ಹಾಗು ಶುಲ್ಕದ ವಿವರಗಳ ಪಟ್ಟಿಯಲ್ಲಿ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಹೆಸರು ಕೈಬಿಡಲಾಗಿತ್ತು.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಕ್ರಮ ಪ್ರಶ್ನಿಸಿ ಹೈಕೋರ್ಟ್ ಗೆ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ರಿಟ್ ಅರ್ಜಿ ಸಲ್ಲಿಸಿತ್ತು. ನ್ಯಾ. ಅರವಿಂದಕುಮಾರ್ ಹಾಗು ನ್ಯಾ.ಶಿವಶಂಕರ್ ಅವರಿದ್ದ ದ್ವಿಸದಸ್ಯ ಪೀಠ, ಇಂದು ಈ ರಿಟ್ ಅರ್ಜಿಯ ವಿಚಾರಣೆ ನಡೆಸಿತು. ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ಪರ ವಕೀಲರಾದ ಉದಯ್ ಹೊಳ್ಳ, ಹಾಗು ಸುಮನಾ ಬಾಳಿಗಾ ಅವರು ವಾದ ಮಂಡಿಸಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗ ಬೊಟ್ಟು ಮಾಡಿದ್ದ ಅಗತ್ಯ ಹಾಸಿಗೆ ಸಂಖ್ಯೆಯುಳ್ಳ ಬೋಧನಾ ಅಸ್ಪತ್ರೆ ಸೇರಿದಂತೆ ಎಲ್ಲಾ ನ್ಯೂನ್ಯತೆಗಳನ್ನು ಸರಿಪಡಿಸಲಾಗಿದೆ. ಆದರೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಇದನ್ನು ಪರಿಶೀಲನೆ ನಡೆಸದೆ ಈ ಸಾಲಿನ ಪ್ರವೇಶಾತಿಗೆ ಅನುಮತಿ ನಿರಾಕರಿಸಿರುವುದು ಸರಿಯಲ್ಲ ಎಂದು ವಾದ ಮಂಡಿಸಿದರು. ವಾದ ಆಲಿಸಿದ ಹೈಕೋರ್ಟ್ ದ್ವಿಸದಸ್ಯ ಪೀಠ ಚಾಮರಾಜನಗರ ಸರ್ಕಾರಿ ಕಾಲೇಜಿನಲ್ಲಿ ಈ ಸಾಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿಗೆ ಆದೇಶ ನೀಡಿತು.
ಇದನ್ನು ಓದಿ: ಮನುಷ್ಯನ ಅತಿಯಾದ ಹಸ್ತಕ್ಷೇಪ; ಅವಸಾನದ ಹಾದಿಯಲ್ಲಿ ಐತಿಹಾಸಿಕ ಬಿಸಿ ನೀರಿನ ಚಿಲುಮೆ!
ನ್ಯೂಸ್ 18 ಗೆ ಈ ಬಗ್ಗೆ ಪ್ರತಿಕ್ರಿಯಿಸಿದ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿನ ನಿರ್ದೇಶಕ ಹಾಗು ಡೀನ್ ಡಾ. ಸಂಜೀವ್, ಭಾರತೀಯ ವೈದ್ಯಕೀಯ ಮಂಡಳಿ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚನೆ ಆದಾಗ ಹಲವು ತಾಂತ್ರಿಕ ಹಾಗು ಸಂವಹನ ಕೊರತೆಯಿಂದ ತೊಂದರೆಯಾಗಿತ್ತು. ಇದೇ ಕಾರಣದಿಂದ ಅನುಮತಿ ದೊರೆತಿರಲಿಲ್ಲ. ಆದರೆ ಈ ಸಾಲಿನ ಪ್ರವೇಶಾತಿಗೆ ಅವಕಾಶ ಸಿಗಲಿದೆ ಎಂಬ ಸಂಪೂರ್ಣ ಭರವಸೆ ಇತ್ತು. ಇದೀಗ ಹೈಕೋರ್ಟ್ ಆದೇಶದಿಂದದ ಆತಂಕ ದೂರ ಆಗಿದೆ ಎಂದರು.
ವರದಿ; ಎಸ್.ಎಂ.ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ