ಧಾರಾಕಾರ ಮಳೆಗೆ ಕೊಡಗು ಜಿಲ್ಲೆ ತತ್ತರ: ಮಣ್ಣು ಕುಸಿದು ರಸ್ತೆಗಳು ಬಂದ್​​!

ಭಾರೀ ಮಳೆಗೆ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಮತ್ತು ತಂತಿಪಾಲ ನಡುವೆ ರಸ್ತೆಯ ಪಕ್ಕದಲ್ಲಿ ಭಾರೀ ಭೂಕುಸಿತವಾಗಿದೆ. ಇದರಿಂದಾಗಿ ಮುಕ್ಕೋಡ್ಲು ಮತ್ತು ತಂತಿಪಾಲ ಹಾಗೂ ಆವಂಡಿ, ಹೊದಕಾನಗಳ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.

ಗುಡ್ಡ ಕುಸಿದು ರಸ್ತೆ ಬಂದ್​

ಗುಡ್ಡ ಕುಸಿದು ರಸ್ತೆ ಬಂದ್​

  • Share this:
ಕೊಡಗು:  ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಭಾಗಮಂಡಲ ಮತ್ತು ತಲಕಾವೇರಿ ಭಾಗದಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ ಭಾಗಮಂಡಲ ಬಹುತೇಕ ಜಲಾವೃತವಾಗಿದೆ. ಭಾಗಮಂಡಲ ನಾಪೋಕ್ಲು ರಸ್ತೆ ಮೇಲೆ ಕಾವೇರಿ ನದಿ ಪ್ರವಾಹದ ನೀರು ಹರಿಯುತ್ತಿದ್ದು, ಭಾಗಮಂಡಲ ನಾಪೋಕ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ರಸ್ತೆಯ ಮೇಲ್ಭಾಗದಲ್ಲಿ 5 ಅಡಿಯಷ್ಟು ನೀರು ಹರಿಯುತ್ತಿದ್ದು ಜನರು ಪ್ರವಾಹದ ನೀರಿನಲ್ಲೇ ಅಪಾಯದ ಸ್ಥಿತಿಯಲ್ಲಿ ರಸ್ತೆ ದಾಟುತಿದ್ದಾರೆ.

ಪ್ರವಾಹದ ನೀರು ಕ್ಷಣ ಕ್ಷಣಕ್ಕೂ ಪ್ರವಾಹದ ನೀರು ಏರಿಕೆಯಾಗುತ್ತಲೇ ಇದ್ದು ಸ್ಥಳದಲ್ಲಿರುವ ಪೊಲೀಸರು ಯಾರು ಪ್ರವಾಹದ ನೀರಿಗೆ ಇಳಿದು ರಸ್ತೆ ದಾಟಿ ಬರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಮತ್ತೊಂದೆಡೆ ಭಾಗಮಂಡಲದಲ್ಲಿ ಮಡಿಕೇರಿ ಮತ್ತು ಭಾಗಮಂಡಲ ಸಂಪರ್ಕ ರಸ್ತೆ ಮೇಲೂ ಎರಡು ಅಡಿಯಷ್ಟು ನೀರು ಹರಿಯುತ್ತಿದ್ದು ಮಳೆ ಹೀಗೆ ಮುಂದುವರಿದಲ್ಲಿ ಸಾಕಷ್ಟು ಸಮಸ್ಯೆಯಾಗುವ ಸಾಧ್ಯತೆ ಇದೆ. ಮೂರು ವರ್ಷಗಳಿಂದ ಭಾಗಮಂಡದಲ್ಲಿ ಮೇಲ್ಸೇತುವೆ ಕಾಮಗಾರಿ ಮಾಡುತ್ತಿದ್ದು ಇನ್ನೂ ಪೂರ್ಣಗೊಳ್ಳದಿರುವುದಕ್ಕೆ ಕೋರಂಗಾಲದ ಮಹಿಳೆ ಕಲಾವತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಭಾರೀ ಮಳೆಗೆ ಮಡಿಕೇರಿ ತಾಲ್ಲೂಕಿನ ಮುಕ್ಕೋಡ್ಲು ಮತ್ತು ತಂತಿಪಾಲ ನಡುವೆ ರಸ್ತೆಯ ಪಕ್ಕದಲ್ಲಿ ಭಾರೀ ಭೂಕುಸಿತವಾಗಿದೆ. ಇದರಿಂದಾಗಿ ಮುಕ್ಕೋಡ್ಲು ಮತ್ತು ತಂತಿಪಾಲ ಹಾಗೂ ಆವಂಡಿ, ಹೊದಕಾನಗಳ ನಡುವಿನ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚು ರಂಜನ್ ಕೂಡಲೇ ಜೆಸಿಬಿ ಯಂತ್ರ ತರಿಸಿ ಕುಸಿದಿದ್ದ ಮಣ್ಣನ್ನು ಸ್ವಲ್ಪ ಪ್ರಮಾಣದಲ್ಲಿ ತೆರವುಗೊಳಿಸಿಸಿದ್ದಾರೆ. ಕಾರು ಜೀಪು ಸೇರಿದಂತೆ ಲಘು ವಾಹನಗಳ ಓಡಾಟಕ್ಕೆ ಅವಕಾಶ ಮಾಡಿದ್ದಾರೆ. ಜೊತೆಗೆ ಹಟ್ಟಿಹೊಳೆ ತುಂಬಿ ಹರಿಯುತ್ತಿರುವ ಪರಿಣಾಮ ಮುಕ್ಕೋಡ್ಲು  ಸೇತುವೆ ಮೇಲೆ ಪ್ರವಾಹದಂತೆ ನೀರು ಹರಿಯುತ್ತಿದೆ. ವಿಷಯ ತಿಳಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಸ್ಥಳಕ್ಕೆ ಭೇಟಿ ಅಲ್ಲಿಯೂ ಪರಿಶೀಲನೆ ನಡೆಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: Karnataka Rain: ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಯಲ್ಲಿ ಹೆಚ್ಚಿದ ಪ್ರವಾಹ, ಜನಜೀವನ ಅಸ್ತವ್ಯಸ್ತ..!

ಹಾರಂಗಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಹಾರಂಗಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದಿಂದ 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡುವಂತೆ ಅಪ್ಪಚ್ಚು ರಂಜನ್ ಹಾರಂಗಿ ಜಲಾಶಯದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾರಂಗಿಯಿಂದ ಭಾರೀ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕಾವೇರಿ ನದಿಯ ನೀರು ಹರಿಯುವಿಕೆಗೆ ಅಡ್ಡಿಯಾಗಿದೆ. ಮಡಿಕೇರಿ ತಾಲ್ಲೂಕಿನ ಕುಂಜಿಲ ಕಕ್ಕಬ್ಬೆಯಲ್ಲಿ ಕಕ್ಕಬ್ಬೆ ಹೊಳೆ ತುಂಬಿ ಹರಿಯುತ್ತಿದ್ದು, ಹಲವು ಮನೆಗಳು ಜಲಾವೃತಗೊಂಡಿವೆ. ಇನ್ನು ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಹಲವೆಡೆ ರಸ್ತೆ ಬದಿಯಲ್ಲಿ ಕುಸಿತವಾಗಿದ್ದು ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಸ್ಥಳಕ್ಕೆ ಭೇಟಿ ಪರಿಶೀಲಿಸಿದ್ದಾರೆ.

ಸೋಮವಾರಪೇಟೆ ತಾಲ್ಲೂಕಿನ ಚೆಟ್ಟಳ್ಳಿ ಬಳಿ ಭೂಕುಸಿತವಾಗಿದ್ದು ಮಡಿಕೇರಿ ಸಿದ್ಧಾಪುರ ನಡುವಿನ ರಸ್ತೆ ಸಂಪರ್ಕ ಬಂದ್ ಆಗಿದೆ. ಇನ್ನು ಪೊನ್ನಂಪೇಟೆ ತಾಲ್ಲೂಕಿನಲ್ಲಿ ಹರಿಯುತ್ತಿರುವ ಲಕ್ಷ್ಮಣ ತೀರ್ಥ ನದಿ ಉಕ್ಕಿ ಹರಿದಯುತ್ತಿದ್ದು, ಶ್ರೀಮಂಗಲ ನಾಲ್ಕೇರಿ ಗ್ರಾಮಗಳ ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ. ಒಟ್ಟಿನಲ್ಲಿ ಜುಲೈ ಮತ್ತು ಆಗಸ್ಟ್ ತಿಂಗಳು ಅಂದರೆ ಕೊಡಗಿನ ಜನರು ಆತಂಕಪಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆವರೆಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಸ್ಥಿತಿ ಏನಿರುವುದೋ ಹೇಗಿರುವುದೋ ಎನ್ನೊ ಆತಂಕ ಎದುರಾಗಿದೆ.
Published by:Kavya V
First published: