ಹುಬ್ಬಳ್ಳಿ-ಧಾರವಾಡ ಜಿಲ್ಲೆಯ ರೈತರಿಗೆ ವರುಣಾಘಾತ; ಸಾವಿರಾರು ಎಕರೆ ಬೆಳೆ ಜಲಾವೃತ

ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟ‌ ಜೋರಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೂರಾರು ಎಕರೆ ಹೊಲದಲ್ಲಿ ಬೆಳೆದಿದ್ದ ಶೇಂಗಾ, ಹತ್ತಿ, ಹೆಸರು ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. 

ಹಳ್ಳದಲ್ಲಿ ಸಿಲುಕಿಕೊಂಡಿರುವ ಟಿಪ್ಪರ್‌.

ಹಳ್ಳದಲ್ಲಿ ಸಿಲುಕಿಕೊಂಡಿರುವ ಟಿಪ್ಪರ್‌.

  • Share this:
ಹುಬ್ಬಳ್ಳಿ (ಆಗಸ್ಟ್‌ 06); ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣನ ಆರ್ಭಟ ಜೋರಾಗಿದೆ. ಶೀತ ಗಾಳಿಯೊಂದಿಗೆ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಹಳೇ ಹುಬ್ಬಳ್ಳಿ, ಸುತಗಟ್ಟಿ,‌ ಕಿರೇಸೂರು, ಮಾವನೂರು, ಕಟ್ನೂರು, ನೂಲ್ವಿಯಲ್ಲಿ 37 ಮನೆಗಳ ಗೋಡೆಗಳು ಕುಸಿದಿವೆ ಎಂದು ತಿಳಿದುಬಂದಿದೆ.

ಉಣಕಲ್ಲ ಕೆರೆ ಸಂಪೂರ್ಣ ತುಂಬಿದ್ದು ಕೋಡಿ ಬಿದ್ದಿದೆ. ಮೈದುಂಬಿದ ಕೆರೆಗೆ ಸ್ಥಳೀಯರು ಬಾಗಿನ ಅರ್ಪಿಸಿದ್ದಾರೆ. ಅರಿಶಿನ, ಕುಂಕುಮ, ಹೂ, ಹಣ್ಣು ಸಮರ್ಪಿಸಿ ಪೂಜೆ ಸಲ್ಲಿಸಿದ್ದಾರೆ. ಧಾರವಾಡ ಜಿಲ್ಲೆಯ ರೈತರಿಗೆ ವರುಣಾಘಾತ ಜೋರಾಗಿಯೇ ತಟ್ಟಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಬೆಳೆ ಜಲಾವೃತಗೊಂಡಿದೆ. ಕಷ್ಟಪಟ್ಟು ಉತ್ತಿ ಬಿತ್ತಿದ್ದ ಹತ್ತಿ, ಹೆಸರು, ಶೇಂಗಾ, ಸೋಯಾಬಿನ್, ಗೋವಿನಜೋಳ, ಈರುಳ್ಳಿ ಬೆಳೆಗಳು ನೀರಲ್ಲಿ ಮುಳುಗಿವೆ.

ಹುಬ್ಬಳ್ಳಿ, ಧಾರವಾಡ, ಕುಂದಗೋಳ, ಕಲಘಟಗಿ, ನವಲಗುಂದ, ಅಣ್ಣಿಗೇರಿ, ಅಳ್ನಾವರ ತಾಲ್ಲೂಕುಗಳಲ್ಲಿ ಮಳೆಯ ಆರ್ಭಟ‌ ಜೋರಾಗಿದೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಹೀಗಾಗಿ ನೂರಾರು ಎಕರೆ ಹೊಲದಲ್ಲಿ ಬೆಳೆದಿದ್ದ ಶೇಂಗಾ, ಹತ್ತಿ, ಹೆಸರು ಬೆಳೆಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.  ಗಾಳಿ, ಮಳೆಯ ಹೊಡೆತಕ್ಕೆ ಗೋವಿನಜೋಳದ ಬೆಳೆ ನೆಲಕಚ್ಚಿದೆ. ವರುಣನ ರುದ್ರ ನರ್ತನಕ್ಕೆ ಅನ್ನದಾತರು ಕಂಗೆಟ್ಟಿದ್ದಾರೆ.

ಇದನ್ನೂ ಓದಿ : RBI Repo Rate - ಶೇ. 4ರ ರೆಪೋ ದರ ಉಳಿಸಿಕೊಂಡ ಆರ್​ಬಿಐ; ರಿವರ್ಸ್ ರೆಪೋದಲ್ಲೂ ಇಲ್ಲ ಬದಲಾವಣೆ

ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದ ಬಳಿ ಹರಿಯುವ ಬೆಣ್ಣೆ ಹಳ್ಳದಲ್ಲಿ ಟಿಪ್ಪರ್ ಸಿಲುಕಿಕೊಂಡಿದೆ.‌ ತುಂಬಿ ಹರಿಯುತ್ತಿರುವ ಹಳ್ಳ ದಾಟಲು ಟಿಪ್ಪರ್ ಚಾಲಕ ಹರಸಾಹಸ ಮಾಡುತ್ತಿದ್ದಾನೆ. ಆದರೆ ಸೇತುವೆ ಮೇಲೆಯೇ ಟಿಪ್ಪರ್ ಸಿಲುಕಿಕೊಂಡಿದೆ. ನಿರಂತರ ಮಳೆಯಿಂದಾಗಿ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದೆ. ಇಂಗಳಹಳ್ಳಿ ರಸ್ತೆ ಸೇತುವೆ ಸಂಪೂರ್ಣ ಜಲಾವೃತವಾಗಿದೆ. ಹಳ್ಳ ದಾಟುವ ದಾವಂತದಲ್ಲಿದ್ದ ಟಿಪ್ಪರ್ ಚಾಲಕ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದು ಇಂಗಳಹಳ್ಳಿ ಗ್ರಾಮಸ್ಥರು ನೆರವಿಗೆ ದಾವಿಸಿದ್ದಾರೆ.
Published by:MAshok Kumar
First published: