HOME » NEWS » District » HIGH COURT DIRECTS EC TO CONDUCT BBMP ELECTIONS MTV SNVS

BBMP Elections - ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ಆದೇಶ; ಸುಪ್ರೀಂ ಮೆಟ್ಟಿಲೇರಲು ಸರ್ಕಾರ ಚಿಂತನೆ

ಮತದಾರರ ಅಂತಿಮ ಪರಿಷ್ಕೃತ ಪಟ್ಟಿ ಪ್ರಕಟವಾದ ಆರು ವಾರದೊಳಗೆ ಬಿಬಿಎಂಪಿ ಚುನಾವಣೆಯ ವೇಳಾಪಟ್ಟಿ ಪ್ರಕಟಿಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಸೂಚಿಸಿದೆ. ಇದರೊಂದಿಗೆ ಕೆಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದ ಬಳಿಕ ಚುನಾವಣೆ ಮಾಡಬೇಕೆಂದಿದ್ದ ಸರ್ಕಾರಕ್ಕೆ ಹಿನ್ನಡೆಯಾಗಿದೆ.


Updated:December 4, 2020, 4:43 PM IST
BBMP Elections - ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ಆದೇಶ; ಸುಪ್ರೀಂ ಮೆಟ್ಟಿಲೇರಲು ಸರ್ಕಾರ ಚಿಂತನೆ
ಬೆಂಗಳೂರು ಮಹಾನಗರ ಪಾಲಿಕೆ.
  • Share this:
ಬೆಂಗಳೂರು(ಡಿ. 04): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ. ಮತದಾರರ ಅಂತಿಮ ಪಟ್ಟಿ ಪ್ರಕಟಿಸಿ ಆರು ವಾರದೊಳಗೆ ಚುನಾವಣೆಯ ವೇಳಾಪಟ್ಟಿ ಘೋಷಣೆ ಮಾಡುವಂತೆ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಾಧೀಶ ಅಭಯ್ ಓಕಾ ಮತ್ತು ನ್ಯಾ| ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠ ಇಂದು ತೀರ್ಪು ಪ್ರಕಟಿಸಿದೆ. ಅದರಂತೆ ಈಗ ಬಿಬಿಎಂಪಿಯ 198 ವಾರ್ಡ್​ಗಳಿಗೆ ಚುನಾವಣೆ ನಡೆಸಬೇಕಾಗಿದೆ.

ಇದೇ ವೇಳೆ, ರಾಜ್ಯ ಸರ್ಕಾರ 198 ಇರುವ ಬಿಬಿಎಂಪಿಯ ವಾರ್ಡ್​ಗಳ ಸಂಖ್ಯೆಯನ್ನು 243ಕ್ಕೆ ಹೆಚ್ಚಿಸುವ ಕೆಎಂಸಿ ಕಾಯ್ದೆ ತಿದ್ದುಪಡಿಯ ಸಿಂಧುತ್ವವನ್ನ ಅಂಗೀಕರಿಸಿದೆ. ಆದರೆ, ಕೆಎಂಸಿ ಕಾಯ್ದೆ ಜಾರಿಗೆ ಬರುವ ಮುನ್ನ ಈಗ ಪುನರ್​ವಿಂಗಡಣೆ ಆಗಿರುವ 198 ವಾರ್ಡ್​ಗಳಿಗೆ ಚುನಾವಣೆ ನಡೆಸುವಂತೆ ಕೋರ್ಟ್ ಆದೇಶಿಸಿದೆ.

ಕೆಎಂಸಿ ಕಾಯ್ದೆ ಪ್ರಕಾರ 243 ವಾರ್ಡ್​ಗಳ ವಿಂಗಡಣೆ ಆದ ಬಳಕ ಚುನಾವಣೆ ನಡೆಸಬೇಕು. ಅದಕ್ಕೆ ಇನ್ನಷ್ಟು ಕಾಲಾವಕಾಶ ಬೇಕು ಎನ್ನುವುದು ರಾಜ್ಯ ಸರ್ಕಾರದ ವಾದವಾಗಿತ್ತು. ಆದರೆ, ಕೋರ್ಟ್ ಕೆಎಂಸಿ ತಿದ್ದುಪಡಿ ಕಾಯ್ದೆಯನ್ನು  ಮಾನ್ಯ ಮಾಡಿತಾದರೂ ಚುನಾವಣೆ ವಿಳಂಬವನ್ನು ಒಪ್ಪಲಿಲ್ಲ. ಚುನಾವಣೆ ನಡೆಸುವಂತೆ ರಾಜ್ಯ ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರುವ ಇರಾದೆಯಲ್ಲಿದೆ. ಆದರೆ, ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ. ಸಂಪುಟ ಸಹೋದ್ಯೋಗಿಗಳೊಂದಿಗೆ ಚರ್ಚಿಸಿ ಸಿಎಂ ಒಂದು ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಇದನ್ನೂ ಓದಿ: ಜಿ.ಟಿ.ಡಿ ಮನೆಯಲ್ಲಿ ಆತಿಥ್ಯ ಸ್ವೀಕರಿಸಿದ ನಿಖಿಲ್ ದಂಪತಿ; ಪಕ್ಷದ ನಾಯಕರ ಮನವೊಲಿಸುವಲ್ಲಿ ಯಶಸ್ವಿ

ಬಿಬಿಎಂಪಿ ಚುನಾವಣೆಗೆ ಆಯೋಗ ಸರ್ವ ಸನ್ನದ್ಧವಾಗಿದೆ. ಮತದಾರರ ಪಟ್ಟಿಯನ್ನೂ ಪರಿಷ್ಕರಿಸಿ ಸಿದ್ಧಪಡಿಸಿಟ್ಟುಕೊಂಡಿದೆ. ಸರ್ಕಾರ ವಾರ್ಡ್ ಪುನರ್​ವಿಂಗಡಣೆ ಮಾಡಿ ಮೀಸಲಾತಿ ಪಟ್ಟಿಯನ್ನೂ ಬಿಡುಗಡೆ ಮಾಡಿದೆಯಾದರೂ ಕೆಎಂಸಿ ಕಾಯ್ದೆ ಜಾರಿ ಬಳಿಕ ಚುನಾವಣೆ ಆಗಬೇಕೆಂಬುದು ಅದರ ಉದ್ದೇಶ. ಆದರೆ, ಸರ್ಕಾರ ಬಿಬಿಎಂಪಿ ಚುನಾವಣೆ ನಡೆಸಲು ವಿಳಂಬ ಮಾಡುತ್ತಿರುವುದನ್ನು ಆಕ್ಷೇಪಿಸಿ ಮೂವರಿಂದ ರಾಜ್ಯ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿತ್ತು. ಕಾಂಗ್ರೆಸ್ ಸದಸ್ಯರಾದ ಶಿವರಾಜ್ ಮತ್ತು ಅಬ್ದುಲ್ ವಾಜಿದ್ ಜೊತೆಗೆ ಚುನಾವಣಾ ಆಯೋಗ ಕೂಡ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಗುಜರಾಯಿಸಿತ್ತು.

ಇದೀಗ ಬಿಬಿಎಂಪಿ ಚುನಾವಣೆ ನಡೆಸಲು ಆದೇಶ ಹೊರಡಿಸಿ ಹೈಕೋರ್ಟ್ ನೀಡಿದ ತೀರ್ಪನ್ನು ಮಾಜಿ ಕಾರ್ಪೊರೇಟರ್ ಹಾಗೂ ಅರ್ಜಿದಾರ ಶಿವರಾಜ್ ಸ್ವಾಗತಿಸಿದ್ದಾರೆ. ಸರ್ಕಾರ ಚುನಾವಣೆ ನಡೆಸದೆ ಉದ್ದೇಶಪೂರ್ವಕವಾಗಿ ಮುಂದೂಡುತ್ತಿತ್ತು. ತಮ್ಮ ಹೋರಾಟಕ್ಕೆ ಈಗ ಜಯ ಸಿಕ್ಕಿದೆ. ಕೋರ್ಟ್ ಆದೇಶ ಸಂತಸ ತಂದಿದೆ ಎಂದು ಶಿವರಾಜ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ನಾನು ನಾಯಕತ್ವ ತ್ಯಾಗ ಮಾಡಿದ್ದರಿಂದಲೇ ನೀವು ಸಿಎಂ ಆಗಿದ್ದು; ಸಿದ್ದರಾಮಯ್ಯ ವಿರುದ್ಧ ಹೆಚ್. ವಿಶ್ವನಾಥ್ ವಾಗ್ದಾಳಿಇನ್ನು, ಹೈಕೋರ್ಟ್ ಆದೇಶದ ವಿರುದ್ಧ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮವಿ ಸಲ್ಲಿಸುವ ಸಾಧ್ಯತೆಯೂ ಇದೆ. ಈ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಾ ಅಶ್ವತ್ಥ ನಾರಾಯಣ, ಸದನದಲ್ಲಿ ಕೆಎಂಸಿ ಕಾಯ್ದೆ ಮಂಡನೆ ಆಗಿದೆ. ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ವಿಪಕ್ಷಗಳನ್ನೂ ವಿಶ್ವಾಸಕ್ಕೆ ಪಡೆದು ಬಿಬಿಎಂಪಿ ಚುನಾವಣೆ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.
Published by: Vijayasarthy SN
First published: December 4, 2020, 4:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories