ಕೊಡಗು; ಕಳೆದ ಎರಡು ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಅದೇ ರೀತಿ ಕೊಡಗು ಜಿಲ್ಲೆಯಲ್ಲಿ ನೆನ್ನೆಯಿಂದಲೂ ಧಾರಾಕಾರ ಮಳೆಯಾಗುತ್ತಿದ್ದು, ಕಾವೇರಿ ನದಿ ಪಾತ್ರದ ಜನರಲ್ಲಿ ಆತಂಕ ಮನೆ ಮಾಡಿದೆ.
ಒಂದೆಡೆ ಕೊರೋನಾ ಭೀತಿ ಹಾಗೂ ಮತ್ತೊಂದೆಡೆ ಎರಡು ವರ್ಷದಿಂದ ಪ್ರಾಕೃತಿಕ ವಿಕೋಪದಿಂದ ನಲುಗಿಹೋಗಿದ್ದ ಕೊಡಗಿನಲ್ಲಿ ಮತ್ತೆ ಮಳೆ ಅರ್ಭಟ ಹೆಚ್ಚಾಗಿದ್ದು, ಸ್ಥಳೀಯರಲ್ಲಿ ಸಹಜವಾಗಿ ಭೀತಿಯನ್ನು ಮೂಡಿಸಿದೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲೆಯ ಕುಶಾಲನಗರ ಹಾಗೂ ಸುಂಟಿಕೊಪ್ಪ ಪಟ್ಟಣಗಳಲ್ಲಿ ವರ್ತಕರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೊರೋನಾ ಭೀತಿ ಹಾಗೂ ಮಳೆಯ ಆತಂಕದ ನಡುವೆ ಜನತೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದು ಮಧ್ಯಾಹ್ನದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಇದರಿಂದ ಮಡಿಕೇರಿಯ ನಗರದಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಜನತೆ ಕೊಡೆಗಳನ್ನು ಹಿಡಿದು ಸಾಗಿದ ದೃಶ್ಯಗಳು ಕಂಡು ಬಂದವು. ಕಳೆದೆರಡು ವರ್ಷಗಳಿಂದ ಮಹಾ ಮಳೆಯ ಭಯ ಕಾಡುತ್ತಿದ್ದು, ಈ ವರ್ಷ ಕೂಡ ಪ್ರವಾಹ, ಪ್ರಾಕೃತಿಕ ವಿಕೋಪದ ಭೀತಿ ಕೊಡಗಿನ ಜನರಲ್ಲಿ ಮೂಡಿದೆ.
ಭಾರೀ ಮಳೆಗೆ ಪುತ್ತೂರು- ಬೆಟ್ಟಂಪಾಡಿ ಸಂಪರ್ಕಿಸುವ ಚೇಳ್ಯಡ್ಕ ಸೇತುವೆ ಮುಳುಗಡೆಯಾಗಿದೆ. ಈ ಚೇಳ್ಯಡ್ಕ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕೊರೋನಾ ಲಾಕ್ಡೌನ್ ಇರುವುದರಿಂದ ಜನರ ಸಂಚಾರವಿಲ್ಲದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪುತ್ತೂರು, ಸುಳ್ಯ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆಯಾಗಿದ್ದು, ನದಿ-ತೊರೆಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ.
ಇದನ್ನು ಓದಿ: Bengaluru Rain: ಬೆಂಗಳೂರಿನಲ್ಲಿ ಗುಡುಗು ಸಮೇತ ಧಾರಕಾರ ಮಳೆ
ಕಳೆದೊಂದು ವಾರದಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇದರಿಂದ ಕೊರೋನಾ ರೋಗ ಹರಡುವ ಭಯದಲ್ಲಿ ಜನ ಕಾಲ ಕಳೆಯುವಂತಾಗಿದೆ. ಶಿವಮೊಗ್ಗ, ಮಂಗಳೂರು, ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಮೈಸೂರು ಸೇರಿದಂತೆ ಹಲವೆಡೆ ಜೋರು ಮಳೆ ಸುರಿಯುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ