ರಕ್ಕಸ ಮಳೆಗೆ ತತ್ತರಿಸಿದ ಹುಕ್ಕೇರಿ ಪಟ್ಟಣ ; 3 ಗಂಟೆಯ ಮಳೆಗೆ ಬದುಕು ಅಯೋಮಯ 

ಇಂದು ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಶಾಸಕ ಉಮೇಶ್ ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕಳೆದುಕೊಂಡವರಿಗೆ ಪುರಸಭೆ ವತಿಯಿಂದ ಗುರುತಿಸಲಾಗಿರುವ 20 ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಸಿಕೊಡುವ ಭರವಸೆ ನೀಡಿದ್ದಾರೆ.

ರಸ್ತೆಯಲ್ಲಿ ಪರದಾಡುತ್ತಿರುವ ವಾಹನ ಸವಾರರು

ರಸ್ತೆಯಲ್ಲಿ ಪರದಾಡುತ್ತಿರುವ ವಾಹನ ಸವಾರರು

  • Share this:
ಚಿಕ್ಕೋಡಿ(ಅಕ್ಟೋಬರ್​. 12): ರಾಜ್ಯದಲ್ಲಿ ಎರಡು ದಿನ ಮಳೆಯಾಗಲಿದೆ ಎನ್ನುವ ಹವಾಮಾನ ಇಲಾಖೆಯ ಮುನ್ಸೂಚನೆಯನ್ನ ಎಲ್ಲರೂ ಆದರೆ ಆಗತ್ತೆ ಬಿಡು ಗುರು ಇದೆಂಥ ಮಳೆ ಅಂದುಕೊಂಡಿದ್ದರು. ಆದರೆ, ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುರಿದ ಮಳೆ ಈಗ ಬದುಕಿಗೆ ಭಾರವಾಗಿದೆ. ಹೊಳೆ ಇಲ್ಲದಿದ್ದರು ಬಂದ ಪ್ರವಾಹದಿಂದ ಮನೆಗಳು ಕುಸಿದಿವೆ. ಇತ್ತ ಆ ಪ್ರವಾಹದಲ್ಲಿ ಹೇಗೋ ಬದುಕಿದ್ದೇವಲ್ಲ ಅಂತ ಜನ ನಿಟ್ಟುಸಿರು ಬಿಟ್ಟಿದ್ದಾರೆ. ರಾಜ್ಯದಲ್ಲಿ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ, ಅದನ್ನ ಯಾರೂ ಸಹ ಅಷ್ಟು ಸಿರಿಯಸ್ ಆಗಿ ತೆಗೆದಿಕೊಂಡಿರಲಿಲ್ಲ. ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣದ ಲೆಕ್ಕಕ್ಕೆ ಬರದ ಹುಕ್ಕೇರಿಯ ಜನರೂ ಅಷ್ಟೇ. ಇದು ಸಾಮಾನ್ಯ ಮಳೆ ಅಂತ ಅಂದುಕೊಂಡಿದ್ದರು. ಆದರೆ, ನಿನ್ನೆ ಸಂಜೆ ಸತತ 3 ಗಂಟೆ ಸುರಿದ ಮಳೆಗೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ.

ಮಳೆಗೆ ಸಿಕ್ಕು ಜೀವ ಉಳಿಸಿಕೊಳ್ಳಲು ಕೆಲವರು ಪರದಾಡಿದ್ರೆ ಮನೆಗಳನ್ನ ಕಳೆದುಕೊಂಡ ಜನರ ಬದುಕು ಬೀದಿಗೆ ಬಿದ್ದಿದೆ. ಕೊರೋನಾ ಹೊಡೆತದ  ನಡುವೆ ಬದುಕು ಸಾಗಿಸುತ್ತಿದ್ದ ಬಡವರ ಮನೆಗಳು ಕುಸಿದು ಬದುಕೇ ಬೀದಿಗೆ ಬಿದ್ದಂತಾಗಿದೆ.

ಹುಕ್ಕೇರಿ ಪಟ್ಟಣ ಒಂದರಲ್ಲೇ 74 ಮಿಲಿ ಮೀಟರ್ ಮಳೆ ದಾಖಲಾಗಿದ್ದು, ಇತಿಹಾಸದಲ್ಲೆ ಇಂತಹ ಮಳೆ ಆಗಿಲ್ಲ. ಹೀಗಾಗಿ ಪಟ್ಟಣದಲ್ಲಿ 40 ಕ್ಕೂ ಹೆಚ್ಚು ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ ಹಳೆ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಕಿರಾಣಿ ಅಂಗಡಿ, ಪಾನ್ ಶಾಪ್, ಮೆಡಿಕಲ್ ಸ್ಟೋರ್ ಎಲ್ಲದರಲ್ಲೂ ನೀರು ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಲ್ಲಿ ಕೊಚ್ಚಿ ಹೋಗಿವೆ.

ಇನ್ನೂ ಭೀಕರ ಮಳೆಯಿಂದಾಗಿ ಗ್ಯಾರೇಜ್ ಶೆಡ್ ಬಿದ್ದು ಅಸ್ಲಂ ಅಲ್ಲಾಖಾನ್ ಎಂಬ ವ್ಯಕ್ತಿ ಸಹ ರಕ್ಕಸ್ ಮಳೆಗೆ ಬಲಿ ಯಾಗಿದ್ದಾನೆ. ಇತ್ತ ಮಳೆಯ ಹೊಡೆತಕ್ಕೆ ಕೊಚ್ಚಿ ಹೋಗುತ್ತಿದ್ದ ಅಜ್ಜ ನಜೀರ್ ಶೆಗಡಿ ಹಾಗೂ ಮೊಮ್ಮಗನನ್ನ ಸಾವಿನ ದವಡೆಯಿಂದ ಜನ ರಕ್ಷಣೆ ಮಾಡಿ ಹೊರ ತೆಗೆದಿದ್ದಾರೆ.

ಇಂದು ಮಳೆಯಿಂದ ಹಾನಿಗೊಳಗಾದ ಸ್ಥಳಗಳಿಗೆ ಶಾಸಕ ಉಮೇಶ್ ಕತ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಕಳೆದುಕೊಂಡವರಿಗೆ ಪುರಸಭೆ ವತಿಯಿಂದ ಗುರುತಿಸಲಾಗಿರುವ 20 ಎಕರೆ ಜಾಗದಲ್ಲಿ ಮನೆ ನಿರ್ಮಾಣ ಮಾಡಿಸಿಕೊಡುವ ಭರವಸೆ ನೀಡಿ ಮೃತ ಅಸ್ಲಂ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ ಇಂದಿರಾ ಕ್ಯಾಂಟೀನ್ ಯೋಜನೆಗೆ ಆರ್ಥಿಕ ಸಂಕಷ್ಟ ; ಗುತ್ತಿಗೆ ಪಡೆದವರಿಗೆ ಬಿಡುಗಡೆಯಾಗದ ಹಣ

ಒಟ್ಟಿನಲ್ಲಿ ಇಷ್ಟು ದಿನ ಬೆಳಗಾವಿಯಲ್ಲಿ  ಪ್ರವಾಹಗಳು ನೀರಿನಿಂದಾಗುವ ತೊಂದರೆಗಳು ಕೇವಲ ನದಿ ತೀರದ ಜನರಿಗೆ ಮಾತ್ರ ಸೀಮಿತವಾಗಿತ್ತು.‌ ಆದರೆ, ಇದೆ ಮೊದಲ‌ ಬಾರಿಗೆ ಹುಕ್ಕೇರಿಯಂತ ಪಟ್ಟಣಕ್ಕೆ ಸಾಕಷ್ಟು ತೊಂದರೆ ಆಗಿದ್ದು ನಾಲೆಗಳನ್ನ ಒತ್ತುವರಿ ಮಾಡಿ ಮಾರುಕಟ್ಟೆ ನಡೆಸಲು ಜಾಗ ಮಾಡಿಕೊಂಡಿರುವುದೇ ಇದಕ್ಕೆಲ್ಲ ಕಾರಣ ಅಂತ ಸ್ಥಳೀಯರು ಹೇಳುತ್ತಿದ್ದಾರೆ.

ಇನ್ನಾದರೂ ಪುರಸಭೆ ಅಧಿಕಾರಿಗಳು ಮತ್ತು ಶಾಸಕರು ಎಚ್ಚೆತ್ತು ಒತ್ತುವರಿ ತೆರವು ಮಾಡಿ ಮನೆ ಕಳೆದುಕೊಂಡವರಿಗೆ ಸರಿಯಾಗಿ ಪರಿಹಾರ ಒದಗಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ.
Published by:G Hareeshkumar
First published: