ಗದಗ: ಕೊರೋನಾ ಹಾವಳಿಯಿಂದ ಶಿಕ್ಷಣ ಟಿವಿ ಹಾಗೂ ಮೊಬೈಲ್ ಮೇಲೆ ಅವಲಂಬನೆಯಾಗಿದೆ. ಉಳ್ಳವರ ಮಕ್ಕಳು ಬೊಬೈಲ್ ಮೂಲಕ ದೊಡ್ಡ ಟಿವಿ ಮೂಲಕ ಶಿಕ್ಷಣ ಪಡೆಯುತ್ತಿದ್ದಾರೆ. ಆದರೆ ಬಡ, ಮದ್ಯಮ ವರ್ಗದ ಜನರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿದೆ. ಅದರಲ್ಲೂ ಬಡ ಕುಟುಂಬಗಳಿಗೆ ಟಿವಿ ಖರೀದಿ ಮಾಡೋದು ಸವಾಲಿನ ಕೆಲಸವೇ ಸರಿ. ಅಂತಹ ಕುಟುಂಬಕ್ಕೆ ಸೇರಿದ ತಾಯಿಯೊಬ್ಬರು ಮಕ್ಕಳ ಶಿಕ್ಷಣಕ್ಕಾಗಿ ತನ್ನ ತಾಳಿ ಅಡವಿಟ್ಟು ಮಕ್ಕಳಿಗೆ ಟಿವಿ ಕೊಡಿಸಿದ್ದರು. ಈ ಬಗ್ಗೆ ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ಇದೀಗ ಆ ಬಡಕುಟುಂಬಕ್ಕೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ರಡ್ಡೇರ್ ನಾಗನೂರ ಗ್ರಾಮದಲ್ಲಿ ಕಸ್ತೂರಿ ಎಂಬ ಮಹಿಳೆಯ ಇಬ್ಬರು ಮಕ್ಕಳು ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ಓರ್ವ ವಿದ್ಯಾರ್ಥಿನಿ 10ನೇ ತರಗತಿಯಲ್ಲಿ, ಇನ್ನೋರ್ವ 7 ನೇ ತರಗತಿಯಲ್ಲಿ ಓದುತ್ತಿದ್ದಾರೆ . ಆದರೆ ಈಗ ಮಕ್ಕಳಿಗೆ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಪಾಠ ಕೇಳಲು ಶಿಕ್ಷಕರು ಪ್ರತಿದಿನ ಫೋನ್ ಮೂಲಕ ಟಿವಿ ನೋಡಿ ಅಂತ ಹೇಳಿತ್ತಿದ್ದರು. ಜೊತೆಗೆ ಅದರಲ್ಲಿ ಬರುವ ಪಾಠಗಳ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಮನೆಯಲ್ಲಿ ಟಿವಿ ಇಲ್ಲದ ಕಾರಣ ಟಿವಿ ನೋಡಲು ಆಗುತ್ತಿರಲಿಲ್ಲ.
ಇವರ ಮನೆಯಲ್ಲಿ ಈ ಮೊದಲು ಇದ್ದ ಟಿವಿ ಸುಟ್ಟು ಹೋಗಿತ್ತು. ಹೀಗಾಗಿ ಮಕ್ಕಳು ಟಿವಿ ನೋಡಲು ಕಷ್ಟಪಡುತ್ತಿದ್ದರು. ಬೇರೆಯವರ ಮನೆಗೆ ಹೋದರೆ ಅವರು ಸಿನಿಮಾ ಇನ್ನಿತರ ಕಾರ್ಯಕ್ರಮಗಳನ್ನು ನೋಡುತ್ತಿದ್ದರು. ಹೀಗಾಗಿ ತಾಯಿ ತನ್ನ ತಾಳಿಯನ್ನು ಅಡವಿಟ್ಟು ಟಿವಿ ಖರೀದಿಸಿದರು. ಈಗ ನಿತ್ಯ ಚಂದನ ಟಿವಿಯಲ್ಲಿ ಪಾಠವನ್ನು ಕೇಳುತ್ತಿದ್ದಾರೆ.
ಗ್ರಾಮದಲ್ಲಿ ಅಕ್ಕಪಕ್ಕದ ಮನೆಯವರನ್ನು ಸಾಲ ಕೇಳಿದರೆ ಸಾಲ ಕೊಡಲು ಯಾರು ಮುಂದೆ ಬರಲಿಲ್ಲ. ಇವರಿಗೆ ನಾಲ್ಕು ಜನ ಮಕ್ಕಳಿದ್ದು, ಓರ್ವ ಹೆಣ್ಣು ಮಗಳನ್ನು ಈಗಾಗಲೇ ಮದುವೆ ಮಾಡಿ ಕೊಟ್ಟಿದ್ದಾರೆ. ಅವಳ ಮದುವೆಯನ್ನು ಸಹ ಸಾಲ ಮಾಡಿ ಮಾಡಿದ್ದಾರೆ. ಹೀಗಾಗಿ ಗದಗ ನಗರಕ್ಕೆ ಬಂದು ತನ್ನ ತಾಳಿಯನ್ನು 20 ಸಾವಿರ ರೂಪಾಯಿ ಅಡವಿಟ್ಟು 14 ಸಾವಿರ ರೂಪಾಯಿ 32 ಇಂಚಿನ ಟಿವಿ ಖರೀದಿ ಮಾಡಿದ್ದಾರೆ. ಕಸ್ತೂರಿ ಪತಿ ಕೂಲಿ ಕೆಲಸ ಮಾಡ್ತಾರೆ. ಇಬ್ಬರು ಕೂಲಿ ಮಾಡಿಯೇ ಕುಟುಂಬ ಸಾಗಿಸ್ತಾರೆ.ಈ ಕುರಿತು ನ್ಯೂಸ್ 18 ಕನ್ನಡದಲ್ಲಿ ವಿಸ್ತೃತವಾದ ಸುದ್ದಿ ಪ್ರಸಾರವಾದಾಗ ಗದಗ ಜಿಲ್ಲಾ ಉಸ್ತುವಾರಿ ಸಚಿವ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಸಹಾಯ ಮಾಡುವ ಭರವಸೆ ನೀಡಿದರು. ಅದರಂತೆ ಅವರ ಆಪ್ತರ ಕೈಯಲ್ಲಿ 20 ಸಾವಿರು ಕೊಟ್ಟು ತಾಳಿ ಬಿಡಿಸಿಕೊಟ್ಟಿದ್ದಾರೆ. ಇನ್ನು ಸಚಿವ ಸಿ.ಸಿ ಪಾಟೀಲ್ ಅವರ ಸೂಚನೆಯ ಮೇರೆಗೆ ಗ್ರಾಮಕ್ಕೆ ನರಗುಂದ ತಹಸೀಲ್ದಾರ ಮಹೇಂದ್ರ ಅವರು ಭೇಟಿ ನೀಡಿ ಅವರ ಕಷ್ಟ ಆಲಿಸಿದ್ದಾರೆ.
ಇದನ್ನು ಓದಿ: ನ್ಯೂಸ್ 18 ವರದಿಗೆ ಸ್ಪಂದನೆ; ಆನ್ಲೈನ್ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಸ್ಮಾರ್ಟ್ಫೋನ್ ಖರೀದಿಸಿದ ಸಹೋದರಿಯರಿಗೆ ನೆರವು
ಇದಷ್ಟೇ ಅಲ್ಲದೇ, ಗದಗ ಜಿಲ್ಲಾ ಪಂಚಾಯತಿ ಅಧ್ಯಕ್ಷ ರಾಜೂಗೌಡ ಕೆಂಚನಗೌಡ್ರ ಅವರು 10 ಸಾವಿರ ನಗದು ಹಾಗೂ ಸ್ಕೂಲ್ ಬ್ಯಾಗ್, ನೋಟ್ ಬುಕ್ ನೀಡಿ ಸಹಾಯ ಮಾಡಿದ್ದಾರೆ. ಗದಗ ಯೂಥ್ ಕಾಂಗ್ರೆಸ್ ಕಮಿಟಿ ವತಿಯಿಂದ 10 ಸಾವಿರ ಹಣ ಸಹಾಯ ಮಾಡಿದೆ. ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಾಳಿ ಅಡವಿಟ್ಟ ತಾಯಿಗೆ 50 ಸಾವಿನ ಸಹಾಯ ಮಾಡಿದ್ದಾರೆ. ಅಲ್ಲದೆ ಅವರ ಮಕ್ಕಳ ಶಿಕ್ಷಣಕ್ಕೂ ಸಹಾಯ ಮಾಡುವ ಭರವಸೆ ಸಹ ನೀಡಿದ್ದಾರೆ. ಗದಗ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಡಿಸಿಪಿಒ ಆರ್.ಎಂ. ದಿನೇಶ್ ನೇತೃತ್ವದ ತಂಡದಿಂದ ರೂಪಾ ಹಾಗೂ ಪ್ರವೀಣಕುಮಾರ್ ರಡ್ಡೇರ್ ನಾಗನೂರು ಗ್ರಾಮಕ್ಕೆ ಭೇಟಿ ಮಕ್ಕಳ ರಕ್ಷಣಾ ಘಟಕದಿಂದ ಪ್ರಾಯೋಜಕತ್ವ ಸೌಲಭ್ಯ ದಡಿಯಲ್ಲಿ ಪ್ರತಿ ತಿಂಗಳು ಸಾವಿರ ರೂಪಾಯಿಯಂತೆ ಮೂರು ವರ್ಷದವರಿಗೆ ಸೌಲಭ್ಯ ಕಲ್ಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ