ಕಲಬುರ್ಗಿಯಲ್ಲಿ ಕೊರೋನಾ ಜೊತೆ ಮಳೆರಾಯನ ಅಬ್ಬರ; ಅಪಾರ ಪ್ರಮಾಣದ ಬೆಳೆ ಹಾನಿ

ಧಾರಾಕಾರ ಮಳೆಯಿಂದಾಗಿ ಕೆಲವೆಡೆ ರೈತರಿಗೆ ಸಂಕಷ್ಟ ಎದುರಾಗಿದ್ದರೂ, ಬಹುತೇಕ ಕಡೆ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಳ್ಳುವಂತೆ ಮಾಡಿದೆ. ಬರದ ನಾಡೆನಿಸಿದ ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶೇ.40 ರಷ್ಟು ಹೆಚ್ಚುವರಿ ಮಳೆಯಿಂದ ಕೃಷಿ ಚಟುವಟಿಕೆ ಜೋರಾಗಿದೆ. ಕೊರೋನಾ ಸಂದಿಗ್ಧತೆ ನಡುವೆಯೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

news18-kannada
Updated:July 15, 2020, 10:38 PM IST
ಕಲಬುರ್ಗಿಯಲ್ಲಿ ಕೊರೋನಾ ಜೊತೆ ಮಳೆರಾಯನ ಅಬ್ಬರ; ಅಪಾರ ಪ್ರಮಾಣದ ಬೆಳೆ ಹಾನಿ
ಸಾಂದರ್ಭಿಕ ಚಿತ್ರ
  • Share this:
ಕಲಬುರ್ಗಿ(ಜು.15): ಕೊರೋನಾ ಕಾರಣದಿಂದಾಗಿ ಚರ್ಚೆಯಲ್ಲಿದ್ದ ಕಲಬುರ್ಗಿ ಜಿಲ್ಲೆಯಲ್ಲೀಗ ಮಳೆಯ ಅಬ್ಬರವೂ ಹೆಚ್ಚಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಸುರಿದ ಮಳೆಗೆ ಮುಂಗಾರು ಚಟುವಟಿಕೆಗಳು ಗರಿಗೆದರುವಂತೆ ಮಾಡಿತ್ತು. ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಕೆಲವೆಡೆ ಬೆಳೆ ಜಲಾವೃತಗೊಳ್ಳುವಂತೆ ಮಾಡಿದೆ.

ಕಲಬುರ್ಗಿ ನಗರ ಮತ್ತು ಜಿಲ್ಲೆಯ ಹಲವೆಡೆ ಕಳೆದ ರಾತ್ರಿಯಿಂದಲೂ ಮಳೆ ಸುರಿಯುತ್ತಿದೆ. ಕೆಲವೊಮ್ಮೆ ಜಿಟಿ ಜಿಟಿ, ಕೆಲವೊಮ್ಮೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. ಗ್ರಾಮೀಣ ಪ್ರದೇಶದಲ್ಲಿ ಬಿರುಸಾದ ಮಳೆ. ಭಾರೀ ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಹೊಲಗಳಿಗೂ ನೀರು ನುಗ್ಗಿದೆ. ಹೀಗಾಗಿ ಚಿಕ್ಕ ಪೈರು ಜಲಾವೃತಗೊಂಡಿವೆ. ಕಮಲಾಪುರ ತಾಲೂಕಿನ ಓಕಳಿ ಮತ್ತಿತರ ಕಡೆ ಜಮೀನುಗಳಲ್ಲಿಯೇ ನೀರು ರಭಸವಾಗಿ ಹರಿಯುತ್ತಿದೆ. ತೊಗರಿ, ಹೆಸರು, ಉದ್ದು, ಎಳ್ಳು ಇತ್ಯಾದಿ ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರು ಚಿಂತೆಗೀಡಾಗಿದ್ದಾರೆ. ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಚುರುಕುಗೊಂಡ ಮುಂಗಾರು ಕೃಷಿ ಚಟುವಟಿಕೆಗಳು 

ಧಾರಾಕಾರ ಮಳೆಯಿಂದಾಗಿ ಕೆಲವೆಡೆ ರೈತರಿಗೆ ಸಂಕಷ್ಟ ಎದುರಾಗಿದ್ದರೂ, ಬಹುತೇಕ ಕಡೆ ಮುಂಗಾರು ಕೃಷಿ ಚಟುವಟಿಕೆ ಬಿರುಸುಗೊಳ್ಳುವಂತೆ ಮಾಡಿದೆ. ಬರದ ನಾಡೆನಿಸಿದ ಕಲಬುರ್ಗಿ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಶೇ.40 ರಷ್ಟು ಹೆಚ್ಚುವರಿ ಮಳೆಯಿಂದ ಕೃಷಿ ಚಟುವಟಿಕೆ ಜೋರಾಗಿದೆ. ಕೊರೋನಾ ಸಂದಿಗ್ಧತೆ ನಡುವೆಯೂ ಕೃಷಿ ಚಟುವಟಿಕೆ ಬಿರುಸುಗೊಂಡಿದೆ.

ತೊಗರಿ, ಹೆಸರು, ಉದ್ದು, ಹತ್ತಿ ಇತ್ಯಾದಿ ಬಿತ್ತನೆ ಚುರುಕುಗೊಂಡಿತ್ತು. ಲಾಕ್ ಡೌನ್ ನಡುವೆಯೇ ಜಿಲ್ಲೆಯ 120 ಕೇಂದ್ರಗಳ ಮೂಲಕ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ. 13 ಸಾವಿರ ಕ್ವಿಂಟಲ್ ಬಿತ್ತನೆ ಬೀಜ ಮಾರಾಟ ಮಾಡಲಾಗಿದ್ದು, ಈ ಪೈಕಿ 8 ಸಾವಿರ ಕ್ವಿಂಟಲ್ ತೊಗರಿ ಬಿತ್ತನೆ ಬೀಜ ಮಾರಾಟವಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಿತೇಂದ್ರನಾಥ್ ಸೂಗೂರ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗಳ ಶೇ. 50ರಷ್ಟು ಹಾಸಿಗೆ ಕೊರೋನಾ ರೋಗಿಗಳಿಗೆ ಮೀಸಲು

65 ಸಾವಿರ ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು ಮಾಡಲಾಗಿದೆ. ಜಿಲ್ಲೆಯಲ್ಲಿ 7.50 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಕೊರೋನಾ ಸೋಂಕಿತ ಭೀತಿಯ ನಡುವೆಯೂ ಶೇ.75 ರಿಂದ 80 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮುಂಗಾರು ಕೃಷಿ ಚುಟುವಟಿಕೆಗೆ ಧಕ್ಕೆ ಬಾರದ ರೀತಿಯಲ್ಲಿ ಕೃಷಿ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತು. ಲಾಕ್ ಡೌನ್ ನಡುವೆಯೂ ಅಗತ್ಯ ಬೀಜ, ಗೊಬ್ಬರ ಪೂರೈಕೆ ಮಾಡಲಾಗಿದೆ. ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲಾಗಿದೆ.ಉತ್ತಮ ಮಳೆಯೂ ಆಗಿರುವುದರಿಂದ ಬಿತ್ತನೆ ಪ್ರದೇಶದಲ್ಲಿಯೂ ಹೆಚ್ಚಳವಾಗಿದೆ. ಚಿತ್ತಾಪುರ, ಚಿಂಚೋಳಿ ಹಾಗೂ ಸೇಡಂ ತಾಲೂಕುಗಳಲ್ಲಿ ಶೇ.90 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ರೈತರ ಖರೀದಿ ಹೊರತಾಗಿಯೂ ಬೀಜ ಹಾಗೂ ರಸಗೊಬ್ಬರದ ಸ್ಟಾಕ್ ಇದೆ ಎಂದೂ ಸೂಗೂರ ಮಾಹಿತಿ ನೀಡಿದ್ದಾರೆ. ಆದರೆ ಕೊರೋನಾದಿಂದಾಗಿ ಸರ್ಕಾರ ಉಚಿತವಾಗಿ ಬಿತ್ತನೆ ಬೀಜ ಪೂರೈಕೆ ಮಾಡಬೇಕಿತ್ತು.

ರಸಗೊಬ್ಬರದ ಸಬ್ಸಿಡಿಯೂ ಹೆಚ್ಚಿಸಬೇಕಿತ್ತು. ಜಿಲ್ಲೆಯಲ್ಲಿ ಸೋಯಾಬಿನ್ ಬೀಜದ ಪೂರೈಕೆ ಸಮರ್ಪಕವಾಗಿ ಆಗಿಲ್ಲ. ಇದರ ಜೊತೆಗೆ ಸಕಾಲಕ್ಕೆ ಕೃಷಿ ಸಾಲ ಸಿಕ್ಕಿಲ್ಲ. ಸಾಲ ಮನ್ನಾ ಆಗಿರೋ ರೈತರಿಗೆ ಡಿಸಿಸಿ ಬ್ಯಾಂಕ್ ಸಾಲವನ್ನೇ ನೀಡಿಲ್ಲ. ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದು ಬಿತ್ತನೆ ಮಾಡಿದ್ದೇವೆ. ಕೊರೋನಾ ಸಂದಿಗ್ಧತೆ ನಡುವೆಯೂ ಉತ್ತಮ ಮಳೆಯಾಗಿರೋದು ಒಳ್ಳೆಯ ಬೆಳವಣಿಗೆಯಾಗಿದೆ. ಸರ್ಕಾರ ಮತ್ತಷ್ಟು ನೆರವು ನೀಡಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು ಎಂದು ಚಿಂಚನಸೂರ ರೈತ ಸುಧಾನ ಧನ್ನಿ ಅಭಿಪ್ರಾಯಪಟ್ಟಿದ್ದಾರೆ. 

ಒಟ್ಟಾರೆ ಕೊರೋನಾ ಅಬ್ಬರದ ಜೊತೆಗೆ ಮಳೆಯ ಅಬ್ಬರವೂ ಹೆಚ್ಚಾಗಿದ್ದು, ಕೃಷಿ ಚಟುವಟಿಕೆಗಳು ಚುರುಕು ಪಡೆಯುಂತಾಗಿದೆ. ಉಕ್ಕಿ ಹರಿಯುತ್ತಿರುವ ಹಳ್ಳಗಳಿಂದಾಗಿ ಈಗಾಗಲೇ ಬಿತ್ತನೆ ಮಾಡಿರೋ ಜಮೀನುಗಳು ಜಲಾವೃತಗೊಂಡು ಹಾನಿಗೆ ತುತ್ತಾಗುವಂತಾಗಿದ್ದು, ಅದರ ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ಕೊಡುವಂತೆಯೂ ರೈತರು ಆಗ್ರಹಿಸಿದ್ದಾರೆ.
Published by: Latha CG
First published: July 15, 2020, 10:38 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading