ಮುಂದುವರೆದ ಮಹಾ ಮಳೆ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ; ನಡುಗಡ್ಡೆಗಳಾದ ತೋಟದ ವಸತಿ ಪ್ರದೇಶಗಳು

ಮಹಾರಾಷ್ಟ್ರದ ಎಲ್ಲಾ ಜಲಾಶಯಗಳು ಬಹುತೇಕ ತುಂಬಿದ್ದು, ಮಳೆ ಪ್ರಮಾಣ ಜಾಸ್ತಿಯಾದರೆ ಇನ್ನು ಹೆಚ್ಚಿನ ನೀರು ಬರುವ ಸಂಭವವಿದೆ. ಸದ್ಯ ಆಲಮಟ್ಟಿ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರು ಹೊರಗೆ ಬಿಡುವ ಮೂಲಕ ಪ್ರವಾಹದ ಸನ್ನಿವೇಶ ತಡೆಯಲು ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ.

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ

ಉಕ್ಕಿ ಹರಿಯುತ್ತಿರುವ ಕೃಷ್ಣಾ ನದಿ

  • Share this:
ಚಿಕ್ಕೋಡಿ; ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದು, ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ 2 ಲಕ್ಷ ಕ್ಯೂಸೆಕ್ ನಷ್ಟು ನೀರು ಕೃಷ್ಣಾ ನದಿ ಮೂಲಕ ರಾಜ್ಯಕ್ಕೆ ಹರಿದು ಬರುತ್ತಿದ್ದು, ಇದು ಚಿಕ್ಕೋಡಿ ತಾಲೂಕಿನಲ್ಲಿ ಪ್ರವಾಹದ ಆತಂಕ ಸೃಷ್ಟಿಸಿದೆ. ಚಿಕ್ಕೋಡಿ ತಾಲೂಕಿನ ಇಂಗಳಿ, ಯಡೂವಾಡಿ, ಗ್ರಾಮದ ತೋಟದ ವಸತಿ ಪ್ರದೇಶಗಳಿಗೂ ನೀರು ನುಗ್ಗಿದ್ದು 100ಕ್ಕೂ ಹೆಚ್ಚು ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ.

ಚಿಕ್ಕೋಡಿ ತಾಲೂಕಿನ ಇಂಗಳಿ ಹಾಗೂ ಯಡೂರವಾಡಿ ಗ್ರಾಮದ ತೋಟದ ವಸತಿ ಪ್ರದೇಶ ಸುಮಾರು 100ಕ್ಕೂ ಹೆಚ್ಚು ಮನೆಗಳಿರುವಂತಹ ಪ್ರದೇಶ. ಕೃಷ್ಣಾ ನದಿಯ ಹಿನ್ನಿರಿನಿಂದ ಈ ಪ್ರದೇಶ ನಡುಗಡ್ಡೆಯಾಗಿ ಮಾರ್ಪಟ್ಟಿತು. ಜನ ಗ್ರಾಮದಿಂದ ತೋಟದ ಮನೆಗಳಿಗೆ ಎದೆ ಮಟ್ಟದ ನೀರಿನಲ್ಲೆ ನಡೆದುಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಗ್ಗೆ ನ್ಯೂಸ್ 18 ಕನ್ನಡ ಸುದ್ದಿ ಪ್ರಸಾರ ಮಾಡಿ ಜನರ ಕಷ್ಟವನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿತ್ತು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಇಂಗಳಿ ಹಾಗೂ ಯಡೂರವಾಡಿ ಗ್ರಾಮಕ್ಕೆ ಬೋಟ್ ವ್ಯವಸ್ಥೆ ಕಲ್ಪಿಸಿದೆ. ಅಲ್ಲಿಂದ ಬರುವ ಜನರನ್ನ ಬೋಟ್ ಮೂಲಕ ದಡ ಸೇರಿಸುವ ಕೆಲಸಕ್ಕೆ ಮುಂದಾಗಿದೆ.

ಸುರಕ್ಷಿತ ಸ್ಥಳಕ್ಕೆ ಜನರ ಸ್ಥಳಾಂತರ

ನ್ಯೂಸ್ 18 ನಲ್ಲಿ ಇಂಗಳಿ ಗ್ರಾಮದ ಸುದ್ದಿ ಪ್ರಸಾರವಾಗುತ್ತಿದ್ದಂತೆ ಸ್ಥಳಕ್ಕೆ ಚಿಕ್ಕೋಡಿ ತಹಸೀಲ್ದಾರ ಸುಭಾಶ ಸಂಪಗಾಂವೆ ಭೇಟಿ ನೀಡಿದ್ದಾರೆ. ದೋಣವಾಡೆ ತೋಟದ ಜನರ ಮನವೊಲಿಸಿ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ವೇಳೆ ನ್ಯೂಸ್18 ಜೊತೆ ಮಾತನಾಡಿದ ತಹಸೀಲ್ದಾರ್ ತಾಲೂಕಿನಲ್ಲಿ 20 ಬೋಟ್ ವ್ಯವಸ್ಥೆ ಮಾಡಲಾಗಿದೆ. 10ಕ್ಕೂ ಹೆಚ್ಚು ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ತಾಲೂಕಿನಲ್ಲಿ ಒಂದು NDRF ತಂಡ ನಿಯೋಜನೆ ಮಾಡಲಾಗಿದೆ. ತಾಲೂಕಿನ ಎಲ್ಲಾ ತೋಟದ ವಸತಿ ಜನರನ್ನು ಕಾಳಜಿ ಕೇಂದ್ರಗಳಿಗೆ ಕಳಿಸಲಾಗುವುದು. ತಾಲೂಕಾಡಳಿತ ಪ್ರವಾಹ ಎದುರಿಸಲು ಎಲ್ಲಾ ರೀತಿಯಲ್ಲೂ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.

ಇದನ್ನು ಓದಿ: Viral Video: ಹುಚ್ಚು ಧೈರ್ಯದಿಂದ ಡ್ಯಾಂಗೆ ಹಾರಿದ ಯುವಕನಿಗೆ 16 ಗಂಟೆ ಆಸರೆಯಾಯ್ತು ಸಣ್ಣದೊಂದು ರೆಂಬೆ!

ಒಟ್ಟಿನಲ್ಲಿ ಕ್ರಮೇಣವಾಗಿ ಕೃಷ್ಣಾ ನದಿ ನೀರು ಏರುತ್ತಲೇ ಇದೆ. ಮಹಾರಾಷ್ಟ್ರದ ಎಲ್ಲಾ ಜಲಾಶಯಗಳು ಬಹುತೇಕ ತುಂಬಿದ್ದು, ಮಳೆ ಪ್ರಮಾಣ ಜಾಸ್ತಿಯಾದರೆ ಇನ್ನು ಹೆಚ್ಚಿನ ನೀರು ಬರುವ ಸಂಭವವಿದೆ. ಸದ್ಯ ಆಲಮಟ್ಟಿ ಜಲಾಶಯದಿಂದಲೂ ಹೆಚ್ಚಿನ ಪ್ರಮಾಣದ ನೀರು ಹೊರಗೆ ಬಿಡುವ ಮೂಲಕ ಪ್ರವಾಹದ ಸನ್ನಿವೇಶ ತಡೆಯಲು ಜಿಲ್ಲಾಡಳಿತ ಹರ ಸಾಹಸ ಪಡುತ್ತಿದೆ. ಚಿಕ್ಕೋಡಿಯಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕೃಷ್ಣಾ ತೀರದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳ ಜೊತೆ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದ್ದಾರೆ.
Published by:HR Ramesh
First published: