ಅಲ್ಪಾವಧಿ ಬೆಳೆಗಳ ಜೊತೆ ತೊಗರಿಗೂ ಕುತ್ತು ; ಸಾಕೋ ಸಾಕೋ ಮಳೆರಾಯ ಎನ್ನುತ್ತಿರುವ ಕಲಬುರ್ಗಿ ರೈತರು

ಸರಾಸರಿಗಿಂತ ಒಂದೂವರೆ ಪಟ್ಟು ಮಳೆ ಹೆಚ್ಚಾಗಿದೆ. ಅದರಲ್ಲಿಯೂ ಕಳೆದ ಕೆಲ ದಿನಗಳಿಂದ ಜಿಲ್ಲೆಯ ಬಹುತೇಕ ಕಡೆ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.

ಹಾನಿಯಾಗಿರುವ ತೊಗರಿ ಬೆಳೆ

ಹಾನಿಯಾಗಿರುವ ತೊಗರಿ ಬೆಳೆ

  • Share this:
ಕಲಬುರ್ಗಿ(ಆಗಸ್ಟ್. 18): ತೊಗರಿಯ ಕಣಜ ಕಲಬುರ್ಗಿಯಲ್ಲಿ ರೈತರು ತತ್ತರಿಸುವಂತಾಗಿದೆ. ನಿರಂತರ ಮಳೆಯಿಂದಾಗಿ ಮುಂಗಾರು ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಅಲ್ಪಾವಧಿ ಬೆಳೆಗಳು ರೈತರ ಕೈಗೆಟುಕದ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ತೊಗರಿಯ ಮೇಲೆಯೂ ಮಳೆ ತೀವ್ರ ಪರಿಣಾಮ ಬೀರಿದೆ. ಹುಯ್ಯೋ.. ಹುಯ್ಯೋ... ಮಳೆರಾಯ ಎನ್ನುತ್ತಿದ್ದ ರೈತರು ಸಾಕೋ ಸಾಕೋ ಮಳೆರಾಯ ಎನ್ನುತ್ತಿದ್ದಾರೆ. ಕೂಡಲೇ ಬೆಳೆ ಹಾನಿಯ ಸಮೀಕ್ಷೆ ನಡೆಸಿ, ಪ್ರತಿ ಎಕರೆಗೆ ಕನಿಷ್ಟ 10 ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ.

ಕಲಬುರ್ಗಿ ತೊಗರಿಯ ಕಣಜ ಶೇ.70 ರಷ್ಟು ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗುತ್ತದೆ. ಈ ಬಾರಿ ಮುಂಗಾರು ಮಳೆ ಮುಂಚಿತವಾಗಿ ಬಂದಿದ್ದರಿಂದ ತೊಗರಿ ಬಿತ್ತನೆ ಜೊತೆಗೆ ಅಲ್ಪಾವಧಿ ಬೆಳೆಗಳನ್ನು ಹಾಕಿ ಅದೃಷ್ಟ ಪರೀಕ್ಷೆ ನಡೆಸಿದ್ದರು. ಜಿಲ್ಲೆಯಲ್ಲಿ ಸುಮಾರು ಮೂರು ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬಿತ್ತನೆ ಮಾಡಲಾಗಿದೆ. ಅದರಲ್ಲಿಯೂ ಬಹುತೇಕ ಕಡೆ ತೊಗರಿ ಬಿತ್ತನೆ ಮಾಡಲಾಗಿದೆ. ಮಿಶ್ರ ಬೆಳೆಯಾಗಿ ಹೆಸರು, ಉದ್ದು, ಎಳ್ಳು, ಸಜ್ಜೆ ಹಾಕಲಾಗಿದೆ. ಆದರೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಸಮುದಾಯ ಕಂಗಾಲಾಗುವಂತೆ ಮಾಡಿದೆ.

ಸರಾಸರಿಗಿಂತ ಒಂದೂವರೆ ಪಟ್ಟು ಮಳೆ ಹೆಚ್ಚಾಗಿದೆ. ಅದರಲ್ಲಿಯೂ ಕಳೆದ ಕೆಲ ದಿನಗಳಿಂದ ಜಿಲ್ಲೆಯ ಬಹುತೇಕ ಕಡೆ ಜಿಟಿ ಜಿಟಿ ಮಳೆಯಿಂದಾಗಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಕಟಾವಿಗೆ ಬಂದಂತಹ ಹೆಸರು ಮಣ್ಣು ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ರೈತರಿಗೆ ಆಪದ್ಭಾಂದವ ಎನಿಸಿದ ತೊಗರಿಯೂ ಕುತ್ತು ಬಂದಿದೆ. ನಿರಂತರ ಮಳೆಯಿಂದಾಗಿ ತೊಗರಿ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ತಗ್ಗು ಪ್ರದೇಶದಲ್ಲಿ ತೊಗರಿ ಸಾಯಲಾರಂಭಿಸಿದೆ. ಅಲ್ಪಾವಧಿ ಬೆಳೆಗಳು ಕೈಗೆ ಬಾರದ ಸ್ಥಿತಿ ಒಂದೆಡೆಯಾದರೆ, ದೀರ್ಘಾವಧಿ ಬೆಳೆ ತೊಗರಿಗೂ ಕುತ್ತು ಬಂದಿರುವುದು ಮತ್ತೊಂದೆಡೆ. ಹೀಗಾಗಿ ಕೂಡಲೇ ಮಳೆ ಹಾನಿಯ ಸಮೀಕ್ಷೆ ಮಾಡಬೇಕು. ಪ್ರತಿ ಎಕರೆಗೆ ಕನಿಷ್ಟ 10 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮುಂದುವರೆದ ಮಹಾ ಮಳೆ, ಕೃಷ್ಣಾ ತೀರದಲ್ಲಿ ಪ್ರವಾಹದ ಆತಂಕ; ನಡುಗಡ್ಡೆಯಾದ ತೋಟದ ವಸತಿ ಪ್ರದೇಶಗಳು

ಮುಂಗಾರಿನಲ್ಲಿ ಬೆಳೆಯುವ ಹೆಸರು, ಉದ್ದು, ಎಳ್ಳುಗಳು ರೈತರ ಆರ್ಥಿಕತೆಗೆ ಬೆಂಬಲವಾಗಿರುತ್ತಿದ್ದವು. ರೈತನ ಕೈಗೆ ಒಂದಷ್ಟು ಆದಾಯ ತಂದುಕೊಡುವುದಲ್ಲದೆ, ಹಿಂಗಾರು ಬಿತ್ತನೆಗೆ ಇದು ನೆರವಾಗುತ್ತಿತ್ತು. ಆದರೆ ಮಳೆರಾಯನ ಕಾರಣದಿಂದಾಗಿ ಮುಂಗಾರು ಬೆಳೆಗಳಿಗೆ ಧಕ್ಕೆ ಬಂದಿದೆ. ಅಲ್ಪಾವಧಿ ಬೆಳೆಗಳು ಹಾನಿಗೀಡಾಗಿ ಕೈಸುಟ್ಟು ಕೊಳ್ಳುವ ಜೊತೆಗೆ ಮುಖ್ಯ ಬೆಳೆಯಾದ ತೊಗರಿಯೂ ಹಾನಿಗೀಡಾಗುತ್ತಿರುವುದು ರೈತರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಬೀಜ, ಗೊಬ್ಬರ, ಔಷಧ ಸಿಂಪರಣೆ, ಕಳೆ ತೆಗೆಯಿಸುವುದು ಸೇರಿದಂತೆ ರೈತ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡಿದ್ದಾರೆ. ಹೀಗಿರಬೇಕಾದರೆ ಮಳೆರಾಯನ ಅಬ್ಬರಕ್ಕೆ ರೈತ ನಲುಗುವಂತಾಗಿದೆ. ಮಳೆ ಇದೇ ರೀತಿ ಮುಂದುವರೆದರೆ, ತೊಗರಿ ಬೆಳೆ ಮತ್ತಷ್ಟು ಹಾನಿಗೆ ತುತ್ತಾಗೋ ಸಾಧ್ಯತೆಯಿದ್ದು, ರೈತರು ಸಾಕೋ ಸಾಕೋ ಮಳೆರಾಯ ಎಂದು ಮಳೆ ನಿಲ್ಲುವಂತೆ ಪ್ರಾರ್ಥಿಸುತ್ತಿದ್ದಾರೆ.
Published by:G Hareeshkumar
First published: