ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಜನ‌ಜೀವನ ಅಸ್ತವ್ಯಸ್ಥ, ಮತ್ತೆ ಶುರುವಾಯ್ತು ನೆರೆ ಆತಂಕ..!

ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಸಹ ಜನರು ನೆರೆ ಆತಂಕದಿಂದ ಹೊರಗೆ ಬಂದಿಲ್ಲ.

news18-kannada
Updated:June 13, 2020, 9:07 AM IST
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಜನ‌ಜೀವನ ಅಸ್ತವ್ಯಸ್ಥ, ಮತ್ತೆ ಶುರುವಾಯ್ತು ನೆರೆ ಆತಂಕ..!
ಮಳೆಗೆ ರಸ್ತೆ ಮೇಲೆ ನೀರು ನಿಂತಿರುವುದು
  • Share this:
ಕಾರವಾರ(ಜೂ.13): ರಾಜ್ಯದ ಕರಾವಳಿಯಲ್ಲಿ ಸದ್ಯ ಮಾನ್ಸೂನ್ ಪ್ರವೇಶವಾದ ಬೆನ್ನಲ್ಲೇ ಧಾರಾಕಾರ ಮಳೆ ಸುರಿಯುತ್ತಿದೆ. ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಒಂದೇ ದಿನ ಸುರಿದ ಮಳೆಗೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜೂನ್ 15 ರ ವರೆಗೆ ಹವಾಮಾನ ಇಲಾಖೆ ಮಳೆಯ ಮುನ್ಸೂಚನೆ ನೀಡಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಇನ್ನೂ ಸಹ ಮಳೆಗಾಲ ಪ್ರಾರಂಭವಾಗುವ ಹಂತದಲ್ಲಿದೆ. ಆದರೆ, ಉತ್ತರಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನಲ್ಲಿ 24 ಗಂಟೆಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಗ್ಗು ಪ್ರದೇಶಗಳಿಗೆ ಈಗಾಗಲೇ ನೀರು ತುಂಬಿಕೊಳ್ಳುತ್ತಿದ್ದು ಜನರು ಆತಂಕಗೊಳ್ಳುವಂತಾಗಿದೆ. ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿದ್ದು, ಅವಧಿಗೆ ಮುನ್ನವೇ ಮಳೆಗಾಲ ಪ್ರಾರಂಭವಾದಂತಾಗಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆಗಳ ಮೇಲೆ ನೀರು ನಿಲ್ಲುವಂತಾಗಿದ್ದು, ಜನರು ಓಡಾಟ ನಡೆಸಲು ಪರದಾಡುವಂತಾಗಿದೆ.

ಜಿಲ್ಲೆಯ ಕರಾವಳಿಯಲ್ಲಿ ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ರಸ್ತೆ ಪಕ್ಕದ ಗುಡ್ಡಗಳನ್ನ ತೆರವುಗೊಳಿಸಲಾಗಿದ್ದು, ಇದೀಗ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹೆದ್ದಾರಿ ಮೇಲೆ ಮಣ್ಣು ಕುಸಿದು ಬೀಳುವ ಆತಂಕ ವಾಹನ ಸವಾರರದ್ದಾಗಿದೆ.

ಇನ್ನು ಕಳೆದೆರಡು ತಿಂಗಳು ಕೊರೋನಾ ಹಿನ್ನಲೆ ನಗರಸಭೆ ಕೆಲ ದಿನಗಳ ಹಿಂದಷ್ಟೇ ಚರಂಡಿಗಳನ್ನ ಸ್ವಚ್ಛಗೊಳಿಸುವ ಕೆಲಸ ಮಾಡಿದ್ದು, ಚರಂಡಿಯಿಂದ ತೆಗೆದ ಮಣ್ಣನ್ನ ಪಕ್ಕದಲ್ಲೇ ಇರಿಸಿದ್ದರಿಂದಾಗಿ ಮಳೆಯೊಂದಿಗೆ ಮತ್ತೆ ಚರಂಡಿ ಸೇರುವಂತಾಗಿದೆ. ಇದರಿಂದಾಗಿ ನಗರ ಪ್ರದೇಶದಲ್ಲಿ ಮಳೆಯ ನೀರು ಚರಂಡಿಯಲ್ಲಿ ಹಾದು ಹೋಗದೆ ರಸ್ತೆಯ ಮೇಲೆ ನಿಲ್ಲುತ್ತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಕೊರೋನಾ ಹಿನ್ನಲೆ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ಸಹ ಪ್ರಗತಿಯಲ್ಲಿದ್ದು, ಇದೀಗ ದಿಢೀರನೇ ಮಳೆ ಪ್ರಾರಂಭವಾಗಿರುವುದು ಕಾಮಗಾರಿಗಳಿಗೆ ಹಿನ್ನಡೆ ಉಂಟಾಗುವಂತಾಗಿದೆ.

ಕಳೆದ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇನ್ನೂ ಸಹ ಜನರು ನೆರೆ ಆತಂಕದಿಂದ ಹೊರಗೆ ಬಂದಿಲ್ಲ. ನೆರೆಯ ಸಂದರ್ಭದಲ್ಲಿ ಮನೆಗಳನ್ನ ಕಳೆದುಕೊಂಡ ಸಾಕಷ್ಟು ಕುಟುಂಬಗಳಿಗೆ ಇನ್ನೂ ಸಹ ಸೂಕ್ತ ಸೂರು ಸಿಕ್ಕಿಲ್ಲ. ಈ ಸಂದರ್ಭದಲ್ಲಿ ಇದೀಗ ಏಕಾಏಕಿ ಮಳೆ ಪ್ರಾರಂಭವಾಗಿರುವುದು ಜನರಲ್ಲಿ ನೆರೆಯ ಆತಂಕವನ್ನ ಸೃಷ್ಟಿಮಾಡಿದೆ. ಮಳೆ ಅಂದ್ರೆ ಕಳೆದ ವರ್ಷದ ಪ್ರವಾಹದ ಬಗ್ಗೆ ಯೋಚಿಸುವ ಇಲ್ಲಿನ ಜನರು ನಿರಂತರವಾಗಿ ಸುರಿಯುವ ಮಳೆಯಿಂದ‌ ಮತ್ತೆ ಸಮಸ್ಯೆ ಎದುರಾಗಬಹುದು ಎನ್ನುವ ಚಿಂತೆಯಲ್ಲಿದ್ದಾರೆ.

ಇದನ್ನೂ ಓದಿ : ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಹೊಸ ನೇಮಕಕ್ಕೆ ಬ್ರೇಕ್ ; ಆರ್ಥಿಕ ಇಲಾಖೆ ಆದೇಶ

ಇನ್ನು ಹವಾಮಾನ ಇಲಾಖೆ ಜೂನ್ 15ರ ವರೆಗೆ ಧಾರಾಕಾರ ಮಳೆ ಸುರಿಯುವ ಮುನ್ನೆಚ್ಚರಿಕೆಯನ್ನ ನೀಡಿದ್ದು ಗಂಟೆಗೆ 45 ರಿಂದ 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಕಡಲಿನಲ್ಲಿ ಅಲೆಗಳ ಅಬ್ಬರ ಸಹ ಹೆಚ್ಚಾಗಿದ್ದು, ಮೀನುಗಾರಿಕಾ ಬೋಟುಗಳನ್ನ ಬಂದರಿನಲ್ಲಿಯೇ ಲಂಗರು ಹಾಕಲಾಗಿದೆ. ಅಲ್ಲದೇ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದ್ದು, ತೀರಪ್ರದೇಶದ ನಿವಾಸಿಗಳು ಸುರಕ್ಷಿತವಾಗಿರುವಂತೆ ತಿಳಿಸಲಾಗಿದೆ.ಅಂಕೋಲಾ ತಾಲೂಕಿನ ಕೆಲ ಗ್ರಾಮೀಣ ಭಾಗ ಜಲಾವೃತ್ತವಾಗಿವೆ. ನದಿಬಾಗ, ಬೊಬ್ರುವಾಡದಲ್ಲಿ‌ ಮನೆಗೆ ನೀರು ನುಗ್ಗಿದ್ದು, 30 ಕುಟುಂಬ ಸ್ಥಳಾಂತರ ಮಾಡಲಾಗಿದೆ. ನದಿಬಾಗದ ಸರಕಾರಿ ಶಾಲೆಯಲ್ಲಿ ಗಂಜಿ‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ನದಿ ದಂಡೆ ಮತ್ತು ಸಮುದ್ರ‌ ತೀರದ ಜನವಸತಿ ಪ್ರದೇಶದಲ್ಲಿ ಆತಂಕ ಮನೆ ಮಾಡಿದೆ.

ಒಟ್ಟಾರೇ ಅವಧಿಗೆ ಮುನ್ನವೇ ಕರಾವಳಿಯಲ್ಲಿ ಮಾನ್ಸೂನ್ ಪ್ರವೇಶವಾಗಿದ್ದು ಸತತವಾಗಿ ಸುರಿಯುತ್ತಿರುವ ಮಳೆ ಜನರಲ್ಲಿ ಆತಂಕ ಮೂಡಿಸಿದ್ದಂತೂ ಸತ್ಯ. ಮುಂದಿನ ನಾಲ್ಕು ದಿನಗಳು ಮಳೆ ಮುಂದುವರೆಯಲಿದ್ದು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.
First published: June 13, 2020, 8:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading