ಕೊಪ್ಪಳ(ಅಕ್ಟೋಬರ್. 13): ಕಳೆದ ಮೂರು ದಿನಗಳಿಂದ ಮಳೆ ಅವಾಂತರ ಅಷ್ಟಿಷ್ಟಲ್ಲ. ಕೆಲವು ಕಡೆ ಅಪಾರ ಪ್ರಮಾಣದ ವಿವಿಧ ಬೆಳೆ ಹಾನಿಯಾದರೆ, ಹಲವು ಕಡೆ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ ಸೇತುವೆಯೊಂದು ಕೊಚ್ಚಿ ಹೋಗಿವೆ. ಕೊಪ್ಪಳ ತಾಲೂಕಿನ ಕೊಳೂರು ಸೇತುವೆಯ ತಡೆಗೋಡೆ ಕುಸಿದು ಅಕ್ಕ ಪಕ್ಕದ ಸುಮಾರು 9 ಎಕರೆ ಜಮೀನು ಕುಸಿದು ರೈತರು ಕಣ್ಣೀರು ಹಾಕಿರುವ ಘಟನೆ ಮಾಸುವ ಮುನ್ನವೇ ಕುಷ್ಟಗಿ ತಾಲೂಕಿನ ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಭಾರೀ ಮಳೆಗೆ ಕೊಚ್ಚಿ ಹೋಗಿದ್ದು, ಕೊಪ್ಪಳ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಸುಮಾರು 50 ಹಳ್ಳಿಗಳ ಸಂಪರ್ಕ ಕಡಿತಗೊಂಡಂತಾಗಿದೆ. ಇದೇ ಸೇತುವೆ ಮೇಲೆ ಮಂಗಳವಾರ ನಸುಕಿನ ವೇಳೆ ವಿಜಯಪುರದಿಂದ ಬರುತ್ತಿದ್ದ ಬೈಕ್ ಸವಾರರು ಬೈಕ್ ಸಮೇತ ತೇಲಿಕೊಂಡು ಹೋದ ಘಟನೆ ನಡೆದಿದೆ.
ಇದನ್ನು ನೋಡಿದ ಸ್ಥಳೀಯರು ಪ್ರಾಣದ ಹಂಗು ತೊರೆದು ಹಗ್ಗದ ಸಹಾಯದಿಂದ ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ಆದರೆ ಬೈಕ್, ಮೊಬೈಲ್ ನೀರಿನಲ್ಲಿ ತೇಲಿ ಹೋಗಿವೆ. ದೋಟಿಹಾಳ ಸಮೀಪದ ಬನ್ನಟ್ಟಿ ಗ್ರಾಮದ ಬಳಿ ಹಳ್ಳಕ್ಕೆ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮಣ್ಣು ಕೊಚ್ಚಿ ಹೋಗಿದ್ದು , 50 ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ .
ಕ್ಯಾದಿಗುಂಪಾ ರಾಷ್ಟ್ರೀಯ ಹೆದ್ದಾರಿಯಿಂದ ಗ್ರಾಮದ ಮಾರ್ಗವಾಗಿ ತಾವರಗೇರಾ ಮೂಲಕ ಗಂಗಾವತಿ , ಸಿಂಧನೂರು , ರಾಯಚೂರು , ಲಿಂಗಸಗೂರು ಸೇರಿ ಇನ್ನಿತರ ನಗರಗಳಿಗೆ ಸಂಪರ್ಕ ಕಲ್ಪಿಸುವ ಜಿಲ್ಲಾ ಮುಖ್ಯ ರಸ್ತೆ ಇದಾಗಿದೆ . ಹಳ್ಳದ ಸೇತುವೆ ಕೊಚ್ಚಿ ಹೋಗುವುದರಿಂದ ಈ ಭಾಗದ ಜನರಿಗೆ ಕಿರಿಕಿರಿಯಾಗಿದೆ. ಕಳೆದ ನಾಲ್ಕು ದಿನಗಳಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಬಂಡರಗಲ್ ಮತ್ತು ಹೂಲಗೇರಿ ನಡುವಿನ ಸೇತುವೆ ಕುಸಿತದಿಂದ ಸಿಂಧನೂರು , ಗಂಗಾವತಿ , ಅಂಗಸಗೂರು , ರಾಯಚೂರು , ಕಂದಗಲ್ , ಹುನಗುಂದ , ಹನುಮಸಾಗರ , ಉಮಲಾಪೂರ , ರಾಮತ್ನಾಳ , ವಂದಾಲ , ಮುದ್ದಲಗುಂದಿ , ಕುದ್ದೂರು , ತೆಲ್ಲಿಹಾಳ , ಬಳೂಟಗಿ , ಶಿರಗುಂಪಿ , ಬನ್ನಣ , ಮೇಗೂರು ರಾವಣಕಿ , ಮಾಲೂರು , ಇಲಕಲ್ , ಕುಷ್ಟಗಿ ಸೇರಿದಂತೆ 50 ಕ್ಕೂ ಹೆಚ್ಚು ಗ್ರಾಮಗಳ ಜನರು 20 ಕಿ.ಮೀ, ಸುತ್ತು ಹೊಡೆದು ತಮ್ಮ ಗ್ರಾಮಗಳನ್ನು ಸೇರಬೇಕಿದೆ.
ಇದನ್ನೂ ಓದಿ : ಕೊರೋನಾ ಹಿನ್ನಲೆ ಸಾಂಪ್ರದಾಯಿಕ ದಸಾರದಲ್ಲಿ ಭಾರೀ ಬದಲಾವಣೆ; ವಜ್ರಮುಷ್ಠಿ ಕಾಳಕ್ಕೆ ಈ ಬಾರಿ ಬ್ರೇಕ್
ಸೇತುವೆ ಕಿತ್ತುಹೋಗಿರುವುದರಿಂದ ಕಳೆದ 2-3 ದಿನಗಳಿಂದ ಸರಕಾರಿ ಬಸ್ ಸಂಚಾರ ಇಲ್ಲವಾಗಿದೆ. ಆಸ್ಪತ್ರೆಗೆ ತೆರಳಲು ರಸ್ತೆ ಇಲ್ಲವಾಗಿದ್ದರಿಂದ ವಯೋವೃದ್ಧರು, ಅಂಗವಿಕಲರು ಗರ್ಭಿಣಿ, ಬಾಣಂತಿಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕ್ರಮಕ್ಕೆ ಮುಂದಾಗಬೇಕಾದ ಶಾಸಕರು , ಜಿ.ಪಂ.ಸದಸ್ಯರು, ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಗೆ ಜನರು, ಪ್ರಯಾಣಿಕರು ಛೀಮಾರಿ ಹಾಕುತ್ತಿದ್ದಾರೆ .
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ