ವರುಣನ ಅಬ್ಬರಕ್ಕೆ ಸಾವಿನ ಮನೆಯಾದ ಕಲಬುರ್ಗಿ ; ಕೆಲವೇ ದಿನಗಳ ಅಂತರದಲ್ಲಿ 10 ಸಾವು

ಹಳ್ಳ ದಾಟುವ ವೇಳೆ ಅತಿ ಹೆಚ್ಚು ಜನ ಸಾವಿಗೀಗಾಡಿದ್ದಾರೆ. ಜೊತೆಗೆ ಸಿಡಿಲು ಬಡಿದು, ಪ್ರವಾಹದಲ್ಲಿ ಕೊಚ್ಚಿ ಹೋಗಿಯೂ ಸಾವಿಗೀಡಾಗಿದ್ದಾರೆ. ಆಳಂದ ತಾಲೂಕಿನಲ್ಲಿ ಅತಿ ಹೆಚ್ಚು ಮೂರು ಜನ ಸಾವನ್ನಪ್ಪಿದ್ದಾರೆ

ಹಳ್ಳದಲ್ಲಿ ಕೊಚ್ಚಿಹೋದ  ಶವ ಹೊರ ತೆಗೆದ ಅಗ್ನಿಶಾಮಕದಳ ಸಿಬ್ಬಂದಿ

ಹಳ್ಳದಲ್ಲಿ ಕೊಚ್ಚಿಹೋದ ಶವ ಹೊರ ತೆಗೆದ ಅಗ್ನಿಶಾಮಕದಳ ಸಿಬ್ಬಂದಿ

  • Share this:
ಕಲಬುರ್ಗಿ(ಅಕ್ಟೋಬರ್​. 13): ಕಲಬುರ್ಗಿ ಬಯಲು ಸೀಮೆ ಎಂದೇ ಪ್ರಸಿದ್ಧಿ ಪಡೆದ ಪ್ರದೇಶ. ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರ ಎನ್ನುವ ಪರಿಸ್ಥಿತಿ. ಇದು ಹೀಗಿರುವಾಗ ಈ ವರ್ಷ ಮಾತ್ರ ಮಳೆ ಯಾಕಾದರೂ ಬರುತ್ತಿದೆ ಎನ್ನುವ ವಾತವರಣ ನಿರ್ಮಾಣವಾಗದೆ. ಸರಾಸರಿಗಿಂತ ದುಪ್ಪಟ್ಟು ಮಳೆಯಾಗಿದ್ದು, ಕೋಟ್ಯಾಂತರ ರೂಪಾಯಿ ಹಾನಿ ಸಂಭವಿಸಿದೆ. ಅದೆಲ್ಲಕ್ಕಿಂತಲೂ ಹೆಚ್ಚಾಗಿ ಹತ್ತಾರು ಜೀವಗಳನ್ನು ಮಳೆ ಬಲಿ ಪಡೆದಿದ್ದು, ಮಳೆ ಎಂದರೆ ಜಿಲ್ಲೆಯ ಜನ ಬೆಚ್ಚಿ ಬೀಳುವಂತಾಗಿದೆ. ವರುಣನ ಅಬ್ಬರಕ್ಕೆ ಬಿಸಿಲ ನಾಡು ಕಲಬುರ್ಗಿ ತತ್ತರಗೊಂಡಿದೆ. ಪ್ರತಿ ವರ್ಷ ವರುಣನಿಗಾಗಿ ಎದುರು ನೋಡುತ್ತಿದ್ದ ಜನ ಈ ಬಾರಿ ಸಾಕೋ ಸಾಕೋ ಮಳೆರಾಯ ಎನ್ನುವ ಮಾತು ಹೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಲಬುರ್ಗಿ ಜಿಲ್ಲೆಯಲ್ಲಿ ಜೂನ್ ತಿಂಗಳಿನಿಂದಲೂ ವರುಣ ಆಗಾಗ ಅಬ್ಬರಿಸುತ್ತಲೇ ಇದ್ದಾನೆ. ಇದರಿಂದಾಗಿ ಬೆಳೆ ಹಾನಿ ಒಂದೆಡೆಯಾದ್ರೆ, ಜೀವ ಹಾನಿ ಮತ್ತೊಂದೆಡೆ. ಮಳೆಗೆ ಜನ, ಜಾನುವಾರು ತತ್ತರಗೊಳ್ಳುವಂತಾಗಿದೆ. ಕೆಲವೇ ದಿನಗಳ ಅಂತರದಲ್ಲಿ 10 ಜೀವಗಳನ್ನು ಬಲಿ ಪಡೆದ ಮಳೆ. ಹಳ್ಳದಲ್ಲಿ ಕೊಚ್ಚಿ ಹೋಗಿ ಆರು ಜನ ಸಾವನ್ನಪ್ಪಿದ್ದಾರೆ.

ಕೆರೆಯಲ್ಲಿ ಮುಳುಗಿ ಇಬ್ಬರ ಸಾವನ್ನಪ್ಪಿದ್ದರೆ, ಸಿಡಿಲಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಜೊತೆಗೆ 50 ಕುರಿ ಸಿಡಿಲಿನ ಅಬ್ಬರಕ್ಕೆ ಬಲಿಯಾಗಿವೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಸಾಧಾರಣ ಮಳೆಯಾಗಿತ್ತು. ಆದರೆ, ಆಗಸ್ಟ್​​, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವರಣನ ಅಬ್ಬರ ತಾರಕಕ್ಕೇರಿದೆ. ನಿಂತರವಾಗಿ ಮುಂದುವರಿದಿರುವ ಮಳೆಗೆ ಜಿಲ್ಲೆಯ ಬಹುತೇಕ ಜಲಾಶಯ, ಕೆರೆಗಳು ಭರ್ತಿಯಾಗಿವೆ. ಬೆಣ್ಣೆತೊರಾ, ಅಮರ್ಜಾ, ಮುಲ್ಲಾಮಾರಿ, ಗಂಡೋರಿ ನಾಲಾ ಜಲಾಶಗಳೂ ಭರ್ತಿಯಾಗಿವೆ. ಇದರಿಂದಾಗಿ ಹೆಚ್ಚುವರಿ ನೀರು ನದಿ ಮತ್ತು ಹಳ್ಳಕ್ಕೆ ಬಿಡಲಾಗುತ್ತಿದೆ.

ಹಳ್ಳ ದಾಟುವ ವೇಳೆ ಅತಿ ಹೆಚ್ಚು ಜನ ಸಾವಿಗೀಗಾಡಿದ್ದಾರೆ. ಜೊತೆಗೆ ಸಿಡಿಲು ಬಡಿದು, ಪ್ರವಾಹದಲ್ಲಿ ಕೊಚ್ಚಿ ಹೋಗಿಯೂ ಸಾವಿಗೀಡಾಗಿದ್ದಾರೆ. ಆಳಂದ ತಾಲೂಕಿನಲ್ಲಿ ಅತಿ ಹೆಚ್ಚು ಮೂರು ಜನ ಸಾವನ್ನಪ್ಪಿದ್ದಾರೆ. ಶಹಾಬಾದ ಹಾಗೂ ಕಮಲಾಪುರ ತಾಲೂಕುಗಳಲ್ಲಿ ತಲಾ ಇಬ್ಬರು ಮಳೆಗೆ ಆಹುತಿಯಾಗಿದ್ದಾರೆ. ಕಲಬುರ್ಗಿ, ಚಿಂಚೋಳಿ ಹಾಗೂ ಸೇಡಂ ತಾಲೂಕುಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ. ಚಿಂಚೋಳಿ ತಾಲೂಕಿನಲ್ಲಿ ಸಿಡಿಲು ಬಡಿದು 50 ಕುರಿಗಳೂ ಸಾವಿಗೀಡಾಗಿವೆ. ಹಳ್ಳದಲ್ಲಿ ಕೊಚ್ಚಿ ಹೋಗಿ ಅತಿ ಹೆಚ್ಚು ಸಾವುಗಳು ಸಂಭವಿಸಿದ್ದು. ವರುಣನಿಗೆ ಹಿಡಿ ಶಾಪವನ್ನು ಜನತೆ ಹಾಕುತ್ತಿದ್ದಾರೆ.

ಇದನ್ನೂ ಓದಿ : ನಿಗದಿಯಾಗದ ಕಬ್ಬಿನ ಎಫ್​​​.ಆರ್.ಪಿ ದರ ; ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳ ತಯಾರಿಗೆ ರೈತರ ಆಕ್ರೋಶ

ಇನ್ನು ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆ ಹಾನಿಯೂ ಸಂಭವಿಸಿದೆ. ಈಗಾಗಲೇ ಹೆಸರು, ಉದ್ದು ಸಂಪೂರ್ಣ ನೆಲ ಕಚ್ಚಿದ್ದರೆ, ಸೋಯಾಬಿನ್ ಸಹ ಹಾನಿಗೆ ತುತ್ತಾಗಿದೆ. ಅಧಿಕ ತೇವಾಂಶದಿಂದಾಗಿ ತೊಗರಿಯ ಬೆಳೆಯೂ ತೀವ್ರ ಹಾನಿಗೆ ತುತ್ತಾಗಿದೆ. ಮಳೆ ಬಂದಿದೆ ಎಂದು ರೈತ ಖುಷಿಪಡಲಾರದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ.

ಸದ್ಯ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆಯಾಗಿದ್ದು, ಇನ್ನೂ 48 ಗಂಟೆಗಳ ಕಾಲ ಭಾರಿ ಮಳೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಜಿಲ್ಲೆಯ ಜನತೆ ಮತ್ತಷ್ಟು ಕಂಗಾಲಾಗಿ ಕುಳಿತುಕೊಳ್ಳುವಂತಾಗಿದೆ. ಜೀವ ಬಿಗಿ ಹಿಡಿದು ಅಡ್ಡಾಡುವಂತಾಗಿದೆ.
Published by:G Hareeshkumar
First published: