ಚಾಮರಾಜನಗರ(ಸೆ. 08): ರಾಜ್ಯದಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿರುವುದು ಈಗಾಗಲೇ ಜಗಜ್ಜಾಗೀರಾಗಿದೆ. ಡ್ರಗ್ಸ್ನ ಮತ್ತೊಂದು ಭಾಗವಾದ ಗಾಂಜಾವನ್ನು ಅಕ್ರಮವಾಗಿ ಬೆಳೆದು ಅದನ್ನು ಸಾಗಿಸುವ ದಂಧೆ ತಮಿಳುನಾಡು ಹಾಗು ಕೇರಳ ರಾಜ್ಯಗಳ ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಆಗಾಗ್ಗೆ ನಡೆಯುತ್ತಲೇ ಇದೆ. ನಂಬಲರ್ಹ ಮೂಲಗಳ ಪ್ರಕಾರ ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆದ ಗಾಂಜಾ ಸೊಪ್ಪಿಗೆ ಬೆಂಗಳೂರಿನಲ್ಲಿ ಭಾರೀ ಬೇಡಿಕೆ ಇದೆ ಎನ್ನಲಾಗಿದೆ. ಇಲ್ಲಿನ ಗಾಂಜಾ ಸೊಪ್ಪಿಗೆ ಬೆಂಗಳೂರಿನಲ್ಲಿ ದೊಡ್ಡಬೆಟ್ಟದ ಸೊಪ್ಪು ಎಂದೇ ಕೋಡ್ವರ್ಡ್ ಇದೆಯಂತೆ.
ಶೇಕಡಾ 50 ಕ್ಕೂ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆಯ ಕಾಡಂಚಿನ ಪ್ರದೇಶಗಳಲ್ಲಿ ಗಾಂಜಾ ಬೆಳೆಯಲು ಪೂರಕ ವಾತಾವರಣ ಇದೆ. ಅದರಲ್ಲೂ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟದ ಆಸುಪಾಸಿನಲ್ಲೇ ಹೆಚ್ಚು ಪ್ರಕರಣಗಳು ಕಂಡು ಬಂದಿವೆ. ಕಳೆದ ಮೂರು ವರ್ಷಗಳ ಅಂಕಿ ಅಂಶಗಳನ್ನು ತೆಗೆದುಕೊಳ್ಳುವುದಾದರೆ 2018 ರಲ್ಲಿ ಅಕ್ರಮ ಗಾಂಜಾ ಬೆಳೆ ಹಾಗು ಸಾಗಾಣಿಕೆಗೆ ಸಂಬಂಧಿಸಿದಂತೆ 46 ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 11 ಪ್ರಕರಣಗಳು ದಾಖಲಾಗಿದ್ದು 127 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. 2020, ಅಂದರೆ ಈ ವರ್ಷ ಈವರೆಗೆ ಎಂಟು ಪ್ರಕರಣಗಳು ದಾಖಲಾಗಿದ್ದು 145 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದು ಪೊಲೀಸ್ ಇಲಾಖೆಯ ಅಂಶಗಳಾದರೆ, ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಹಲವಾರು ಪ್ರಕರಣಗಳನ್ನ ದಾಖಲಿಸಿದ್ದಾರೆ. ಪೊಲೀಸ್ ಹಾಗು ಅಬಕಾರಿ ಇಲಾಖೆಯಿಂದ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 119 ಪ್ರಕರಣಗಳು ದಾಖಲಾಗಿವೆ.
ಇದನ್ನೂ ಓದಿ: Mysuru Dasara 2020: ಕೊರೋನಾ ವಾರಿಯರ್ಸ್ನಿಂದ ಮೈಸೂರು ದಸರಾ ಉದ್ಘಾಟನೆ; ಅರಮನೆ ಒಳಗೆ ಮಾತ್ರ ಜಂಬೂ ಸವಾರಿ
ಕೆಲವರು ಕಾಡಿನೊಳಗೆ ಇರುವ ದೇವಸ್ಥಾನಗಳಿಗೆ ಹೋಗುವ ನೆಪದಲ್ಲಿ, ಮತ್ತೆ ಕೆಲವರು ಸೌದೆ, ಕಿರು ಅರಣ್ಯ ಉತ್ಪನ್ನ ಸಂಗ್ರಹಿಸುವ ನೆಪದಲ್ಲಿ ಹೋಗಿ ಅರಣ್ಯದಲ್ಲಿ ಗಾಂಜಾ ಗಿಡಗಳನ್ನು ಹಾಕಿ ಬೆಳೆಸುತ್ತಾರೆ ಎಂಬ ಮಾಹಿತಿ ಇತ್ತು. ನಾನು ಬಂದ ಮೇಲೆ ಈ ಬಗ್ಗೆ ಹದ್ದಿನ ಕಣ್ಣಿಟ್ಟು ಬಹುತೇಕ ನಿಯಂತ್ರಣ ಮಾಡಿದ್ದೇವೆ. ಗಾಂಜಾ ಬೆಳೆದು ಸಾಗಿಸುವ ವಿಚಾರನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ಪೊಲೀಸರೊಂದಿಗೆ ಜಂಟೀ ಕಾರ್ಯಾಚರಣೆ ನಡೆಸಿ ಸಂಪೂರ್ಣವಾಗಿ ಮಟ್ಟಲು ನಿರ್ಧರಿಸಿದ್ದೇವೆ ಎಂದು ಮಹದೇಶ್ವರ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ.
ಸಾಮಾನ್ಯವಾಗಿ ಇದು ಗಾಂಜಾ ಬೆಳೆಯಲು ಸೂಕ್ತ ಸಮಯವಾಗಿದೆ. ಏಪ್ರಿಲ್ ಮೇ ತಿಂಗಳಲ್ಲಿ ಗಾಂಜಾವನ್ನು ಒಣಗಿಸಿ ಪೌಡರ್ ಮಾಡಿ ಒಣಗಿಸಿ ಸಾಗಿಸುತ್ತಾರೆ ಎಂಬ ಮಾಹಿತಿ ಇದೆ. ಹಾಗಾಗಿ ಜಿಲ್ಲೆಯ ಎಲ್ಲಾ ಕಡೆ ಹೆಚ್ಚಿನ ಗಮನ ಇರಿಸಲಾಗಿದೆ. ಸೈಬರ್ ಎಕಾನಾಮಿಕ್ ಅಂಡ್ ನಾರ್ಕೋಟಿಕ್ ಅಫೆನ್ಸ್ ವಿಭಾಗದ ಸರ್ಕಲ್ ಇನ್ಸಪೆಕ್ಟರ್ ಅವರಿಗೆ ಗಾಂಜಾ ಬೆಳೆಯ ಬಗ್ಗೆ ವಿಶೇಷ ಗಮನಹರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಥಾಮಸ್. ಗಾಂಜಾ ದಂಧೆಯನ್ನು ಹತ್ತಿಕ್ಕಲು ಸದ್ಯದಲ್ಲೇ ಸಹಾಯವಾಣಿ ಸ್ಥಾಪಿಸುತ್ತಿದ್ದೇವೆ. ಸಾರ್ವಜನಿಕರು ಕರೆ ಮಾಡಿ ಮಾಹಿತಿ ನೀಡಬಹುದು. ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.
ಇದನ್ನೂ ಓದಿ: ಪಿಂಚಣಿ ಬಂದಿಲ್ಲ, ಬದುಕಲು ಆಗುತ್ತಿಲ್ಲ, ದಯಾಮರಣ ನೀಡಿ: ನಿವೃತ್ತ ಶಿಕ್ಷಕರಿಂದ ರಾಷ್ಟ್ರಪತಿಗೆ ಮನವಿ
ಇನ್ನೊಂದೆಡೆ ಕೆಲವರು ಗೌಪ್ಯವಾಗಿ ಗಾಂಜಾ ಬೆಳೆದು ಯಾರ ಕಣ್ಣಿಗು ಬೀಳದೆ ತಪ್ಪಿಸಿಕೊಂಡರೆ ಅಮಾಯಕ ರೈತರು ಹೆಚ್ಚಿನ ಹಣದಾಸೆಗೆ ಗಾಂಜಾ ಬೆಳೆದು ಪೊಲೀಸರಿಗೆ ಸಿಕ್ಕಿ ಬಿದ್ದು ಕೋರ್ಟ್ ಅಲೆಯುತ್ತಿದ್ದಾರೆ. ಸತತ ಬರಗಾಲದಿಂದ ತತ್ತರಿಸಿದರೂ ಇಲ್ಲಿನ ರೈತರು ಇಂತಹ ಕೆಲಸಕ್ಕೆ ಕೈ ಹಾಕುವುದಿಲ್ಲ. ಅದರೆ ನಿರುದ್ಯೋಗ ಸಮಸ್ಯೆ, ಸಮರ್ಪಕವಾಗಿ ದೊರೆಯದ ಸರ್ಕಾರದ ಸವಲತ್ತುಗಳು, ಬೆಳೆದ ಬೆಳೆಗೆ ಬೆಲೆ ಕುಸಿತ ಈ ಎಲ್ಲ ಕಾರಣಗಳು ಗಾಂಜಾ ಬೆಳೆಯಲು ರೈತರನ್ನು ಪ್ರೇರೇಪಿಸುತ್ತಿವೆ. ಈಗಾಗಲೇ ಆಹಾರ ಬೆಳೆ ಬೆಳೆದು ಕೈಸುಟ್ಟುಕೊಂಡು ನಷ್ಟ ಅನುಭವಿಸಿರುವ ರೈತರನ್ನು ಕೆಲವು ದಂಧೆಕೋರರು ಪುಸಲಾಯಿಸಿ ಗಾಂಜಾ ಬೆಳೆಯುವಂತೆ ಪ್ರೇರೇಪಿಸುತ್ತಿರುವ ಶಂಕೆ ಇದೆ. ಇಷ್ಟೇ ಅಲ್ಲದೆ ರೈತರು ಬೆಳೆಯುವ ಗಾಂಜಾವನ್ನು ತಾವೇ ಖರೀದಿಸುವುದಾಗಿ ಹೇಳಿ ಗಾಂಜಾ ಬೆಳೆಸುತ್ತಿದ್ದಾರೆ ಎಂಬ ಅನುಮಾನವೂ ಇದೆ.
ಇಲ್ಲಿ ಬೆಳೆದ ಗಾಂಜಾ ಸೊಪ್ಪನ್ನ ಒಣಗಿಸಿ ಬೆಂಗಳೂರು ಸೇರಿದಂತೆ ಹೊರ ರಾಜ್ಯಗಳಿಗೆ ಸಾಗಿಸುವ ದೊಡ್ಡ ಜಾಲವೇ ಇರುವುದರಲ್ಲಿ ಅನುಮಾನವೇ ಇಲ್ಲ. ಆದ್ರೆ ಸಿಕ್ಕಿಬಿದ್ದಿರುವುದು ಅಮಾಯಕ ರೈತರು ಮಾತ್ರ. ಜಿಲ್ಲೆಯಲ್ಲಿ ಬೆಳೆದ ಗಾಂಜಾ, ವ್ಯಸನಿಗಳಗೆ ಹೇಗೆ ತಲುಪುತ್ತದೆ, ಗಾಂಜಾ ಬೆಳೆಯಲು ಪ್ರೇರೇಪಿಸುತ್ತಿರುವುದು ಯಾರು, ಗಾಂಜಾ ನಿಖರವಾಗಿ ಎಲ್ಲೆಲ್ಲಿ ಸರಬರಾಜುತ್ತಿದೆ ಎಂಬುದು ಮಾತ್ರ ಇನ್ನು ನಿಗೂಢ. ಇದರ ಹಿಂದೆ ದೊಡ್ಡ ಮಾಫಿಯಾ ಇದೆ ಅನ್ನೋದ್ರರಲ್ಲಿ ಸಂಶಯವೇ ಇಲ್ಲ.
ವರದಿ: ಎಸ್.ಎಂ. ನಂದೀಶ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ