ಕೊಡಗಿನಲ್ಲಿ ಸುರಿದ ಭಾರೀ ಮಳೆಗೆ ಕೋಳಿಕಾಡಿನಲ್ಲಿ ಭೂ ಕುಸಿತದ ಆತಂಕ, ಹಲವು ಮನೆಗಳು ಜಲಾವೃತ

ಜಿಲ್ಲೆಯ ಹಲವೆಡೆ ಕಾವೇರಿ ನದಿ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ರೈತರು ಎರಡನೆ ಬಾರಿಗೆ  ನಾಟಿಮಾಡಿದ್ದ ಭತ್ತದ ಬೆಳೆ ಹಾಳಾಗುವಂತಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆ ಕೊಡಗಿನ ಜನರನ್ನು ಆತಂಕಕ್ಕೆ ದೂಡಿದೆ.

ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದ ಸ್ಥಳ.

ಕೊಡಗಿನ ಬ್ರಹ್ಮಗಿರಿ ಬೆಟ್ಟ ಕುಸಿದ ಸ್ಥಳ.

  • Share this:
ಕೊಡಗು : ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರೀ ಮಳೆ ಸುರಿಯುತ್ತಿದ್ದು ತಲಕಾವೇರಿ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿರುವ ಕೋಳಿಕಾಡಿನಲ್ಲಿ ಭೂಕುಸಿತದ ಆತಂಕ ಎದುರಾಗಿದೆ. ಕೋಳಿಕಾಡು ಪ್ರದೇಶದಲ್ಲಿ ಹೊಸದಾಗಿ ಹೊಳೆ ಸೃಷ್ಟಿಯಾಗಿದ್ದು ಇದನ್ನು ಕಂಡು ಜನರು ಭಯಭೀತರಾಗಿದ್ದಾರೆ. ಸತೀಶ್ ಎಂಬ ಅಧಿಕಾರಿಯೊಬ್ಬ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ರೆಸಾರ್ಟ್ ಮಾಡಲು ಬೆಟ್ಟ ಕೊರೆದಿದ್ದರಿಂದ ಆ ಸ್ಥಳದಲ್ಲಿ ಆಗಸ್ಟ್ ತಿಂಗಳಲ್ಲಿ ಭೂಕುಸಿತವಾಗಿತ್ತು. ಅದು ಕೋಳಿಕಾಡು ಗ್ರಾಮದ ಮೂಲಕ ಗುಡ್ಡದ ಮಣ್ಣು ಕುಸಿದು ಹೋಗಿತ್ತು. ಈಗ ಅದೇ ಸ್ಥಳದಲ್ಲಿ ಮತ್ತೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಯಾವುದೇ ಕ್ಷಣದಲ್ಲಾದರೂ ಭೂಕುಸಿತ ಆಗುವುದೆಂಬ ಆತಂಕ ಮನೆ ಮಾಡಿದೆ. ಹೊಳೆಯಂತೆ ಹರಿಯುತ್ತಿರುವ ನೀರು ಕಂಡು ಜನರು ಮನೆ ಖಾಲಿ ಮಾಡಿ ಬೇರೆಗೆ ಹೋಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಭೂಕುಸಿತವಾದ ಮಣ್ಣನ್ನು ತೆರವು ಮಾಡಿ ತೋಡಿನಲ್ಲಿ ಸರಿಯಾಗಿ ನೀರು ಹರಿಯುವಂತೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೆವು. ಆದರೆ ಒಂದು ತಿಂಗಳಾದರೂ ಮಣ್ಣು ತೆರವು ಮಾಡದೆ ಮತ್ತೆ ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ಜನರು ಅಳಲು ತೋಡಿಕೊಳ್ಳುತಿದ್ದಾರೆ.

ಇದನ್ನೂ ಓದಿ : ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ; ಹೋರಾಟಗಾರರನ್ನು ಭಯೋತ್ಪಾದಕರೆಂದ ನಟಿ ಕಂಗನಾ

ಇನ್ನು ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಕೆಲವು ಪ್ರದೇಶಗಳಿಗೆ ಕಾವೇರಿ ಪ್ರವಾಹದ ನೀರು ನುಗ್ಗಿದ್ದರಿಂದ 15 ಮನೆಗಳು ಸಂಪೂರ್ಣ ಜಲಾವೃತವಾದವು. ಇದರಿಂದಾಗಿ ಅಷ್ಟು ಕುಟುಂಬಗಳು ಪರದಾಡುವಂತಾಗಿತ್ತು. ಜನರು ತೆಪ್ಪದ ಆಶ್ರಯದಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿತ್ತು. ಒಂದುವರೆ ತಿಂಗಳಲ್ಲಿ ಕರಡಿಗೋಡು ಗ್ರಾಮ ಮೂರು ಬಾರಿ ಪ್ರವಾಹದ ಸ್ಥಿತಿ ಎದುರಿಸಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯ ಹಲವೆಡೆ ಕಾವೇರಿ ನದಿ ನೀರು ಗದ್ದೆಗಳಿಗೆ ನುಗ್ಗಿದ್ದರಿಂದ ರೈತರು ಎರಡನೆ ಬಾರಿಗೆ  ನಾಟಿಮಾಡಿದ್ದ ಭತ್ತದ ಬೆಳೆ ಹಾಳಾಗುವಂತಾಗಿದೆ. ಒಟ್ಟಿನಲ್ಲಿ ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆ ಕೊಡಗಿನ ಜನರನ್ನು ಆತಂಕಕ್ಕೆ ದೂಡಿದೆ.
Published by:MAshok Kumar
First published: