ಮೇ 14, 15ರಂದು ಕೊಡಗಿನಲ್ಲಿ ಭಾರೀ ಮಳೆ ಮುನ್ಸೂಚನೆ; ಮನೆ ಖಾಲಿ ಮಾಡುವಂತೆ ನಗರಸಭೆಯಿಂದ ನೋಟಿಸ್

ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೊಟೀಸ್ ನೀಡಿರುವುದು ಜನರಿಗೆ ಒಂದು ರೀತಿಯಲ್ಲಿ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಕೊರೋನಾದಿಂದ ಹೊರಗೆ ಓಡಾಡುವುದೇ ಸಾಧ್ಯವಿಲ್ಲ ಎನ್ನುವ ಸ್ಥಿತಿ ಇರುವ ಈ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದರೆ ಎಲ್ಲಿಗೆ ತಾನೆ ಹೋಗೋದು ಎನ್ನೋದು ಮತ್ತೊಂದು ಗಂಭೀರ ಪ್ರಶ್ನೆ.

ಅಪಾಯದ ಸ್ಥಿತಿಯಲ್ಲಿರುವ ಮಡಿಕೇರಿಯ ಮನೆಗಳು.

ಅಪಾಯದ ಸ್ಥಿತಿಯಲ್ಲಿರುವ ಮಡಿಕೇರಿಯ ಮನೆಗಳು.

  • Share this:
ಕೊಡಗು: ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದಲೂ ಮುಂಗಾರಿನಲ್ಲಿ ಸುರಿಯುವ ಭಾರೀ ಮಳೆಗೆ ಭೂ ಕುಸಿತ ಪ್ರವಾಹ ತಪ್ಪಿಲ್ಲ. ಆದರೆ ಈ ವರ್ಷ ಮಳೆಗಾಲಕ್ಕೂ ಮುನ್ನವೇ ವರುಣ ಆರ್ಭಟಿಸುವ ಮುನ್ಸೂಚನೆ ದೊರೆತ್ತಿದ್ದು, ಮಡಿಕೇರಿ ನಗರದ ಚಾಮುಂಡೇಶ್ವರಿ ನಗರ ಮತ್ತು ಇಂದಿರಾನಗರದ ನಿವಾಸಿಗಳು ತಾತ್ಕಾಲಿಕವಾಗಿ ಮನೆಗಳನ್ನು ಖಾಲಿ ಮಾಡಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮಡಿಕೇರಿ ನಗರ ಸಭೆ ನೊಟೀಸ್ ನೀಡಿದೆ. ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದ 128 ಕ್ಕೂ ಹೆಚ್ಚು ಮನೆಗಳು ಅಪಾಯದ ಸ್ಥಿತಿಯಲ್ಲಿವೆ. ಮೇ 14 ಮತ್ತು 15 ರಂದು ಚಂಡಮಾರುತ್ತದ ಪರಿಣಾಮವಾಗಿ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ದೊರೆತ್ತಿದೆ. ಹೀಗಾಗಿ ಜನರು ಕೂಡಲೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ನೋಟಿಸ್ ನೀಡಿದೆ.

ಅಷ್ಟೇ ಅಲ್ಲ ಕೊಡಗು ಜಿಲ್ಲೆಯ ವಿರಾಜಪೇಟೆ ಪಟ್ಟಣದ ಮಲೆತಿರಿಕೆ ಬೆಟ್ಟ, ಅಯ್ಯಪ್ಪ ಬೆಟ್ಟ ಮತ್ತು ನೆಹರು ನಗರ ಬೆಟ್ಟಗಳಲ್ಲಿ ಕಳೆದ ವರ್ಷದ ಭಾರೀ ಮಳೆಗೆ ಬಿರುಕು ಮೂಡಿತ್ತು. ಬಳಿಕ ಬೆಟ್ಟದ ಬಿರುಕುಗಳಿಗೆ ಕಾಂಕ್ರಿಟ್ ತುಂಬಿ ಅದರೊಳಕ್ಕೆ ನೀರು ಹೋಗದಂತೆ ಮಾಡಲು ಪ್ರಯತ್ನಿಸಲಾಗಿತ್ತು. ಆದರೆ ಭಾರೀ ಮಳೆ ಸುರಿದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆ ಇದೆ. ಹೀಗಾಗಿ ಇಂತಹ ಅಪಾಯದ ಸ್ಥಿತಿಯಲ್ಲಿರುವುದರಿಂದ ಈ ಬೆಟ್ಟಗಳಲ್ಲಿ ವಾಸಿಸುತ್ತಿರುವ ಕುಟುಂಬಗಳು ಅಲ್ಲಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಅಲ್ಲಿನ ನಿವಾಸಿಗಳಿಗೆ ನೊಟೀಸ್ ನೀಡಿದ್ದಾರೆ. ಆದರೆ ಮಡಿಕೇರಿ ನಗರ ಸಭೆ ಮತ್ತು ವಿರಾಜಪೇಟೆ ಪಟ್ಟಣ ಪಂಚಾಯಿತಿ ಅಧಿಕಾರಿಗಳ ಈ ನೊಟೀಸ್ ಗೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಮೇ ಅಂತ್ಯದೊಳಗೆ ವಿದ್ಯಾರ್ಥಿಗಳಿಗೆ ಪೂರ್ಣ ಆಹಾರ ಧಾನ್ಯ ವಿತರಣೆ; ಸಚಿವ ಸುರೇಶ್ ಕುಮಾರ್

ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರಗಳಲ್ಲಿ ಸಾಕಷ್ಟು ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಮೂರು ವರ್ಷಗಳಾಗುತ್ತಿವೆ. ಮನೆ ಕೊಡುವುದಾಗಿ ಹೇಳಿದ್ದ ಜಿಲ್ಲಾಡಳಿತ ಮತ್ತು ಸರ್ಕಾರ ಇದುವರೆಗೆ ಮನೆ ಹಂಚಿಕೆ ಮಾಡಿಲ್ಲ. ಅತ್ತ ನಮಗೆ ಪರ್ಯಾಯ ಮನೆ ಕೊಡುವವರೆಗೆ ಬಾಡಿಗೆ ಕೊಡುತ್ತೇವೆ ಎಂದು ಬಾಡಿಗೆ ಮನೆಗಳಿಗೆ ಕಳುಹಿಸಿದ್ದ ಸರ್ಕಾರ ಇದುವರೆಗೆ ಬಾಡಿಗೆಯ ಹಣವನ್ನು ಕೊಟ್ಟಿಲ್ಲ. ಸಾಧ್ಯವಾದಷ್ಟು ದಿನ ಕೂಲಿ ನಾಲಿ ಮಾಡಿ ಮನೆಗಳ ಬಾಡಿಗೆ ಕಟ್ಟಿದೆವು. ಇನ್ನು ಸಾಧ್ಯವಿಲ್ಲ ಎನ್ನುವಾಗ ವಾಪಸ್ ನಾವು ಇದೇ ಮನೆಗಳಿಗೆ ಬಂದು ವಾಸಿಸುತ್ತಿದ್ದೇವೆ ಎನ್ನುತ್ತಿದ್ದಾರೆ ಚಾಮುಂಡೇಶ್ವರಿ ನಗರದ ನಿವಾಸಿ ಕರೀಂ ಖಾನ್.

ನಗರ ಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ನೊಟೀಸ್ ನೀಡಿರುವುದು ಜನರಿಗೆ ಒಂದು ರೀತಿಯಲ್ಲಿ ಆತಂಕ ಸೃಷ್ಟಿಸಿದೆ. ಮತ್ತೊಂದೆಡೆ ಕೊರೋನಾದಿಂದ ಹೊರಗೆ ಓಡಾಡುವುದೇ ಸಾಧ್ಯವಿಲ್ಲ ಎನ್ನುವ ಸ್ಥಿತಿ ಇರುವ ಈ ಸಂದರ್ಭದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳಿ ಎಂದರೆ ಎಲ್ಲಿಗೆ ತಾನೆ ಹೋಗೋದು ಎನ್ನೋದು ಮತ್ತೊಂದು ಗಂಭೀರ ಪ್ರಶ್ನೆ. ಆದರೆ ಮಡಿಕೇರಿ ನಗರ ಸಭೆ ಆಯುಕ್ತ ರಾಮದಾಸ್, ಈ ಹಿಂದೆ ಹೇಗೆ ಜನರು ಪರ್ಯಾಯವಾಗಿ ನೆಂಟರಿಷ್ಟರ ಮನೆಗಳಲ್ಲಿ ಇರುತ್ತಿದ್ದರೋ ಹಾಗೆ ಕೆಲವು ದಿನಗಳ ಮಟ್ಟಿಗೆ ಇರುವುದು ಒಳ್ಳೆಯದು. ಕೋವಿಡ್ ಇರುವುದರಿಂದ ನಿರಾಶ್ರಿತರ ಶಿಬಿರಗಳನ್ನು ಮಾಡುವುದು ಕಷ್ಟದ ಕೆಲಸ ಎಂದಿದ್ದಾರೆ.
Published by:HR Ramesh
First published: