ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ; ಚಿಕ್ಕೋಡಿಯ ಭಾಗದ ನದಿಗಳ ಒಳಹರಿವಿನಲ್ಲಿ ದಿಢೀರ್ ಹೆಚ್ಚಳ

ದೂದಗಂಗಾ ಹಾಗೂ ವೇದಗಂಗಾ ನದಿಯಲ್ಲಿ ನೀರಿನ‌ ಪ್ರಮಾಣ ಹೆಚ್ಚಳವಾದಂತೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣ 4 ಅಡಿ ಹೆಚ್ಚಳವಾಗಿದೆ.

ತುಂಬಿ ಹರಿಯುತ್ತಿರುವ ಕೃಷ್ಣಾ ನದಿ.

ತುಂಬಿ ಹರಿಯುತ್ತಿರುವ ಕೃಷ್ಣಾ ನದಿ.

  • Share this:
ಬೆಳಗಾವಿ (ಜೂನ್ 17); ಇತಿಹಾಸ ಕಾಣದ ಪ್ರವಾಹ ಕಳೆದು ವರ್ಷ ಕಳೆಯುವಷ್ಟರಲ್ಲೆ ಮತ್ತೆ ಮಳೆಗಾಲ ಆರಂಭವಾಗಿದ್ದು, ಹಳೆಯ ನೆನಪುಗಳು ಮಾಸುವ ಮುನ್ನವೆ ಕೃಷ್ಣಾ ತೀರದ ಜನರಲ್ಲಿ ಮತ್ತೊಮ್ಮೆ ಪ್ರವಾಹದ ಆತಂಕ ಮನೆ ಮಾಡಿದೆ. ಮಹಾರಾಷ್ಟ್ರದ ಘಟ್ಟಪ್ರದೇಶ ಹಾಗೂ ಕೃಷ್ಣಾ ನದಿ ಅಚ್ಚುಕಟ್ಟು ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ರಾಜ್ಯದ ಚಿಕ್ಕೋಡಿ ನಿಪ್ಪಾಣಿ ತಾಲೂಕಿನ ನದಿ ತೀರದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಭಾರಿ ಪ್ರಮಾಣದಲ್ಲಿ ಸುರಿಯುತ್ತಿರುವ ಮಳೆಯಿಂದ ನಿಪ್ಪಾಣಿ ತಾಲೂಕಿನ ಧೂದಗಂಗಾ ನದಿಯ ಒಳಹರಿವಿನ ಪ್ರಮಾಣದಲ್ಲಿ ದಿಢೀರ ಹೆಚ್ಚಳವಾಗಿದೆ. ಹೀಗಾಗಿ ಕಾರದಗಾ - ಭೋಜ ಗ್ರಾಮಗಳ ನಡುವಿನ ಸಂಪರ್ಕ ಸೇತುವೆ ಜಲಾವೃತವಾಗಿದೆ. ಪರಿಣಾಮ ಗ್ರಾಮಸ್ಥರು ಸುತ್ತುವರೆದು ಪ್ರಯಾಣ ಬೆಳೆಸುವಂತಾಗಿದೆ.

ಇನ್ನೂ ದೂದಗಂಗಾ ಹಾಗೂ ವೇದಗಂಗಾ ನದಿಯಲ್ಲಿ ನೀರಿನ‌ ಪ್ರಮಾಣ ಹೆಚ್ಚಳವಾದಂತೆ ಚಿಕ್ಕೋಡಿ ತಾಲೂಕಿನ ಕೃಷ್ಣಾ ನದಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಳವಾಗಿದ್ದು, ಒಂದೇ ರಾತ್ರಿಯಲ್ಲಿ ನೀರಿನ ಪ್ರಮಾಣ 4 ಅಡಿ ಹೆಚ್ಚಳವಾಗಿದೆ. ಮಳೆಗಾಲ ಆರಂಭದಲ್ಲೆ ಈ ಪ್ರಮಾಣದಲ್ಲಿ ಮಳೆಯಿಂದ ನದಿಗಳಿಗೆ ನೀರು ಹರಿದು ಬರುತ್ತಿರುವದು ಈ ಬಾರಿಯೂ ಪ್ರವಾಹದ ಆತಂಕಕ್ಕೆ ಕಾರಣವಾಗಿದೆ.

ದಿಢೀರ್ ನೀರು ಹೆಚ್ಚಳಕ್ಕೆ ಕಾರಣ?

ಕಳೆದ ವರ್ಷ ಹೆಚ್ಚಿನ ಮಳೆ ಆಗಿದ್ದರಿಂದ ಕೃಷಿ ಚಟುವಟಿಕೆಗಳು ತೀರ ಕಡಿಮೆ ಆಗಿದ್ದವು ಅಲ್ಲದೆ ಕೊರೊನಾ ಹೊಡೆತಕ್ಕೆ 3 ತಿಂಗಳು ರೈತರ ಕೃಷಿ ಚಟುವಟಿಕೆ ಕೂಡ ಮಂದ ಗತಿಯಲ್ಲಿ ಸಾಗಿತ್ತು. ಪರಿಣಾಮ ಮಹಾರಾಷ್ಟ್ರದಿಂದ ರಾಜ್ಯದ ಗಡಿಯವರೆಗೂ ಮಹಾರಾಷ್ಟ್ರ ಕೃಷ್ಣಾ ದೂದಗಂಗಾ ವೇದಗಂಗಾ ನದಿಗಳಿಗೆ ಅಡ್ಡಲಾಗಿ ಬ್ಯಾರೇಜಗಳನ್ನ ನಿರ್ಮಾಣ ಮಾಡಲಾಗಿತ್ತು.

ಈ ಎಲ್ಲಾ ಬ್ಯಾರೇಜ್ ಗಳಲ್ಲಿ ನೀರು ಖರ್ಚಾಗದೆ ತುಂಬಿಯೆ ಇದೆ. ಪರಿಣಾಮ ಈಗ ನೀರು ಸಂಗ್ರಹಕ್ಕೆ ಸಾಧ್ಯವಾಗದೆ ಮಹಾರಾಷ್ಟ್ರ ಬಂದ ನೀರನ್ನ ನೇರವಾಗಿ ಹರಿ ಬಿಡುತ್ತಿರುವ ಕಾರಣ ಮಳೆಗಾಲದ ಆರಂಭದಲ್ಲೆ ನದಿಗಳ ಒಳ ಹರಿವಿನ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಪ್ರವಾಹ ಎದುರಿಸಲು ಸಜ್ಜಾಗಿ;

ಇನ್ನು ನಿನ್ನೆಯಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೋಳಿ ನಿಪ್ಪಾಣಿ ಹಾಗೂ ಚಿಕ್ಕೋಡಿ ತಾಲೂಕಿನ ಅಧಿಕಾರಿಗಳ ಸಭೆ ಕರೆದು ಚರ್ಚೆ ನಡೆಸಿದ್ದಾರೆ. ಈ ಬಾರಿಯು ಪ್ರವಾಹ ಬರುವ ಮುನ್ಸೂಚನೆ ಇದ್ದು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಲ್ಲದೆ ಈಗಾಗಲೇ ನದಿ ತೀರಲ್ಲಿ ಇರುವ ಬೋಟಗಳನ್ನ ರಿಪೇರಿ ಮಾಡಿಸಬೇಕು. ಇದರ ಜೊತೆಗೆ ಕಾರವಾರದಿಂದ ಹಚ್ಚಿನ ಬೋಟ್ ಗಳನ್ನ ತರೆಸಿಕೊಳ್ಳಿ ನದಿ ಪಾತ್ರದ ಜನರಲ್ಲಿ ಈಗಿನಿಂದಲೆ ಎಚ್ಚರಿಗೆ ಮೂಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಅಲ್ಲದೆ ಮಹಾರಾಷ್ಟ್ರದ ನೀರಾವರಿ ಇಲಾಖೆ ಅಧಿಕಾರಿಗಳ ಜೋತೆ ನಿರಂತರ ಸಂಪರ್ಕದಲ್ಲಿದ್ದು ನಿಗಾ ವಹಿಸುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ : Indo-China Conflict: ಗಾಲ್ವಾನ್‌ ಕಣಿವೆಯಲ್ಲಿ ಸತ್ತ ಚೀನಾ ಸೈನಿಕರ ಸಂಖ್ಯೆ ಎಷ್ಟು? ಪ್ರತಿಕ್ರಿಯಿಸಲು ನಿರಾಕರಿಸಿದ ಚೀನಾ

ಒಟ್ಟಿನಲ್ಲಿ ಪ್ರತಿಬಾರಿಯು ಮಳೆಗಾಲ ಆರಂಭವಾಗಿ ಒಂದು ತಿಂಗಳ ಬಳಿಕ ಚಿಕ್ಕೋಡಿ ತಾಲೂಕಿನ ನದಿಗಳಲ್ಲಿ ನೀರಿನ ಒಳಹರಿವು ಹೆಚ್ಚಾಗುತ್ತಿತ್ತು. ಆದರೆ, ಈಗ ಮಳೆಗಾಲದ ಆರಂಭದಲ್ಲಿ ನೀರಿನ ಪ್ರಮಾಣದಲ್ಲಿ ಹೆಚ್ಚಾಳವಾಗಿದ್ದು ಮತ್ತೊಮ್ಮೆ ಪ್ರವಾಹದ ಆತಂಕ ನದಿ ತೀರದ ಜನರಲ್ಲಿ ಮನೆ ಮಾಡಿದೆ.
First published: