news18-kannada Updated:October 11, 2020, 8:56 PM IST
ಬಾಲಕರು
ಕಲಬುರ್ಗಿ(ಅಕ್ಟೋಬರ್. 11): ಬಯಲುಸೀಮೆ ಎನಿಸಿಕೊಂಡಿದ್ದ ಕಲಬುರ್ಗಿಯಲ್ಲಿ ಈ ವರ್ಷ ವರುಣನ ಅಬ್ಬರ ಮುಂದುವರೆದಿದೆ. ಪ್ರತಿ ವರ್ಷ ಮಳೆಗಾಗಿ ಎದುರು ನೋಡುತ್ತಿದ್ದ ರೈತ ಈ ಬಾರಿ ಮಳೆ ನಿಂತರ ಸಾಕೆನ್ನುವ ಮನಸ್ಥಿತಿಗೆ ಬಂದು ನಿಂತಿದ್ದಾನೆ. ಕೆಲ ದಿನಗಳ ಕಾಲ ವಿರಾಮ ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸಿದ್ದಾನೆ. ವರುಣನ ಅಬ್ಬರಕ್ಕೆ ಮತ್ತೆರಡು ಜೀವಗಳು ಬಲಿಯಾಗಿವೆ. ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಹಳ್ಳದಲ್ಲಿ ಕೊಚ್ಚಿ ಹೋಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಕಲಬುರ್ಗಿ ಜಿಲ್ಲೆಯ ಶಹಬಾದ್ ಪಟ್ಟಣದ ಬಳಿ ಘಟನೆ ನಡೆದಿದೆ. ಮೃತ ದುರ್ದೈವಿಗಳನ್ನು 14 ವರ್ಷದ ವಿಶ್ವನಾಥ್ ಹಾಗೂ 15 ವರ್ಷದ ಪೂರ್ಣಚಂದ್ರ ಜಾಯಿ ಎಂದು ಗುರುತಿಸಲಾಗಿದೆ. ಇಬ್ಬರೂ ಬಾಲಕರು ಶಹಾಬಾದ್ ನಿವಾಸಿಗಳು. ಭಾರಿ ಮಳೆಗೆ ಹಳೆ ಶಹಾಬಾದ್ ಗೆ ಹೊಂದಿಕೊಂಡಿರುವ ಕೆರೆ ಭರ್ತಿಯಾಗಿದ್ದು, ಹೆಚ್ಚುವರಿ ನೀರು ಹಳ್ಳಕ್ಕೆ ಹರಿದು ಬರುತ್ತಿದೆ. ಹಳ್ಳಕ್ಕೆ ಅಡ್ಡಲಾಗಿ ಕಟ್ಟಿರುವ ಚೆಕ್ ಡ್ಯಾಂ ದಾಟಲು ಹೋದಾಗ ದುರ್ಘಟನೆ ಸಂಭವಿಸಿದೆ.
ಕಾಲು ಜಾರಿ ಇಬ್ಬರೂ ಬಾಲಕರು ಜಲಸಮಾಧಿಯಾಗಿದ್ದಾರೆ. ಹಳ್ಳದಲ್ಲಿ ಸ್ವಲ್ಪ ದೂರದಲ್ಲಿಯೇ ಶವಗಳು ಪತ್ತೆಯಾಗಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ಶವಗಳನ್ನು ಹೊರತೆಗೆದಿದ್ದಾರೆ. ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಉಕ್ಕಿ ಹರಿದ ಹಳ್ಳ - ರಸ್ತೆ ಸಂಪರ್ಕ ಕಡಿತ :
ಕಲಬುರ್ಗಿ ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಕಲಬುರ್ಗಿ, ಆಳಂದ, ಕಮಲಾಪುರ ಮತ್ತಿತರ ತಾಲೂಕುಗಳಲ್ಲಿ ಭಾರಿ ಮಳೆಯಾಗಿದೆ. ಕಮಲಾಪುರ ತಾಲ್ಲೂಕಿನಲ್ಲಿ ಹಳ್ಳಗಳು ಉಕ್ಕಿ ಹರಿಯುತ್ತಿವೆ. ಕಮಲಾಪುರ ತಾಲ್ಲೂಕಿನ ಕಲ್ಮೂಡ ಗ್ರಾಮದ ಬಳಿಯ ಹಳ್ಳ ತುಬಿ ಹರಿಯುತ್ತಿದೆ. ಪರಿಣಾಮ ಕಲ್ಮುಡ ಮತ್ತು ಚೇಂಗಟಾ ಗ್ರಾಮಗಳ ನಡುವಿನ ಸಂಪರ್ಕ ಕಲ್ಪಿಸುವ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಇದನ್ನೂ ಓದಿ :
ಭಾರೀ ಮಳೆಗೆ ತತ್ತರಿಸಿದ ಬಿಸಿಲು ನಾಡು; ರಾಯಚೂರಿನ ಜನರು ಕಂಗಾಲು
ಮತ್ತೊಂದೆಡೆ ಆಳಂದ ತಾಲೂಕಿನ ಸಾಲೇಗಾಂವ್ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹಳ್ಳ ತುಂಬಿ ಹರಿಯುತ್ತಿರುವುದರಿಂದ ಗ್ರಾಮದ ಸಂಪರ್ಕ ಕಡಿತವಾಗಿದೆ. ಗ್ರಾಮದ ಕೆರೆ ತುಂಬಿದ್ದು, ಹೆಚ್ಚುವರಿ ನೀರು ಹಳ್ಳಕ್ಕೆ ಬರುತ್ತಿವೆ. ಸಾಲೆಗಾಂವ್ ಗ್ರಾಮದ ಹೋಟೆಲ್ ಗೂ ಮಳೆ ನೀರು ನುಗ್ಗಿದೆ. ಈರಣ್ಣಾ ಮಡಿವಾಳ ಎನ್ನುವವರಿಗೆ ಸೇರಿದ ಹೋಟೆಲ್ಗೆ ನೀರು ನುಗ್ಗಿ, ಹೋಟೆಲ್
ನಲ್ಲಿದ್ದ ಸಾಮಾನುಗಳು ಮಳೆ ನೀರುಪಾಲಾಗಿದೆ. ಜಿಲ್ಲೆಯ ಹಲವೆಡೆ ಸುರೀತಿರುವ ಮಳೆಯಿಂದ ತಗ್ಗು ಪ್ರದೇಶದ ಮನೆಗಳಿಗೆ, ಜಮೀನುಗಳಿಗೆ ನೀರು ನುಗ್ಗಿದ್ದು, ಜನ ಕಂಗಾಲಾಗುವಂತೆ ಮಾಡಿದೆ.
ಕಲಬುರ್ಗಿ ನಗರದಲ್ಲಿಯೂ ಧಾರಾಕಾರ ಮಳೆ :ಕಲಬುರ್ಗಿಯಲ್ಲಿ ಮತ್ತೆ ವರುಣ ಅಬ್ಬರಿಸಿದ್ದಾನೆ. ಕಲಬುರ್ಗಿ ನಗರ ಮತ್ತು ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗಿದೆ. ಕಲಬುರ್ಗಿ ನಗರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿದಿದೆ. ನಂತರ ಜಿಟಿ ಜಿಟಿ ಮಳೆ ಮುಂದುವರೆದಿದೆ.
ಕಳೆದ ರಾತ್ರಿಯೂ ನಗರ ಸೇರಿ ಜಿಲ್ಲೆಯ ಹಲವೆಡೆ ಮಳೆಯಾಗಿತ್ತು. ಇದೀಗ ಮತ್ತೆ ವರುಣ ಅಬ್ಬರಿಸಿದ್ದಾನೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಸತತ ಮಳೆಯಿಂದಾಗಿ ಜನ ಕಂಗೆಟ್ಟಿರುವಾಗ, ಮತ್ತೆ ಮಳೆ ಬಂದಿರೋದು ಆತಂಕಕ್ಕೆ ಕಾರಣವಾಗಿದೆ.
Published by:
G Hareeshkumar
First published:
October 11, 2020, 8:56 PM IST