ಹಾಸನ; ಅವರು ಸಕಲೇಶಪುರ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್. ಜನರಿಗೆ ನ್ಯಾಯ ಕೊಡಿಸಬೇಕಾದ ಪೊಲೀಸ್ ಸಿಬ್ಬಂದಿಯೇ ಇಲ್ಲಿ ನ್ಯಾಯಕ್ಕಾಗಿ ಮಹಾತ್ಮ ಗಾಂಧೀಜಿ ಫೋಟೋ ಹಿಡಿದು ರಸ್ತೆ ಮಧ್ಯೆಯಲ್ಲಿ ಪ್ರತಿಭಟನೆಗೆ ಕುಳಿತಿದ್ದರು. ಹಿರಿಯ ಪೊಲೀಸ್ ಅಧಿಕಾರಿಗಳು ಎಷ್ಟೇ ಮನವಿ ಮಾಡಿದರೂ ಒಪ್ಪದೇ ಏಕಾಂಗಿಯಾಗಿ ಧರಣಿ ನಡೆಸಿದರು.
ನ್ಯಾಯಕ್ಕಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಭಾವಚಿತ್ರ ಹಿಡಿದು ನಡುರಸ್ತೆಯಲ್ಲಿ ಕುಳಿತಿರುವ ಹೆಡ್ ಕಾನ್ಸ್ ಟೇಬಲ್. ಧರಣಿ ಕುಳಿತಿರುವ ಪೊಲೀಸಪ್ಪನನ್ನು ನೋಡಲು ನಿಂತಿರುವ ನೂರಾರು ಜನ, ರಸ್ತೆಯಲ್ಲಿ ಕುಳಿತಿರುವ ಹೆಡ್ಕಾನ್ಸ್ ಟೇಬಲ್ ಸಮಾಧಾನ ಮಾಡುತ್ತಿರುವ ಸಹೋದ್ಯೋಗಿಗಳು. ಈ ದೃಶ್ಯ ಕಂಡು ಬಂದಿದ್ದು ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಲ್ಲಿ. ಹೀಗೆ ಮಹಾತ್ಮ ಗಾಂಧೀಜಿಯವರ ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಾ ಇರೋರ ಹೆಸರು ದಯಾನಂದ್. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರ ಪಕ್ಕದ ಅಪೋಲೋ ಮೆಡಿಕಲ್ ಮುಂಭಾಗ ತಮ್ಮ ಕಾರನ್ನು ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಮಾತ್ರೆ ತರಲು ಮೆಡಿಕಲ್ ಸ್ಟೋರ್ಗೆ ಹೋಗಿದ್ದಾರೆ. ಈ ವೇಳೆ ಅದೇ ದಾರಿಯಲ್ಲಿ ಬಂದ ತಹಸೀಲ್ದಾರ್ ಮಂಜುನಾಥ್ ಅವರು ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಕಾರಿನ ನಾಲ್ಕೂ ಚಕ್ರದ ಗಾಳಿ ತೆಗೆಯಲು ತಮ್ಮ ಡ್ರೈವರ್ ಗೆ ಹೇಳಿ ತೆಗೆಸಿದ್ದಾರೆ. ಇದನ್ನು ಕಂಡ ಹೆಡ್ಕಾನ್ಸ್ಟೇಬಲ್ ಮೆಡಿಕಲ್ನಿಂದ ಓಡಿ ಬಂದು, ತಹಸೀಲ್ದಾರ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.
ಇದನ್ನು ಓದಿ: ಆಹಾರದ ಅಭಾವ, ಸಾಕು ನಾಯಿಗಳನ್ನು ಹೋಟೆಲ್ಗಳಿಗೆ ನೀಡಿ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಆದೇಶ
ದಯಾನಂದ ಮಾತಿಗೆ ಪ್ರತಿಕ್ರಿಯೆ ನೀಡದೇ ತಹಸೀಲ್ದಾರ್ ಮಂಜುನಾಥ್ ಬೇರೆಡೆ ಕಳುಹಿಸಿದ್ದಾರೆ. ಇದಕ್ಕೆ ಆಕ್ರೋಶಗೊಂಡ ದಯಾನಂದ್ ತಮ್ಮ ಕಾರಿನ ಮುಂಭಾಗವೇ ಗಾಂಧೀಜಿ ಫೋಟೋ ಹಿಡಿದು ಪ್ರತಿಭಟನೆಗೆ ಕುಳಿತಿದ್ದರು. ತಹಸೀಲ್ದಾರ್ ಕಾರಿಗೆ ದಂಡ ಹಾಕಲಿ, ಆದರೆ ಚಕ್ರದ ಗಾಳಿ ಏಕೆ ತೆಗಿಸಬೇಕಿತ್ತು. ನನಗೆ ನ್ಯಾಯ ಬೇಕು ಅಂತಾ ಪ್ರತಿಭಟನೆ ನಡೆಸಿದರು. ಸಕಲೇಶಪುರ ಪಟ್ಟಣದ ಮುಖ್ಯ ರಸ್ತೆ ಕಿರಿದಾಗಿದ್ದು, ಕಾರು ನೋ ಪಾರ್ಕಿಂಗ್ ಜಾಗದಲ್ಲಿತ್ತು. ಹೀಗೆ ನಿಲ್ಲಿಸಿದರೆ ಟ್ರಾಫಿಕ್ ಜಾಮ್ ಆಗುತ್ತದೆ. ಎಷ್ಟೇ ಹೇಳಿದರೂ ಜನ ಕೇಳೋದಿಲ್ಲ ಅಂತಾ ಗಾಳಿ ಬಿಡಲಾಗಿದೆಯೆಂದು ತಹಶೀಲ್ದಾರ್ ಹೇಳಿದ್ದಾರೆ. ಜನರು ಮಾತ್ರ ರಕ್ಷಣೆ ನೀಡುವ ತಾಲೂಕು ಆಡಳಿತವೇ ಹೀಗೆ ಗೊಂದಲ ಮಾಡಿಕೊಂಡರೆ ಹೇಗೆ ಎನ್ನುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ