HOME » NEWS » District » HEAVY RAIN IN VIJAYAPURA DISTRICT DESTROYS HUGE CROP MVSV HK

ವಿಜಯಪುರದಲ್ಲಿ ವರುಣನ ಆರ್ಭಟ ; 187 ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆನಾಶ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಮುಂದುವರೆದಿದೆ. ತಾಳಿಕೋಟೆ ಬಳಿ ಹಡಗಿನಾಳ ಸೇತುವೆ ಜಲಾವೃತವಾಗಿದ್ದು, ಕಲ್ಲ‌ದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ‌ ಕಡಿತವಾಗಿದೆ

news18-kannada
Updated:October 14, 2020, 7:59 PM IST
ವಿಜಯಪುರದಲ್ಲಿ ವರುಣನ ಆರ್ಭಟ ; 187 ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆನಾಶ
ಉಕ್ಕಿ ಹರಿಯುತ್ತಿರುವ ಡೋಣಿ ನದಿ
  • Share this:
ವಿಜಯಪುರ(ಅಕ್ಟೋಬರ್​. 14) : ಹವಾಮಾನ ವೈಪರಿತ್ಯದಿಂದಾಗಿ ಉಂಟಾಗಿರುವ ವರ್ಷಧಾರೆ ವಿಜಯಪುರ ಜಿಲ್ಲೆಯಲ್ಲಿ ನಾನಾ ಅವಘಡಗಳಿಗೆ ಕಾರಣವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಜನರನ್ನು ಹೈರಾಣಾಗಿಸಿದ್ದಷ್ಟೇ ಅಲ್ಲ, ಕಂಗಾಲಾಗುವಂತೆ ಮಾಡಿದೆ. ಜನಜೀವನ ಅಸ್ತವ್ಯಸ್ತವಾಗಿದ್ದು, ತೀರ ಅನಿವಾರ್ಯ ಕೆಲಸಗಳನ್ನು ಹೊರತು ಪಡಿಸಿ ಬೇರಾವ ಕಾರಣಕ್ಕೂ ಜನ ಮನೆಯಿಂದ ಹೊರ ಬಾರದಂತೆ ಮಾಡಿದೆ. ಜಿಲ್ಲೆಯಲ್ಲಿ ಇಂದು ಕೂಡ ರೆಡ್ ಅಲರ್ಟ್ ಮುಂದುವರೆದಿದೆ. ವಿಜಯಪುರ ಜಿಲ್ಲೆಯಲ್ಲಿ ಸರಾಸರಿ 20.73 ಮಿಮಿ ಮಳೆ ದಾಖಲಾಗಿದ್ದು, ಸಿಂದಗಿ ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ಅತ್ಯಧಿಕ ಅಂದರೆ 100 ಮಿಮಿ ಮಳೆ ದಾಖಲಾಗಿದೆ. ಸಿಂದಗಿ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಸರಾಸರಿ ಅಂದರೆ 45.02 ಮಿಮಿ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಮಳೆಯ ರೆಡ್ ಅಲರ್ಟ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ನಗರದಲ್ಲಿ ರಾತ್ರಿ ಗಾಳಿ ಸಹಿತ ಸುರಿದ ಮಳೆ ಸುರಿದಿದೆ.  ಈ ರೆಡ್ ಅಲರ್ಟ್ ನಾಳೆ ಬೆಳಿಗ್ಗೆಯವರೆಗೂ ಮುಂದುವರೆಯಲಿದೆ.

ಮುಂದುವರಿದ ಡೋಣಿ ನದಿ ಪ್ರವಾಹ

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಪ್ರವಾಹ ಮುಂದುವರೆದಿದೆ. ತಾಳಿಕೋಟೆ ಬಳಿ ಹಡಗಿನಾಳ ಸೇತುವೆ ಜಲಾವೃತವಾಗಿದ್ದು, ಹಡಗಿನಾಳ, ಕಲ್ಲ‌ದೇವನಹಳ್ಳಿ, ಶಿವಪುರ, ಹರನಾಳ, ಮೂಕಿನಾಳ ಗ್ರಾಮಗಳ ಸಂಪರ್ಕ‌ ಕಡಿತವಾಗಿದೆ. ಜಮೀನುಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆ ನೀರಿನಲ್ಲಿ ನಿಂತಿದೆ. ತಾಳಿಕೋಟೆ ಪಟ್ಟಣದ ಹೊರ ಭಾಗದ ಹನುಮಾನ ಮಂದಿರ ಡೋಣಿ ನದಿ ಪ್ರವಾಹದಿಂದಾಗಿ ಜಲಾವೃತವಾಗಿದ್ದು, ನೀರು ದೇವಸ್ಥಾನವನ್ನು ಸುತ್ತುವರೆದಿದೆ.ಅತ್ತ ಸಾರವಾಡ ಮತ್ತು ಉಕುಮನಾಳ ಸುತ್ತಮುತ್ತಲಿನ ಗ್ರಾಮಗಳಲ್ಲಿಯೂ ಡೋಣಿ ಪ್ರವಾಹ ಮುಂದುವರೆದಿದ್ದು, ತೀವ್ರ ಮಳೆಯಿಂದ ಜಮೀನುಗಳು ಕೆರೆಗಳಂತಾಗಿವೆ.  ನಾನಾ ಬೆಳೆಗಳು‌ ನೀರಿನಲ್ಲಿ ನಿಂತಿವೆ.  ಬೆಳೆ ಹಾನಿಯಾಗುತ್ತಿರುವದನ್ನ‌ ಕಂಡ ರೈತರು ಕಂಗಾಲಾಗಿದ್ದಾರೆ.

ಭೀಮಾ ನದಿಯಲ್ಲಿ ನೀರಿನ ಒಳಹರಿವು ಹೆಚ್ಚಳ :

ಈ ಮಧ್ಯೆ ವಿಜಯಪುರ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಭೀಮಾ ನದಿಯಲ್ಲಿ ಹೆಚ್ಚಿದ ನೀರಿನ ಹರಿವು ಹೆಚ್ಚಾಗಿದೆ.  ಸಿಂದಗಿ ತಾಲೂಕಿನ ತಾರಾಪುರ ಗ್ರಾಮಸ್ಥರು ಮತ್ತೆ ಪ್ರವಾಹದ ಭೀತಿ ಎದುರಿಸುವಂತಾಗಿದೆ. ಇಂದು ಮಹಾರಾಷ್ಟ್ರದ ಉಜನಿ ಜಲಾಶಯದಿಂದ 23 ಸಾವಿರ ಕ್ಯೂಸೆಕ್ ಮತ್ತು ವೀರ ಡ್ಯಾಂ ನಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ಮನೆಗಳಿಗೆ ನುಗ್ಗಿದ ನೀರು :

ವಾಯುಭಾರ ಕುಸಿತದಿಂದ ಉಂಟಾಗಿರುವ ವರುಣಾಘಾತದಿಂದಾಗಿ ವಿಜಯಪುರ ನಗರ ಸೇರಿದಂತೆ ನಾನಾ ಕಡೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ವಿಜಯಪುರ ನಗರದಲ್ಲಿ ಬೆಳಗ್ಗೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ 5 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.  ವಿಜಯಪುರ ನಗರದ ಬಸರಿ ಬಾವಿ ಬಡಾವಣೆಯಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದೆ.  ಮನೆಯಲ್ಲಿ ನಿಂತ ಮಳೆ ನೀರು ನಿವಾಸಿಗಳು ಪರದಾಡುವಂತಾಗಿದೆ. ಭಾರೀ ಮಳೆಯಿಂದಾಗಿ ಐತಿಹಾಸಿಕ ಬರಿಸಿ ಬಾವಿ ಭರ್ತಿ ಹಿನ್ನೆಲೆ ಮನೆಗಳಿಗೆ ನೀರು ನುಗ್ಗತ್ತಿರುವುದು ಸಂಕಷ್ಟವನ್ನು ಹೆಚ್ಚಿಸಿದೆ. ಬಡವಾಣೆಯ ಒಳ ರಸ್ತೆಗೂ ನೀರು ನುಗ್ಗಿದೆ.  ಬೀದಿಯಲ್ಲಿ ಓಡಾಟ ನಡೆಸುವುದಕ್ಕೂ ಇಲ್ಲಿನ ನಿವಾಸಿಗಳು ಪರದಾಡುವಂತಾಗಿದೆ.ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದಲ್ಲಿ ಒಂದೇ ಕುಟುಂಬಕ್ಕೆ ಸೇರಿದ ನಾಲ್ಕು ಮನೆಗಳು ಸಂಪೂರ್ಣ ಜಲಾವೃತವಾಗಿವೆ. ಗೊಂದಳ ಕುಟುಂಬಕ್ಕೆ ಸೇರಿದ ನಾಲ್ಕು ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಲ್ಲಿನ ವಸ್ತುಗಳು ನೀರಿಗಾಹುತಿಯಾಗಿವೆ. ಮನೆಗಳಿಗೆ ನೀರು ನುಗ್ಗಿದ್ದರೂ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ‌ ಪರ್ಯಾಯ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.ನಿಡಗುಂದಿ ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿಯೂ ವ್ಯಾಪಕ ಮಳೆಯಾಗಿದ್ದು, ನಿಡಗುಂದಿ ಪಟ್ಟಣದ ನಾನಾ ಬಡಾವಣೆಗಳಿಗೆ ನೀರು ನುಗ್ಗಿದೆ. ಮನೆಗಳಲ್ಲಿ ಮಳೆಯ ನೀರು ನಿಂತಿದ್ದು, ನಾನಾ ವಸ್ತುಗಳಿಗೆ ಹಾನಿಯಾಗಿದೆ. ರಾತ್ರಿ ಸುರಿದ ಮಳೆಗೆ ಜನತೆ ತತ್ತರಿಸಿದ್ದಾರೆ.

ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.  ಇಲೆಕ್ಟ್ರಿಕಲ್ ಅಂಗಡಿಯ ಗೋಡವನ್ ಗೆ ಮಳೆ ನೀರು ನುಗ್ಗಿದ್ದು, ಬೆಲೆ ಬಾಳುವ ಮೋಟಾರ್, ಕೇಬಲ್ ವೈರ್, ಇಲೆಕ್ಟ್ರಾನಿಕ್ ಸಾಮಾನುಗಳು ನೀರಿನಲ್ಲಿ ಮುಳುಗಿವೆ.  ಅಂಡರ್ ಗ್ರೌಂಡ್ ಗೋಡವನ್ ತುಂಬೆಲ್ಲ ನೀರು ನಿಂತು ಅಪಾರ ಹಾನಿಯಾಗಿದೆ.  ರೂ. 4 ಲಕ್ಷಕ್ಕೂ ಅಧಿಕ ಹಾನಿಯಾಗಿದೆ.

ಇದನ್ನೂ ಓದಿ : ದಸರಾಗೆ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ; ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ

ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಕೆರೆಯ ಏರಿ ಒಡೆದು ನೀರು ಪೋಲಾಗುತ್ತಿದೆ.  ಸಾರವಾಡ ಗ್ರಾಮದ ಮಲ್ಲಪ್ಪನ ಕೆರೆ ಏರಿ ಒಡೆದಿದ್ದು, ಮಲ್ಲಪ್ಪನ ಕೆರೆಯಿಂದ ನೀರು ಹರಿದು ಜಮೀನುಗಳು ಜಲಾವೃತವಾಗಿವೆ.

ವಿಜಯಪುರ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಳೆದ 24 ಗಂಟೆಗಳಲ್ಲಿ ಮತ್ತೆ 187 ಮನೆಗಳಿಗೆ ಹಾನಿಯಾಗಿದೆ.  ಅಲ್ಲದೇ, 2 ಜಾನುವಾರುಗಳೂ ಸಾವಿಗೀಡಾಗಿವೆ ಎಂದು ವಿಜಯಪುರ ಜಿಲ್ಲಾಡಳಿತ ಮಾಹಿತಿ ನೀಡಿದೆ.
Published by: G Hareeshkumar
First published: October 14, 2020, 7:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories