ಹಾವೇರಿ (ಆಗಸ್ಟ್ 06); ಜಿಲ್ಲೆಯಲ್ಲಿ ಭಾರೀ ಮಳೆಗೆ ಕಬ್ಬಿನ ಬೆಳೆ ಸೇರಿದಂತೆ ವಿವಿಧ ಬೆಳೆಗಳು ನಾಶವಾಗುತ್ತಿವೆ. ಇದರಿಂದ ರೈತ ಸಮುದಾಯ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರುದಿನಗಳಿಂದ ಎಡಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗಿದ್ದ ಕಬ್ಬು, ಟೊಮೊಟೊ, ವಿವಿಧ ತರಕಾರಿ ಬೆಳೆಗಳು ಹಾನಿಗೊಳಗಾಗಿವೆ.
ಹಾವೇರಿ ತಾಲೂಕಿನ ನೆಗಳೂರ ಗ್ರಾಮದ ರೈತ ನಾಗರಾಜ ಕರಬಸಪ್ಪ ಸನಾದಿ ಅವರ ಹೊಲದಲ್ಲಿ ಹುಲಸಾಗಿ ಬೆಳೆದಿದ್ದ ಕಬ್ಬು ಗಾಳಿ ಹಾಗೂ ಭಾರೀಮಳೆಗೆ ಧರೆಗುರುಳಿದೆ. ನೆಗಳೂರಿನ ರೈತ ನಾಗರಾಜ ಸನಾದಿ 06.4 ಎಕರೆಯಲ್ಲಿ ಬೆಳೆದಿದ್ದ ಕಬ್ಬು ಸಂಪೂರ್ಣವಾಗಿ ಧರೆಗುರಳಿದ್ದು, ಅಂದಾಜು 8 ರಿಂದ 10 ಲಕ್ಷ ರೂ. ಗಳವರೆಗೆ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಹಾವೇರಿ ತಾಲೂಕಿನ ವಿವಿಧ ಭಾಗಗಳಲ್ಲಿಯು ಸಹ ಫಸಲು ಬಿಟ್ಟಿದ್ದ ಟೊಮೊಟೊ, ಹಿರೇಕಾಯಿ, ಸೊತೆಕಾಯಿ, ಮೆಕ್ಕೆಜೋಳ, ಕ್ಯಾಬೀಜ್ ಹಾಗೂ ಭತ್ತಸೇರಿದಂತೆ ನೀರಾವರಿ ಹಾಗೂ ಮಳೆಯಾಶ್ರಿತ ಭೂಮಿಯಲ್ಲಿ ಬೆಳೆಯಲಾಗಿದ್ದ ಅನೇಕ ಬೆಳೆಗಳು ಹಾಳಾಗಿವೆ. ಅಷ್ಟೇ ಅಲ್ಲದೆ 72 ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ; ಬೆಳಗ್ಗೆ ತಲಾಕ್ ಕೊಟ್ಟು ಸಂಜೆ ಕತ್ತು ಕೊಯ್ದ ಪಾತಕಿ
ಕಳೆದ ನಾಲ್ಕು ದಿನಗಳಿಂದ ಘಟ್ಟ ಪ್ರದೇಶಗಳಲ್ಲಿ ಹಾಗೂ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ತತ್ತರಿಸಿಹೋಗಿದೆ. ಜಿಲ್ಲೆಯ ಜೀವನದಿಯಾಗಿರುವ ತುಂಗಭದ್ರಾ ನದಿಯಲ್ಲಿ ಒಳಹರಿವು ಹೆಚ್ಚಾಗಿದ್ದು, ವರದಾ, ಕುಮದ್ವತಿ, ಧರ್ಮಾ ನದಿಗಳಲ್ಲಿಯು ನೀರಿನ ಹರಿವು ಹೆಚ್ಚುತ್ತಿದೆ. ಹೀಗಾಗಿ ಕೊರೋನಾ ಕಾಟದ ಜೊತೆಗೆ ಬೆಳೆಹಾನಿಯ ಭೀತಿಯು ರೈತರನ್ನು ಆವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ