ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ; ಸಮುದ್ರದ ಭೋರ್ಗರೆತಕ್ಕೆ ಕಡಲ ಪಾಲಾದ ಮನೆ

ಕಡಲಿನ ಭೋರ್ಗರೆತಕ್ಕೆ ಮಂಗಳೂರು ನಗರ ಹೊರವಲಯದ ಸೋಮೇಶ್ವರ ಪ್ರದೇಶದ ಮನೆ ನೋಡನೋಡುತ್ತಿದ್ದಂತೆಯೇ ಕಡಲು ಪಾಲಾಗಿದೆ

ಸಮುದ್ರದ ಅಲೆಗಳು

ಸಮುದ್ರದ ಅಲೆಗಳು

  • Share this:
ಮಂಗಳೂರು(ಜೂ.17): ಕರಾವಳಿಯಲ್ಲಿ ಮುಂಗಾರು ಚುರುಕು ಪಡೆದಿದೆ. ಅರಬ್ಬೀ ಸಮುದ್ರ ರಕ್ಕಸನಂತೆ ಆರ್ಭಟಿಸುತ್ತಿದೆ. ಮುಂಗಾರು ಆರಂಭದಲ್ಲೇ ಮನೆಯನ್ನು ಸಮುದ್ರ ಆಪೋಶನಗೈದಿದ್ದು, ಕಡಲ ತೀರದ ಜನರು ಪತರುಗುಟ್ಟುವಂತಾಗಿದೆ. ಮುಂಗಾರು ಆರಂಭದಲ್ಲೇ ದುರ್ಬಲವಾಗಿದ್ದರೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಿಂದ ಹರಿದು ಬರುವ ಹೊಳೆ, ತೊರೆಗಳು ತುಂಬಿ ಹರಿದು ಸಮುದ್ರ ಸೇರುತ್ತಿದೆ. 

ಮುಂಗಾರು ಆರಂಭದಲ್ಲೇ ಕಡಲು ಪ್ರಕ್ಷುಬ್ಧವಾಗಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಕಡಲಿನ ಭೋರ್ಗರೆತಕ್ಕೆ ಮಂಗಳೂರು ನಗರ ಹೊರವಲಯದ ಸೋಮೇಶ್ವರ ಪ್ರದೇಶದ ಮನೆ ನೋಡನೋಡುತ್ತಿದ್ದಂತೆಯೇ ಕಡಲು ಪಾಲಾಗಿದೆ‌‌. ಮೋಹನ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ನಿನ್ನೆ ಸಂಜೆ ಭಾರೀ ಗಾತ್ರದ ಅಲೆಗೆ ಕುಸಿದು ಸಮುದ್ರ ಪಾಲಾಗಿದೆ. ಕಳೆದ ವರ್ಷವೇ ಮನೆ ಬಿರುಕು ಬಿಟ್ಟಿತ್ತು. ಆದರೆ, ಈ ಬಾರಿ ಮಳೆಗಾಲದ ಆರಂಭದಲ್ಲೇ ಮನೆ ಸಮುದ್ರಪಾಲಾಗಿದೆ. ಮನೆ ಬಿರುಕು ಬಿಟ್ಟ ಬಳಿಕ ಜಿಲ್ಲಾಡಳಿತ ತಾತ್ಕಲಿಕವಾಗಿ 95 ಸಾವಿರ ರೂಪಾಯಿ ಪರಿಹಾರ ನೀಡಿದೆ. ಸದ್ಯ ಅಲ್ಲೇ ಪಕ್ಕದ ಅಕ್ಕನ ಮನೆಯಲ್ಲಿ ವಾಸವಿರುವ ಮೋಹನ್ ಈಗ ಅತಂತ್ರರಾಗಿದ್ದಾರೆ..

ಸಮುದ್ರ ದಿನದಿಂದ ಭೂ ಭಾಗವನ್ನು ಅಕ್ರಮಿಸುತ್ತಿದ್ದು, ಮುಂದೆ ಆ ಮನೆಗೂ ಕಂಟಕವಾಗುವ ಆತಂಕ ಉಂಟಾಗಿದೆ. ಕಡಲಿನ ಅಬ್ಬರ ಕಂಡು ಸೋಮೇಶ್ವರ ಜನರು ಆತಂಕದಲ್ಲಿದ್ದಾರೆ. ಕಡಲ್ಕೊರೆತ ಅತಿಯಾಗುತ್ತಿದ್ದು, ಕಡಲ ತೀರಕ್ಕೆ ಕಲ್ಲು ಹಾಕಿ ತಾತ್ಕಾಲಿಕ ತಡೆ ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ :  ಶಿವಮೊಗ್ಗದಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದ ಮಹಿಳೆ ಸಾವು

ಸೋಮೇಶ್ವರ ಭಾಗದಲ್ಲಿ ಸಮುದ್ರ ಅಬ್ಬರ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಕಡಲಿಗೆ ತಾಗಿಕೊಂಡಿರುವ ಸೋಮನಾಥ ದೇವಸ್ಥಾನದ ಮೆಟ್ಟಿಲು,ಭಾಗಶಃ ಸಮುದ್ರ ಪಾಲಾಗಿದೆ. ದೇವಸ್ಥಾನಕ್ಕೆ ಸೇರಿದ ಕೆರೆಯೂ ಸಮುದ್ರ ಪಾಲಾಗುವ ಆತಂಕವಿದೆ. ಮತ್ತಷ್ಟು ಮನೆ ಸಮುದ್ರ ಪಾಲಾಗುವ ಆತಂಕ ಎದುರಾಗಿದೆ‌‌.

 

ಅರಬ್ಬೀ ಸಮುದ್ರದ ಅಬ್ಬರ ಸ್ಥಳೀಯರ ನಿದ್ದೆಗೆಡಿಸಿದ್ದು, ಸಮುದ್ರ ಯಾವಾಗ ಬಲಿಪಡೆಯುತ್ತದೆಯೋ ಎಂಬ ಭಯ ಜನರಲ್ಲಿ ಆವರಿಸಿದೆ. ‌
First published: