ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ, ಹೆಚ್ಚುತ್ತಿದೆ ನದಿ ನೀರಿನ ಹರಿವು ; ತಗ್ಗುತ್ತಿಲ್ಲ ಕಡಲಿನ ಅಲೆಗಳ ಅಬ್ಬರ

ಭಾರೀ ಮಳೆಯ ಕಾರಣ ಕಡಲು ತೀರಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗುತ್ತಿದೆ. ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಉಚ್ಚಿಲ- ಬಟ್ಟಪ್ಪಾಡಿ ಸಂಪರ್ಕಿಸುವ ರಸ್ತೆ ಬಹುತೇಕ ಕುಸಿದು‌ ಬಿದ್ದಿದೆ.

news18-kannada
Updated:August 7, 2020, 10:37 AM IST
ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ, ಹೆಚ್ಚುತ್ತಿದೆ ನದಿ ನೀರಿನ ಹರಿವು ; ತಗ್ಗುತ್ತಿಲ್ಲ ಕಡಲಿನ ಅಲೆಗಳ ಅಬ್ಬರ
ಕಡಲ್ಕೊರೆತ
  • Share this:
ಮಂಗಳೂರು(ಆಗಸ್ಟ್​ . 07): ದಕ್ಷಿಣಕನ್ನಡ ಜಿಲ್ಲೆಯ ಹಲವೆಡೆ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಪಶ್ಚಿಮಘಟ್ಟ ಅಂಚಿನ ಪ್ರದೇಶಗಳಾದ ಸುಬ್ರಹ್ಮಣ್ಯ, ದಿಡುಪೆ, ಮಲವಂತಿಕೆ, ಚಾರ್ಮಾಡಿ ,ಬಿಸಿಲೆ ಮೊದಲಾದ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆ ಹಿನ್ನಲೆಯಲ್ಲಿ ಬಿಸಿಲೆ ಘಾಟ್ ನಲ್ಲಿ ಮತ್ತೆ ಗುಡ್ಡ ಕುಸಿದಿದ್ದು, ಮರಗಳು ರಸ್ತೆಗೆ ಅಡ್ಡಲಾಗಿ ಬಿದ್ದಿವೆ. ಬಿಸಿಲೆ ಘಾಟ್ ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ- ಬಿಸಿಲೆ ಘಾಟ್ ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.

ಸಕಲೇಶಪುರ, ಶಿರಾಡಿ, ಕುಮಾರ ಪರ್ವತ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಸತತ ಐದನೇ ದಿನವೂ ಮುಳುಗಡೆಯಾಗಿದೆ. ಸ್ನಾನಘಟ್ಟ ಪರಿಸರದಲ್ಲಿ ನೀರಿ‌ನ ಹರಿವು ಹೆಚ್ಚಾಗುತ್ತಿದ್ದು, ಸ್ನಾನಘಟ್ಟದಲ್ಲಿರುವ ಭಕ್ತರ ಸ್ನಾನಗೃಹ, ಶೌಚಾಲಯ, ಲಗೇಜ್ ಕೊಠಡಿಗಳು ಸಂಪೂರ್ಣ ಜಲಾವೃತವಾಗಿದೆ. ಈ ಭಾಗದಲ್ಲಿ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗುತ್ತಿದ್ದು, ಕುಮಾರಧಾರಾ ನದಿ ನೀರು ರಸ್ತೆಗೆ ಬರುವ ಸಾಧ್ಯತೆಯೂ ಹೆಚ್ಚಾಗಿದೆ. ಇದರಿಂದ ಮಂಜೇಶ್ವರ- ಸುಬ್ರಹ್ಮಣ್ಯ ಅಂತರ್ ರಾಜ್ಯ ಹೆದ್ದಾರಿ ಬಂದ್ ಆಗುವ ಲಕ್ಷಣ ಗೋಚರಿಸುತ್ತಿದೆ.

ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಬಂಟ್ವಾಳ, ಪಾಣೆಮಂಗಳೂರು, ಜಪ್ಪಿನ ಮೊಗರು ಮೊದಲಾದ ಕಡೆಗಳಲ್ಲಿ ನೀರು ನುಗ್ಗುವ ಆತಂಕವೂ ಎದುರಾಗಿದೆ. ನದಿ ಪಾತ್ರದ ಜನರು ಎಚ್ಚರಿಕೆಯಲ್ಲಿರುವಂತೆ ಸೂಚಿಸಲಾಗಿದೆ. ಭಾರೀ ಮಳೆಯ ಕಾರಣ ಕಡಲು ತೀರಗಳಲ್ಲಿ ಅಲೆಗಳ ಆರ್ಭಟ ಹೆಚ್ಚಾಗುತ್ತಿದೆ. ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ ಕಡಲ ತೀರದಲ್ಲಿ ಕಡಲ್ಕೊರೆತ ಹೆಚ್ಚಾಗುತ್ತಿದೆ. ಉಚ್ಚಿಲ- ಬಟ್ಟಪ್ಪಾಡಿ ಸಂಪರ್ಕಿಸುವ ರಸ್ತೆ ಬಹುತೇಕ ಕುಸಿದು‌ ಬಿದ್ದಿದೆ.

ಇದನ್ನೂ ಓದಿ :  Shivamogga Rain : ಶಿವಮೊಗ್ಗ ಜಿಲ್ಲೆಯಲ್ಲಿ ಅಬ್ಬರಿಸುತ್ತಿದೆ ಮುಂಗಾರು ಮಳೆ ; ಮೈದುಂಬಿ ಹರಿಯುತ್ತಿದೆ ತುಂಗಾ ನದಿ

ಕಡಲ್ಕೊರೆತ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ತೀರದಲ್ಲಿರುವ ನಾಲ್ಕೈದು ಕುಟುಂಬಗಳು ತಮ್ಮ ಮನೆಯಿಂದ ಬೇರೆಡೆಗೆ ಸ್ಥಳಾಂತರಗೊಂಡಿದ್ದಾರೆ.‌ ಕಡಲ ತೀರದ ಹತ್ತಾರು ಮನೆಗಳು ಕುಸಿದು ಬೀಳುವ ಅಪಾಯದಲ್ಲಿದೆ. ಜಿಲ್ಲೆಯ‌ ಹಲವೆಡೆ ಮಳೆಯ ಜೊತೆಗೆ ಭಾರೀ‌ ಗಾಳಿಯೂ ಬೀಸುತ್ತಿದ್ದು, ಪರಿಣಾಮ ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳುತ್ತಿರುವ ಕಾರಣ‌ ಜಿಲ್ಲೆಯಲ್ಲಿ ವಿದ್ಯುತ್ ವ್ಯತ್ಯಯದ ಸಮಸ್ಯೆಯೂ ಕಾಡಲಾರಂಭಿಸಿದೆ.

ಮಳೆಗೆ ಹಲವು ರಸ್ತೆಗಳು ಕುಸಿತಗೊಂಡಿದ್ದು, ಇತ್ತೀಚಿಗೆ ನಿರ್ಮಾಣಗೊಂಡ ಪುತ್ತೂರಿನ ಪಟ್ಟೆ-ಗೆಜ್ಜೆಗಿರಿ- ಈಶರಮಂಗಲ ರಸ್ತೆಯು ಬಹುತೇಕ ಕುಸಿದಿದೆ. ಮಳೆಯ ನೀರಿನ ಒಸರಿನಿಂದ ರಸ್ತೆಯ ತಳಪಾಯ ಕುಸಿದ ಪರಿಣಾಮ ರಸ್ತೆಯು ಕೆಲವು ಕಡೆ ಕುಸಿದಿದ್ದರೆ, ಇನ್ನು ಕೆಲವೆಡೆ ಬಿರುಕು ಬಿಟ್ಟಿವೆ. ಅಗಸ್ಟ್ 10 ವರಗೂ ಕರಾವಳಿಯಾದ್ಯಂತ ಭಾರೀ ಮಳೆ- ಗಾಳಿ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆಯು ಈಗಾಗಲೇ ನೀಡಿದೆ.
Published by: G Hareeshkumar
First published: August 7, 2020, 10:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading